ಕನ್ನಡಪ್ರಭ ವಾರ್ತೆ, ಬೀದರ್, ಆ.6
ಜಿಲ್ಲೆಯಲ್ಲಿ ಭೀಕರ ಬರಗಾಲ ಛಾಯೆ ಆವರಿಸಿರುವುದರಿಂದ ಜಿಲ್ಲಾ ಪಂಚಾಯ್ತಿ ಸದಸ್ಯರ ನಿಯೋಗವು ಮುಖ್ಯಮಂತ್ರಿಗೆ ಭೇಟಿಯಾಗಿ ಬರಗಾಲದಲ್ಲಿ ರೈತರ ಕೈ ಹಿಡಿಯುವ ಕೆಲಸ ಮಾಡಬೇಕೆಂದು ಮನವಿ ಮಾಡಲು ಬುಧವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.
ಬುಧವಾರ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಸದಸ್ಯ ಕುಶಾಲ ಪಾಟೀಲ್ ಗಾದಗಿ ಅವರು ವಿಷಯ ಪ್ರಸ್ತಾವಿಸಿ, ಬರದ ಛಾಯೆಯಿಂದ ತತ್ತರಿಸಿದ ರೈತರಿಗೆ ನೆರವಾಗಲು ಪ್ರತಿ ಗ್ರಾಪಂಗೆ 50 ಲಕ್ಷ ಅನುದಾನ ನೀಡಿ ನೆರವಾಗಿ ರೈತರಿಗೆ ಕೆಲಸ ಕೊಡಬೇಕು. ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ಎಲ್ಲ ರೈತರ ಬೆಳೆಯ ಮರು ಸರ್ವೇ ಮಾಡಬೇಕೆಂದಾಗ ಸದನ ಸಹಮತ ಸೂಚಿಸಿತು.
ಮತ್ತೊಮ್ಮೆ ಸರ್ವೇ ಅನಿವಾರ್ಯ: ಮಾರ್ಚ್ ತಿಂಗಳಿನಲ್ಲಿ ಆಲಿಕಲ್ಲು ಮಳೆಯಾದಾಗ ಗ್ರಾಮ ಲೆಕ್ಕಿಗರು ಚುನಾವಣೆ ಕಾರ್ಯದಲ್ಲಿದ್ದರು. ಕೇವಲ 4 ದಿನದಲ್ಲಿ ಸರ್ವೇ ಮಾಡಬೇಕೆಂದು ಆದೇಶಿಸಿರುವುದರಿಂದ ಸರಿಯಾಗಿ ಸರ್ವೇ ಆಗಿಲ್ಲ. ಬಡ ರೈತರನ್ನು ಬಿಟ್ಟು ಸಿರಿವಂತರಿಗೆ ಸಹಾಯಧನ ಸಿಕ್ಕಿದೆ. ಆದ್ದರಿಂದ ಮರು ಸರ್ವೇ ಮಾಡಬೇಕೆಂದು ಆಗ್ರಹಿಸಿದರು.
ಈಗಾಗಲೇ ಜಿಲ್ಲೆಯಲ್ಲಿ ಬಿತ್ತನೆ ಮಾಡಿದ ರೈತರಿಗೆ ಬೆಳೆ ವಿಮೆಗೆ ಪಡೆಯಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ವಿಮೆ ಮಾಡಿಸುವ ದಿನಾಂಕವನ್ನು ವಿಸ್ತರಿಸಬೇಕು ಎಂದರು. ಈ ಸಂದರ್ಭದಲ್ಲಿ ಅಧ್ಯಕ್ಷೆ ನೀಲಮ್ಮ ವಡ್ಡೆ ಮಾತನಾಡಿ, ಯಾವ ರೈತರಿಗೆ ಅನ್ಯಾಯವಾಗಿದೆ ಅಂಥವರಿಗೆ ಅನುಕೂಲವಾಗಲು ಮತ್ತೊಮ್ಮೆ ಸರ್ವೇ ಮಾಡುವುದು ಅನಿವಾರ್ಯ. ಆದ್ದರಿಂದ ಆಲಿಕಲ್ಲು ಹಾನಿಯ ಕುರಿತು ಮರು ಸರ್ವೇ ಮಾಡಬೇಕು ಎಂದರು.
ಕೆಲ ಸದಸ್ಯರು ಒಂದೇ ಹೋಬಳಿಯಲ್ಲಿ ಮಾಡಿದ ಸರ್ವೆಯಲ್ಲಿ ತಪ್ಪುಗಳಾಗಿವೆ. ನಿಜವಾದ ರೈತರಿಗೆ ಅನುದಾನ ಸಿಕ್ಕಿಲ್ಲ ಎಂದು ಆರೋಪಿಸಿದ್ದಕ್ಕೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿ.ಟಿ. ಪುತ್ರ ಮಾತನಾಡಿ, ಆಲಿಕಲ್ಲು ಮಳೆಯಾಗಿದ್ದರಿಂದ ಒಂದೂರಲ್ಲಿ ಸಮಾನ ಮಳೆ ಬೀಳುತ್ತದೆ ಎನ್ನುವಂತಿಲ್ಲ. ಹಾಗಾಗಿ ಎಲ್ಲಿ ಶೇ.50ಕ್ಕೂ ಹೆಚ್ಚು ಹಾನಿಯಾಗಿದೆ ಅವರಿಗೆ ಮಾತ್ರ ಪರಿಹಾರ ನೀಡಲಾಗುತ್ತಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.
ವಿಮೆ ದಿನಾಂಕ ವಿಸ್ತರಿಸಿ: ಕಳೆದ 1972ರಲ್ಲಿ ಬಿದ್ದ ಬರಗಾಲದ ಸಮಯದಲ್ಲಿ ಪ್ರತಿಯೊಂದು ಗ್ರಾಮಸ್ಥರಿಗೆ ಕಲ್ಲು ಒಡೆಯುವ ಕೆಲಸ, ಸ್ಥಳದಲ್ಲಿಯೇ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಅದೇ ಮಾದರಿಯಲ್ಲಿ ರೈತರಿಗೆ ಕೆಲಸ ನೀಡುವಂತಾಗಬೇಕು. ಬರಗಾಲದ ಅನುದಾನದಿಂದ ರೈತರಿಗೆ ಸಹಾಯವಾಗಬೇಕೆಂದರು.
ಜಿಲ್ಲೆಯಲ್ಲಿ ಕೇವಲ ಶೇ.61ರಷ್ಟು ಬಿತ್ತನೆಯಾಗಿದೆ ಎಂದು ವರದಿ ನೀಡಿದರೆ ರೈತರಿಗೆ ಬೆಳೆ ವಿಮೆ ಸಿಗುವುದು ಕಷ್ಟ. ಅಲ್ಲದೇ ಕೃಷಿ ಇಲಾಖೆಯಿಂದ ಸರ್ವೇ ಆದ ನಂತರವು ರೈತರು ಬಿತ್ತನೆ ಮಾಡಿದ್ದಾರೆ. ಆದ್ದರಿಂದ ಬೆಳೆ ವಿಮೆಯ ದಿನಾಂಕ ವಿಸ್ತರಿಸಬೇಕೆಂದು ಸದಸ್ಯ ಬಾಬುರಾವ ಕಾರಬಾರಿ ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಕೃಷಿ ಇಲಾಖೆಯ ಅಧಿಕಾರಿಗಳು, ಈಗಾಗಲೇ ರಾಷ್ಟ್ರೀಯ ಬೆಳೆ ವಿಮೆಯ ಅವಧಿ ಜು.31ಕ್ಕೆ ಮುಗಿದಿದೆ. ಅವಧಿ ವಿಸ್ತರಣೆಗೆ ಸಂಬಂಧಿಸಿದಂತೆ ಇಲಾಖೆ ಕೇಂದ್ರ ಕಚೇರಿಗೆ ತಿಳಿಸಲಾಗುವುದು ಎಂದರು.
ತಾಪಂ, ಜಿಪಂ ಸಭೆ ಒಂದೇ ದಿನ ಹೇಗೆ?: ಜಿಪಂ ಸಾಮಾನ್ಯ ಸಭೆ ಇದ್ದರೂ ಕೂಡ ಬೀದರ್ ತಾಪಂ ಸಾಮಾನ್ಯ ಸಭೆ ಆಯೋಜಿಸಲಾಗಿದೆ. ಬೀದರ್ ತಾಲೂಕಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ ಯಾರಿಗೆ ಕೇಳಬೇಕು, ಉತ್ತರ ನೀಡುವವರು ಯಾರು ಎಂದು ಸದಸ್ಯ ಡಾ. ಶೈಲೇಂದ್ರ ಬೆಲ್ದಾಳೆ ಹಾಗೂ ಕುಶಾಲ ಪಾಟೀಲ್ ಗಾದಗಿ ಪ್ರಶ್ನಿಸಿದರು.
ಒಂದೇ ದಿನ ಸಭೆ ಕರೆಯಲು ಅನುಮತಿ ನೀಡಿದವರು ಯಾರು, ಆದ್ದರಿಂದ ಜಿಪಂ ಸಾಮಾನ್ಯ ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡಿ ಎಂದು ಜಿಪಂ ಅಧ್ಯಕ್ಷೆ ನೀಲಮ್ಮ ವಡ್ಡೆ ಸೂಚಿಸಿದರು.
ಅಧಿಕಾರಿಗಳ ಹಾಜರಾತಿ ಪಡೆದ ಸಾಮಾನ್ಯ ಸಭೆ: ಸಾಮಾನ್ಯ ಸಭೆಗೆ ಅನೇಕ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿದ್ದಾರೆ ಎಂದು ಸದಸ್ಯರು ಆರೋಪಿಸಿದ ಹಿನ್ನೆಲೆಯಲ್ಲಿ ಜಿಪಂ ಸಿಇಒ ಅವರ ಸೂಚನೆ ಮೇರೆಗೆ ಅಧಿಕಾರಿಗಳ ಹಾಜರಾತಿ ಪಡೆಯಲಾಯಿತು.
ವರದಿ ಸಂಗ್ರಹಿಸಲು ನಾನು ರೆಡಿ: ಸದಸ್ಯರಿಗೆ ನೀಡಿದ ವರದಿಯಲ್ಲಿ ಕೇವಲ 4-5 ಇಲಾಖೆಗಳ ಪ್ರಗತಿ ವರದಿ ಇದ್ದ ಕಾರಣ ಸಂಜು ಕಾಳೇಕರ ವಿಷಯ ಪ್ರಸ್ತಾಪಿಸಿ, ಜಿಪಂ ವ್ಯಾಪ್ತಿಗೆ ಎಷ್ಟು ಇಲಾಖೆಗಳು ಬರುತ್ತವೆ ಎಂದು ಮಾಹಿತಿ ನೀಡಿ ಎಂದು ಪ್ರಶ್ನಿಸಿದರು. ಆಗ ಕೆಂಡಾಮಂಡಲವಾದ ಸಿಇಒ ಉಜ್ವಲ್‌ಕುಮಾರ ಘೋಷ, ಯೋಜನಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ನೀವು ಮಾಡುವುದಿಲ್ಲ ಎಂದರೆ ನಾನು ಮಾಡುತ್ತೇನೆ ಎಂದರು.
ನನ್ನ ಮನೆಯಲ್ಲಿ ಯಾರು ಇಲ್ಲ, ನನಗೆ ಬೇರೆ ಕೆಲಸವೇ ಇಲ್ಲದಿರುವುದರಿಂದ ಎಲ್ಲ ಇಲಾಖೆಗಳ ಪ್ರಗತಿ ವರದಿ ಕೂಡ ನಾನೇ ತರಿಸಿಕೊಳ್ಳುತ್ತೇನೆ, ನೀವು ಏನು ಮಾಡಬೇಕಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನನಗೆ ಪ್ರತಿ ತಿಂಗಳ 5ರ ಒಳಗಾಗಿ ವರದಿ ಬರಬೇಕು, ಏಕೆ ಬಂದಿಲ್ಲ ಎಂದು ಪ್ರಶ್ನಿಸಿದರು. ಯಾರು ಇಲಾಖೆಯ ಪ್ರಗತಿ ವರದಿ ನೀಡಿಲ್ಲ ಅಂಥಹವರಿಗೆ ನೋಟಿಸ್ ನೀಡಬೇಕೆಂದು ಸಿಇಒ ಸೂಚಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ದೀಪಿಕಾ ರಾಠೋಡ, ತಾಪಂ ಅಧ್ಯಕ್ಷರು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
Advertisement