36 ಜಿಲ್ಲೆಗೆ ಮಳೆ ಹಾನಿ ಪರಿಹಾರ

Updated on: 

ಕ.ಪ್ರ. ವಾರ್ತೆ    ಬೀದರ್    ಜು. 25
ಆಲಿಕಲ್ಲು ಮಳೆಯಿಂದಾದ ಬೆಳೆ ಹಾನಿಗೆ ಪರಿಹಾರ ಬಿಡುಗಡೆಯಾದ ಸಮಾಧಾನಕರ ಸಂಗತಿ ಬಿಟ್ಟರೆ, ಜಿಲ್ಲೆಯಲ್ಲಿ ಹಾವು ಕಚ್ಚಿ ಅಸುನೀಗಿದವರ ಸಂಖ್ಯೆ ಹೆಚ್ಚಳ. ಪ್ರಸಕ್ತ ವರ್ಷ ಬಿತ್ತನೆ ಪ್ರಮಾಣ ಕುಂಠಿತ, ಮಳೆಗಾಲ ಅರ್ಧಗಳೆದರೂ ನೀಗದ ಕುಡಿವ ನೀರಿನ ಸಮಸ್ಯೆ ತಲೆದೋರಿದೆ.
- ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ(ಕೆಡಿಪಿ)ದ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ನೀಡಿದ ಪ್ರಗತಿ- ವಿಗತಿಯ ಸಾರಾಂಶವಿದು. ಪ್ರಸಕ್ತ ಮುಂಗಾರು ಮಳೆ ಅಭಾವ ಹಾಗೂ ವೈಪರೀತ್ಯದ ಕಾರಣ ಜಿಲ್ಲೆಯಲ್ಲಿ ಕೇವಲ ಶೇ.60ರಷ್ಟು ಬಿತ್ತನೆಯಾಗಿದೆ. ಬಿತ್ತಿದ ಬೀಜ ಮೊಳಕೆಯೊಡೆಯದ ಹಿನ್ನೆಲೆಯಲ್ಲಿ ರೈತರಿಗೆ ಮತ್ತೊಮ್ಮೆ ಬಿತ್ತನೆ ಬೀಜ ವಿತರಿಸಲು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿ.ಟಿ. ಪುತ್ರಾ ತಿಳಿಸಿದರು.
ಜಿಲ್ಲಾ ಕೃಷಿ ಇಲಾಖೆಯಿಂದ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಸಲು ಸರ್ವ ಕ್ರಮ ಕೈಗೊಳ್ಳಲಾಗಿದೆ. ಜೂನ್‌ನಲ್ಲಿ ಸರಾಸರಿ 60 ಮಿಮೀ, ಜುಲೈನಲ್ಲಿ ಸರಾಸರಿ 47 ಮಿಮೀ ಮಳೆಯಾಗಿದೆ. ಕಳೆದ ಸಾಲಿನಲ್ಲಿ ಇದೇ ಅವಧಿಯಲ್ಲಿ 3.39 ಲಕ್ಷ ಹೆಕ್ಟರ್ ಬಿತ್ತನೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಶೇ.60ರಷ್ಟು ಮಾತ್ರ ಬಿತ್ತನೆಯಾಗಿದೆ. ಕಳೆದ ಸಾಲಿನಲ್ಲಿ 43,500 ಕ್ವಿಂ. ಬಿತ್ತನೆ ಬೀಜವನ್ನು ವಿತರಿಸಲಾಗಿತ್ತು ಎಂದರು.
ಪ್ರಸಕ್ತ ವರ್ಷ 24,600 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಮಾಡಲಾಗಿತ್ತು. ಅದರಲ್ಲಿ 16 ಸಾವಿರ ಮೆಟ್ರಿಕ್ ಟನ್ ವಿತರಣೆಯಾಗಿದೆ. 8,500 ಮೆಟ್ರಿಕ್ ಟನ್ ದಾಸ್ತಾನಿದೆ. ಜಿಲ್ಲೆಯಲ್ಲಿ ಕೇವಲ 8 ಸಾವಿರ ಕ್ವಿಂ. ಬಿತ್ತನೆ ಬೀಜ ಉತ್ಪತ್ತಿ ಮಾಡಲಾಗುತ್ತಿದೆ.
36 ಕೋಟಿ ಪರಿಹಾರ ಬಿಡುಗಡೆ
ಜಿಲ್ಲೆಯಲ್ಲಿ ಆಲಿಕಲ್ಲಿ ಮಳೆಯಿಂದಾದ ಬೆಳೆ ಹಾನಿ ಪರಿಹಾರ ನೀಡಲು ಕೇಂದ್ರ- ರಾಜ್ಯ ಸರ್ಕಾರದಿಂದ 36 ಕೋಟಿ ಹಣ ಬಿಡುಗಡೆಯಾಗಿದೆ. ಶೇ.50ಕ್ಕಿಂತಲೂ ಹೆಚ್ಚು ಬೆಳೆ ಹಾನಿಯಾದ ರೈತರಿಗೆ ಪರಿಹಾರ ಪಟ್ಟಿ ತಯಾರಿಸಿ ನೀಡಲಾಗಿದೆ. ಜಿಲ್ಲೆಯಲ್ಲಿ 29 ಸಾವಿರ ರೈತರಿಗೆ ಪರಿಹಾರ ವಿತರಿಸಬೇಕಿದ್ದು, ಬ್ಯಾಂಕ್ ಖಾತೆಯ ಮೂಲಕವೇ 12 ಸಾವಿರ ರೈತರಿಗೆ ಪರಿಹಾರದ ವಿತರಿಸಲಾಗಿದೆ. ಉಳಿದ ರೈತರಿಗೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.


95 ಶಂಕಿತ ಮಲೇರಿಯಾ ಪ್ರಕರಣ ಪತ್ತೆ
ಜಿಲ್ಲೆಯಲ್ಲಿ 95 ಶಂಕಿತ ಮಲೇರಿಯಾ ಪ್ರಕರಣ ವರದಿಯಾಗಿದ್ದು, ಅವುಗಳಲ್ಲಿ 35 ಸಕಾರಾತ್ಮಕವಾಗಿವೆ. ಆದರೆ ಯಾವುದೇ ಸಾವು ಸಂಭವಿಸಿಲ್ಲ. ಒಂದು ಶಂಕಿತ ಡೆಂಘೀಗೆ ಪ್ರಕರಣ ವರದಿಯಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಜಿಲ್ಲೆಯಲ್ಲಿ ಹಾವು ಕಚ್ಚಿ 22 ಸಾವುಗಳು ಸಂಭವಿಸಿವೆ. ಹಾವು ಕಚ್ಚಿದರೆ ನೀಡಲಾಗುವ ಔಷಧ ಖರೀದಿಸುವಂತೆ ಆರೋಗ್ಯ ಕೇಂದ್ರದ ವೈದ್ಯರಿಗೆ ಇಲಾಖೆ ಅನುಮತಿ ನೀಡಿದೆ. ಹೆಚ್ಚು ಸಾವು ಸಂಭವಿಸಿರುವುದಕ್ಕೆ ಜನರಲ್ಲಿನ ಮೂಢನಂಬಿಕೆಗಳೂ ಕಾರಣವಾಗಿವೆ. ಅಲ್ಲದೆ ಹಾವು ಕಡಿತಕ್ಕೆ ಔಷಧ ಉತ್ಪಾದನೆ ಕ್ಷೀಣಗೊಂಡಿದೆ. ಒಂದು ಲಸಿಕೆಗೆ 700- 800 ಖರ್ಚಾಗುತ್ತದೆ ಎಂದು ಡಿಎಚ್‌ಒ ಡಾ. ಮದನಾ ವೈಜಿನಾಥ ಸಭೆಗೆ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಘೋಷ್, ಹಾವು ಕಡಿತದ ಲಸಿಕೆ ಖರೀದಿಸುವುದಕ್ಕೆ ಮೀನಮೇಷ ಎಣಿಸಬೇಡಿ. ಹಣದ ಸಮಸ್ಯೆಯಿದ್ದಲ್ಲಿ ಜಿಪಂ.ನಿಂದ ಭರಿಸಲಾಗುವುದು. ಕೂಡಲೇ ಅಗತ್ಯ ಲಸಿಕೆ ಖರೀದಿಸುವಂತೆ ಸೂಚಿಸಿದರು. ಆಗ ಡಿಎಚ್‌ಒ, ಜಿಲ್ಲೆಯಲ್ಲಿ ಖಾಸಗಿ ಕಂಪನಿಯೊಂದು ಹಾವು ಕಡಿತದ ಲಸಿಕೆಯನ್ನು ಅಗಾಧ ಪ್ರಮಾಣದಲ್ಲಿ ಶೇಖರಿಸಿದ್ದು, ಅದರಿಂದ ಖರೀದಿಸುವುದಾಗಿ ಹೇಳಿದರು. ಅಲ್ಲದೆ ಎಂಬಿಬಿಎಸ್ ವೈದ್ಯರ ಕೊರತೆಯಿದ್ದು, ನೇಮಕಕ್ಕೆ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.




ಮಳೆ ಸ್ಥಿತಿ-ಗತಿ
ಜುಲೈನಲ್ಲಿ ಬಸವಕಲ್ಯಾಣ ಹಾಗೂ ಭಾಲ್ಕಿ ತಾಲೂಕುಗಳಲ್ಲಿ ಉತ್ತಮ ಮಳೆಯಾದರೆ ಉಳಿದ ತಾಲೂಕುಗಳಲ್ಲಿ ಶೇ.65ರಷ್ಟು ಮಳೆ ಬಂದಿದೆ. ಒಟ್ಟಾರೆ ಜಿಲ್ಲೆಯಲ್ಲಿ ಸರಾಸರಿ 100 ಮಿಮೀ ಮಳೆಯಾಗಿದೆ. ಔರಾದ್ ತಾಲೂಕಿನಲ್ಲಿ ಶೇ.60ರಷ್ಟು ಮಳೆಯಾದರೆ, ಚಿಂತಾಕಿಯಲ್ಲಿ ಅತಿ ಕಡಿಮೆ ಮಳೆಯಾಗಿದೆ.
ಬಸವಕಲ್ಯಾಣ ಕೇಂದ್ರ ಸ್ಥಾನದಲ್ಲಿ ಚೆನ್ನಾಗಿ ಮಳೆಯಾದರೆ, ಹುಲಸೂರ, ಮುಡಬಿ, ರಾಜೇಶ್ವರ ಹೋಬಳಿಗಳಲ್ಲಿ ಅತಿ ಕಡಿಮೆ ಮಳೆಯಾಗಿದೆ. ಭಾಲ್ಕಿ ತಾಲೂಕಿನ ಕೇಂದ್ರ ಸ್ಥಾನದಲ್ಲಿ ಉತ್ತಮವಾಗಿ ಮಳೆಯಾದರೆ, ಹಾಲಹಳ್ಳಿ, ಹಲಬರ್ಗಾ, ಖಟಕ ಚಿಂಚೋಳಿಯಲ್ಲಿ ಕಡಿಮೆ ಪ್ರಮಾಣದ ಮಳೆಯಾಗಿದೆ.
ಬೀದರ್ ತಾಲೂಕಿನ ಕೇಂದ್ರ ಸ್ಥಾನ, ಮನ್ನಳ್ಳಿ, ಬಗದಲ್, ಕಮಠಾಣಾದಲ್ಲೂ ಉತ್ತಮ ಮಳೆ ಸುರಿದಿದೆ. ಆಣದೂರಲ್ಲಿ ಕಡಿಮೆ ಮಳೆಯಾಗಿದೆ. ಬೇಮಳಖೇಡಾ,
ನಿರ್ಣಾ, ಮನ್ನಾಎಖ್ಖೇಳ್ಳಿ ಹಾಗೂ ದುಬಲಗುಂಡಿಯಲ್ಲಿ ಚೆನ್ನಾಗಿ ಮಳೆ ಬಿದ್ದರೆ, ಚಿಟಗುಪ್ಪ, ಹಳ್ಳಿಖೇಡ ಹಾಗೂ ಮುಡಬಿಯಲ್ಲಿ ಕಡಿಮೆ ಮಳೆಯಾಗಿದೆ ಎಂದು ಸಂಬಂಧಿಸಿದ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.



ಮಹಿಳಾ ಜಾಗೃತಿ ಕಾರ್ಯಕ್ರಮ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಅಯೂಬ್ ಶರೀಫ್ ಅವರು ಜಿಲ್ಲೆಯ ಮಹಿಳೆಯರಿಗೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಗ್ರಾಮ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಚಿಂತಿಸಲಾಗಿದೆ. ಇದರ ಅನುಷ್ಠಾನಕ್ಕೆ ಕಾಲಾವಕಾಶ ಹಾಗೂ ಎಲ್ಲರ ಸಹಕಾರ ಬೇಕು ಎಂದರು.
ಜಿಲ್ಲೆಯ ಅಂಗನವಾಡಿ ಕಟ್ಟಡಗಳು, ಕಾರ್ಯಕರ್ತೆಯರ ಸಮಸ್ಯೆಗಳನ್ನು ಬಗೆಹರಿಸಲು ಯತ್ನಿಸಲಾಗುತ್ತಿದೆ. ಒಟ್ಟು 1,890 ಅಂಗನವಾಡಿಗಳ ಪೈಕಿ 1,162 ಸ್ವಂತ ಕಟ್ಟಡಗಳಿವೆ. ಕೆಲವು ಕಟ್ಟಡಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಉಳಿದ ಕಟ್ಟಡಗಳಿಗೆ ಬಾಡಿಗೆ ಪಾವತಿಸಲಾಗುತ್ತಿದೆ.
ಇತ್ತೀಚೆಗೆ ಅಂಗನವಾಡಿ ಕೇಂದ್ರವೊಂದರ ಅವ್ಯವಹಾರದ ಪ್ರಕರಣದ ಕಾರ್ಯಕರ್ತೆಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಇಲಾಖೆ ಪ್ರಧಾನ ಕಚೇರಿಗೆ ವರದಿ ಮಾಡಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು. ಜಲನಿರ್ಮಲ, ಜಲಾನಯನ, ರೇಷ್ಮೆ, ಶಿಕ್ಷಣ, ಪಶುಸಂಗೋಪನೆ ಇಲಾಖೆ ಪ್ರಗತಿ ಪರಾಮರ್ಶೆ ನಡೆಯಿತು. ಅಧ್ಯಕ್ಷೆ ನೀಲಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ದೀಪಿಕಾ, ಸಿಇಒ ಘೋಷ್ ಹಾಜರಿದ್ದರು.
ಹಾಸ್ಟೆಲ್‌ಗಳಿಗೆ ನೀರು ಪೂರೈಸಿ
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಕುಡಿವ ನೀರಿನ ಸಮಸ್ಯೆ ಪರಿಹರಿಸುವಂತೆ ಜಿಪಂ ಸಿಇಒ ಉಜ್ವಲ್‌ಕುಮಾರ್ ಘೋಷ್ ಸಂಬಂಧಿಸಿದ ಎರಡೂ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ತಾ. ಬಗದಲ್ ಮೊರಾರ್ಜಿ ವಸತಿ ಶಾಲೆಯಲ್ಲಿ ಮಕ್ಕಳಿಗೆ ವಿತರಿಸಿದ ಆಹಾರದಲ್ಲಿ ಹುಳು ಕಂಡು ಬಂದಿರುವ ವರದಿಯಾಗಿದೆ. ಸಂಬಂಧಿಸಿದ ಶಾಲೆಯ ಪ್ರಾಂಶುಪಾಲರಿಗೆ ಕೆಸಿಎಸ್‌ಆರ್ ನಿಯಮ 11ರ ಪ್ರಕಾರ ನೋಟಿಸ್ ನೀಡಿ. ಅದರಿಂದ ಸೇವಾ ಮುಂಬಡ್ತಿಗೆ ತಡೆಯುಂಟಾಗುತ್ತದೆ. ಅವರ ವಿರುದ್ಧ ಪ್ರಕರಣ ದಾಖಲಿಸಿ ತಮಗೆ ವರದಿ ನೀಡುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗೆ ಸೂಚಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com