ಯಾದಗಿರಿ: 2013-14ನೇ ಸಾಲಿನ ಉದ್ಯೋಗ ಖಾತ್ರಿ ಕಾಮಗಾರಿ ನಿರ್ವಹಿಸಿದ ಕೂಲಿ ಕಾರ್ಮಿಕರ ಹಣ ಪಾವತಿ ಮಾಡಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಶಾಸಕ ಡಾ. ಎ.ಬಿ. ಮಾಲಕರಡ್ಡಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಜಿಲ್ಲೆಯ ಕೂಲಿ ಕಾರ್ಮಿಕರು ನಮ್ಮ ಹೊಲ ನಮ್ಮ ರಸ್ತೆ, ದನದ ಕೊಟ್ಟಿಗೆ, ಕುರಿದೊಡ್ಡಿ ನಿರ್ಮಾಣ ಯೋಜನೆಯಲ್ಲಿ ಸರ್ಕಾರದ ನಿರ್ದೇಶನದಂತೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸಿದ್ದಾರೆ. ಹೆಚ್ಚುವರಿ ಕ್ರಿಯಾ ಯೋಜನೆ ಹೊಸ ಉದ್ಯೋಗ ಚೀಟಿ ನೀಡಿಕೆಯಂತೆ ಗ್ರಾಮಸಭೆಗಳಲ್ಲಿ ಆಯ್ಕೆಯಾದ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಯಾವುದೋ ಒಂದು ಕಡೆ ಅವ್ಯವಹಾರವಾದ ಮಾತ್ರಕ್ಕೆ ಇಡೀ ಜಿಲ್ಲೆಯ ಕೂಲಿ ಕಾರ್ಮಿಕರಿಗೆ ಹಣ ನೀಡದೇ ತೊಂದರೆ ಮಾಡಲಾಗಿದೆ ಎಂದು ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ಕೂಲಿ ಕಾರ್ಮಿಕರು ಹೊಟ್ಟೆಗೆ ತಣ್ಣೀರು ಬಟ್ಟೆ: 2014ರ ಮಾರ್ಚ್ 31ಕ್ಕೆ ಯಾವುದೇ ಕೂಲಿ ಕಾರ್ಮಿಕರ ಹಣ ಪಾವತಿ ಮಾಡಿಲ್ಲ. ಮಾನವ ದಿನಗಳು ಹೆಚ್ಚಾಗಿವೆ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಿದ್ದು, ಹಿಂದಿನ ಜಿಪಂ ಸಿಇಒ ಅವರು ಏಪ್ರಿಲ್ 2014ರಲ್ಲಿ ಹಣ ಪಾವತಿಸಲಾಗುತ್ತದೆ ಎಂದು ಹೇಳಿದ್ದರು. ಆದರೆ ಈ ತನಕ ಯಾವುದೇ ಹಣ ಬಿಡುಗಡೆಯಾಗದೇ ಕೂಲಿ ನಿರ್ವಹಿಸಿದ ಕೂಲಿ ಕಾರ್ಮಿಕರು ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂತಾಗಿದೆ. ಕೆಲಸ ಮಾಡಿದ ಕಾರ್ಮಿಕರಿಗೆ ಹಣ ಪಾವತಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಮಾಲಕರಡ್ಡಿ ಹೇಳಿದ್ದಾರೆ. ನೈಜವಾಗಿ ಕೂಲಿ ಕಾರ್ಮಿಕರು ಕೆಲಸ ಮಾಡಿದ ಕಾಮಗಾರಿಗಳಿಗೆ ಎಂಐಎಸ್ ಮಾಡಿಸಿ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಈ ಸಂಬಂಧ ಮಾಲಕರಡ್ಡಿ ಆರ್ಡಿಪಿಆರ್ ಆಯುಕ್ತ ಮೌನೀಶ್ ಮೌದ್ಗಿಲ್ ಅವರಿಗೂ ಮನವಿ ಸಲ್ಲಿಸಿ, ನೈಜ ಕಾಮಗಾರಿಗಳಿಗೆ ಕೂಡಲೇ ಹಣ ಸಂದಾಯ ಮಾಡಬೇಕೆಂದು ಕೋರಿದ್ದಾರೆ.