ಹುಮನಾಬಾದ್: ಮಕ್ಕಳ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಯಾವುದೇ ಮಕ್ಕಳು ಕೊಳವೆಬಾವಿ ಸೇರಿದಂತೆ ಮತ್ತಿತರ ಘಟನೆಗಳಿಂದ ಮರಣ ಹೊಂದಬಾರದು. ಇದಕ್ಕೆ ಪ್ರತಿಯೊಬ್ಬರು ಜಾಗೃತಿ ವಹಿಸುವುದು ಅವಶ್ಯ ಎಂದು ಡಿವೈಎಸ್ಪಿ ಅಮರನಾಥರೆಡ್ಡಿ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬುಧವಾರ ತೆರೆದ ಕೊಳವೆಬಾವಿ ಮುಚ್ಚುವುದು ಹಾಗೂ ಅದರಿಂದ ಮುಂದಾಗುವ ಅನಾಹುತ ತಪ್ಪಿಸುವ ಸಭೆ ಉದ್ದೇಶಿಸಿ ಮಾತನಾಡಿ, ಅನಾಹುತಗಳು ನಡೆಯದಂತೆ ಕಟ್ಟೆಚ್ಚರ ವಹಿಸುವುದು ಅವಶ್ಯವಾಗಿದೆ ಎಂದರು. ನೀರಿಲ್ಲದೆ ಕೊಳವೆಬಾವಿ ಹಾಗೆ ಬಿಡಲಾಗಿದೆ. ಕೂಡಲೇ ಅದನ್ನು ಮುಚ್ಚಿಸಿ ಕ್ರಮ ಜರುಗಿಸಬೇಕೆಂದರು.
ಪ್ರಕರಣ ದಾಖಲು: ತಾಲೂಕಿನಾದ್ಯಂತ ಒಂದು ವಾರದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಪುರಸಭೆಗಳ ಮುಖ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲ ತೆರೆದ ಕೊಳವೆ ಬಾವಿಗಳನ್ನು ಮುಚ್ಚಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಪಿಡಿಒ ಹಾಗೂ ಮುಖ್ಯಾಧಿಕಾರಿ ವಿರುದ್ಧ ಪ್ರಕರಣ ದಾಖಲಿಸಲಾಗುವುದೆಂದು ಹೇಳಿದರು.
ಸಭೆ ನಡೆಸಿ: ಗ್ರಾಪಂ ಅಧ್ಯಕ್ಷರ ಸದಸ್ಯರು ಹಾಗೂ ಎಲ್ಲ ಜನಪ್ರತಿನಿಧಿಗಳು ಸೇರಿ ಸಾರ್ವಜನಿಕರೊಂದಿಗೆ ಸಭೆ ನಡೆಸಿ ಜಾಗೃತಿ ಮೂಡಿಸಬೇಕು ಎಂದರು. ಸಿಪಿಐ ದತ್ತಾತ್ರೇಯ ಕಾರ್ನಡ್ ಮಾತನಾಡಿದರು. ಗ್ರಾಪಂ ಅಧ್ಯಕ್ಷರು, ಪುರಸಭೆ ಸದಸ್ಯರು ತಮ್ಮ ಸಲಹೆ ನೀಡಿದರು.
Advertisement