ವಾರ ಗೈರಾದರೆ 'ಶಾಲೆ ಬಿಟ್ಟ ಮಗು'

Updated on: 

ಬೆಂಗಳೂರು: ಶಾಲೆಗೆ ನಿರಂತರ 7 ದಿನಗಳವರೆಗೆ ಗೈರುಹಾಜರಾದ ಮಗುವನ್ನು ಶಾಲೆಬಿಟ್ಟ ಮಗು ಎಂದು ಪರಿಗಣಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ.
ಶಾಲೆಗೆ 60 ದಿನಗಳವರೆಗೆ ಗೈರುಹಾಜರಾಗುವ ಮಕ್ಕಳಿಗೆ ಕಲಿಸುವುದು ಮತ್ತು ಶಾಲೆಗೆ ಕರೆತರುವುದು ಕಷ್ಟ. ಆದ್ದರಿಂದ 60 ದಿನಗಳ ಗೈರುಹಾಜರಿಗೆ ಬದಲಿಗೆ 7 ದಿನಗಳು ನಿರಂತರ ಗೈರುಹಾಜರಾದ ಮಗುವನ್ನು ಶಾಲೆಬಿಟ್ಟ ಮಗು ಎಂದು ಪರಿಗಣಿಸಲಾಗಿದೆ.
ಹಾಜರಾತಿ ಅಧಿಕಾರಿಗಳು ಶೈಕ್ಷಣಿಕ ವರ್ಷಾರಂಭದಲ್ಲಿ ಶಿಕ್ಷಣ ಸಂಯೋಜಕರ ವ್ಯಾಪ್ತಿ ಪ್ರದೇಶದಲ್ಲಿ ಬರುವ ಮಕ್ಕಳ ಗಣತಿ ಮಾಡಬೇಕು. 0-14 ವರ್ಷ ವಯಸ್ಸಿನ ಮಕ್ಕಳ ಮಾಹಿತಿಯನ್ನು ಶಾಲಾ ಮುಖ್ಯಶಿಕ್ಷಕರು ನಿರ್ವಹಿಸಿರುವುದನ್ನು ಖಾತರಿಪಡಿಸಿಕೊಳ್ಳಬೇಕಾಗಿದೆ.
ತಿಳಿವಳಿಕೆ ನೀಡಲು ಸೂಚನೆ: ಶಾಲಾ ವಯಸ್ಸಿನ ಮಕ್ಕಳ ಮಾಹಿತಿ ಕ್ರೋಢೀಕರಿಸಿ ಗ್ರಾಮಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಗ್ರಾಮ ಮತ್ತು ವಾರ್ಡ್ ಶಿಕ್ಷಣ ಮಾಹಿತಿಯನ್ನು 3 ತಿಂಗಳಿಗೊಮ್ಮೆ ಪರಿಶೀಲಿಸಿ, ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿ ಸಂಗ್ರಹಿಸಬೇಕು. ನಂತರ ಎಸ್ಡಿಎಂಸಿ ಸದಸ್ಯರು, ಪಾಲಕರು, ಗ್ರಾಪಂ ಸದಸ್ಯರುಮತ್ತು ಸ್ವಯಂ ಸೇವಾ ಸಂಸ್ಥೆಗಳಿಗೆ ತರಬೇತಿ ನೀಡಿ ಅರಿವು ಮೂಡಿಸಬೇಕು. 7 ದಿನ ಮಕ್ಕಳು ಗೈರಾದರೆ ಸಂಬಂಧಿಸಿದ ಸಂಯೋಜಕರಿಗೆ 3 ದಿನಗಳೊಳಗೆ ವರದಿ ನೀಡಲು ತಿಳಿವಳಿಕೆ ನೀಡಬೇಕೆಂದು ಹೇಳಲಾಗಿದೆ.
ಪೂರ್ಣ ವಿವರ ನೀಡಬೇಕು: ಮಗುವಿನ ಗೈರುಹಾಜರಿಗೆ ಕಾರಣ ತಿಳಿದು ಪಾಲಕರಿಗೆ ತಿಳಿವಳಿಕೆ ನೀಡಿ, ಶಾಲೆಗೆ ಬರುವಂತೆ ಮನವೊಲಿಸಬೇಕು. ನಂತರವೂ ಮಗು ಶಾಲೆಗೆ ಬಾರದಿದ್ದಲ್ಲಿ ಪೋಷಕರಿಗೆ ನೋಟೀಸು ನೀಡಿ ಸ್ವೀಕೃತಿ ಪಡೆಯಬೇಕು. ಎಲ್ಲಾ ಪ್ರಕ್ರಿಯೆ ನಂತರ ಮಗು ಶಾಲೆಗೆ ಬರದಿದ್ದರೆ ಪಾಲಕರನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಬೇಕು. ಸಮಿತಿ ಮುಂದೆ ಪಾಲಕರು ಹಾಜರಾಗದಿದ್ದರೆ ಪೊಲೀಸರ ನೆರವಿನೊಂದಿಗೆ ಸಮಿತಿ ಮುಂದೆ ಹಾಜರು ಪಡಿಸಿ ಪ್ರಕರಣ ಪೂರ್ಣ ವಿವರ ನೀಡಬೇಕಾಗಿದೆ.
ನಂತರ, ಸಮಿತಿ ಆದೇಶದಂತೆ ಮಗುವನ್ನು ವಶಕ್ಕೆ ಪಡೆದು ಸರ್ಕಾರಿ ಅಥವಾ ಅನುದಾನಿತ ವಿದ್ಯಾರ್ಥಿ ನಿಲಯ ಅಥವಾ ವಸತಿ ಶಾಲೆಯಲ್ಲಿ ಮಗುವನ್ನು ದಾಖಲಿಸಿ ಹಾಜರಾತಿ ಖಚಿತ ಪಡಿಸಬೇಕೆಂದು ಇಲಾಖೆ ಆದೇಶಿಸಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com