ಬೀದರ್: ಸಂಸ್ಥೆಯಲ್ಲಿ ಸ್ವಚ್ಛತೆ, ಸಮಯ ಪರಿಪಾಲನೆ, ಕಾರ್ಯಕ್ಷಮತೆ, ಪ್ರಾಯೋಗಿಕ ಕೌಶಲ್ಯ, ಸಿಬ್ಬಂದಿ ಹೊಂದಾಣಿಕೆಯಿಂದ ಸಂಸ್ಥೆ ಮುನ್ನಡೆಯುತ್ತಿರುವುದು ಸಂತಸ ತಂದಿದೆ ಎಂದು ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತ ನವೀನರಾಜ್ ಸಿಂಗ್ ತಿಳಿಸಿದರು.
ನಗರದ ಸರ್ಕಾರಿ ಐಟಿಐ ಕಾಲೇಜಿಗೆ ಬುಧವಾರ ಭೇಟಿ ನೀಡಿ, ಎಲ್ಲ ಯಾಂತ್ರಿಕ ವಿಭಾಗಗಳ ತರಬೇತಿ ಗುಣಮಟ್ಟ, ಯಂತ್ರೋಪಕರಣಗಳ ನಿರ್ವಹಣೆ, ಸಂಸ್ಥೆಯ ಸ್ವಚ್ಛತೆ, ವಿವಿಧ ಕಾಮಗಾರಿ ಹಾಗೂ ಸಿಬ್ಬಂದಿ ಕಾರ್ಯವೈಖರಿ ಪರಿಶೀಲಿಸಿ ಪ್ರಶಂಸೆ ವ್ಯಕ್ತಪಡಿಸಿದರು.
ಅನುದಾನ ಸದ್ಬಳಕೆ: ಇಲಾಖೆಯಿಂದ ಬಿಡುಗಡೆಯಾದ ಅನುದಾನದಲ್ಲಿ 10 ಲಕ್ಷದಲ್ಲಿ ಕಾಂಪೌಂಡ್, 3.1 ಲಕ್ಷದಲ್ಲಿ ಕೊಳವೆಬಾವಿ ಹಾಗೂ ಪೈಪ್‌ಲೈನ್, 5.65 ಲಕ್ಷ ವೆಚ್ಚದ ವಿದ್ಯುತ್ ವೈರಿಂಗ್ ಕಾಮಗಾರಿಗಳೆಲ್ಲ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಅನುದಾನ ಸದ್ಬಳಕೆಯಾಗುತ್ತಿರುವುದನ್ನು ಮನಗಂಡ ಆಯುಕ್ತರು, ಪ್ರಾಚಾರ್ಯ ಶಿವಶಂಕರ ಟೋಕರೆ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಪಂ ಬಿಆರ್‌ಜಿಎಫ್‌ನ 56.45 ಲಕ್ಷ ಅನುದಾನದಲ್ಲಿ ನಾಲ್ಕು ಕಾರ್ಯಾಗಾರ ಕೇವಲ ಆರು ತಿಂಗಳಿನಲ್ಲಿ ಪೂರ್ಣಗೊಳಿಸಿ ನೂರಾರು ಮಕ್ಕಳ ಕೌಶಲ್ಯಕ್ಕೆ ಕಟ್ಟಡ ಬಳಸುತ್ತಿರುವ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಸನ್ಮಾನ: ಸಂಸ್ಥೆಗೆ ಮೊದಲ ಬಾರಿಗೆ ಆಗಮಿಸಿ ಆಯುಕ್ತ ನವೀನರಾಜ್ ಸಿಂಗ್ ಅವರಿಗೆ ಪ್ರಾಚಾರ್ಯರು ಹಾಗೂ ಸಿಬ್ಬಂದಿ ಸನ್ಮಾನಿಸಿದರು.
ಕಾಲೇಜಿನ ಪ್ರಾಚಾರ್ಯ ಶಿವಶಂಕರ ಟೋಕರೆ ಸಂಸ್ಥೆಯ ಕೆಲವೊಂದು ಸಮಸ್ಯೆಗಳ ಕುರಿತು ವಿವರಿಸಿ, ಗ್ರೂಪ್ ಡಿ ಹುದ್ದೆ ಒಂದು ಖಾಲಿ ಇವೆ. ನಿವೇಶನಕ್ಕೆ ಕಾಂಪೌಂಡ್ ನಿರ್ಮಿಸಿರುವುದು ಅತ್ಯಂತ ಅವಶ್ಯಕವಾಗಿದೆ ಎಂದರು. ಇದಕ್ಕೆ ಕೂಡಲೇ ಪ್ರಥಮ ಹಂತದಲ್ಲಿ 10 ಲಕ್ಷ ಬಿಡುಗಡೆ ಮಾಡಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು.
ಜಿಪಂ ಸಿಇಒ ಉಜ್ವಲ್‌ಕುಮಾರ ಘೋಷ್ ಮಾತನಾಡಿದರು. ತರಬೇತಿ ಅಧಿಕಾರಿಗಳಾದ ಬಾಬು ರಾಜೋಳಕರ, ಪ್ರಶಾಂತ ಜ್ಯಾಂತಿಕರ್, ಸಿ.ಎನ್. ರಾವ, ಬಾಬು ಪ್ರಭಾಜಿ, ಜಗನ್ನಾಥ, ಯುಸೂಫ್‌ಮಿಯ್ಯ ಜೋಜನಾ, ರಮೇಶ ಪೂಜಾರಿ, ಶಿವಪುತ್ರಪ್ಪ, ಅಶೋಕ ಇದ್ದರು.
Advertisement