

ಬೀದರ್: ಮಗುವಿನ ಮೇಲೆ ಅತ್ಯಾಚಾರವೆಸಗಿದ ಕಾಮುಕನಿಗೆ ಜೀವಿತಾವಧಿ ಜೈಲು ಶಿಕ್ಷೆ ರು.40 ಸಾವಿರ ದಂಡ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಸಂಜೀವ ಕುಮಾರ ಹಂಚಾಟೆ ಗುರುವಾರ ಮಹತ್ವದ ತೀರ್ಪು ನೀಡಿದ್ದಾರೆ.
ಜಿಲ್ಲೆಯಲ್ಲಿ ಮೊದಲ ಬಾರಿಗೆ ಪೋಕ್ಸೊ ಕಾಯ್ದೆಯಡಿ ಘೋಷಿಸಿದ ಸಜೆಯಿದು.
ಜಿಲ್ಲೆಯ ಔರಾದ್ ತಾಲೂಕಿನ ವಡಗಾಂವ್ ಸಮೀಪದ ಮೋನಾ ಶಂಕರ್ ತಾಂಡಾ ನಿವಾಸಿ ಸೋಪಾನ್ ಪೋಮಾ ರಾಠೋಡ್ ಶಿಕ್ಷೆಗೆ ಗುರಿಯಾದವನು. ಪೋಕ್ಸೊ ಕಾಯ್ದೆಯ ಸೆಕ್ಷನ್ 4 ಮತ್ತು 6 ಅಡಿಯಲ್ಲಿ ಪ್ರತ್ಯೇಕವಾಗಿ ತಪ್ಪಿತಸ್ಥ ಸೋಪಾನ್ ದೇಹದಲ್ಲಿ ಕೊನೆಯುಸಿರು ಇರುವವರೆಗೆ ಜೈಲು ಶಿಕ್ಷೆ ಅನುಭವಿಸಬೇಕು.
ಘಟನೆ ಹಿನ್ನೆಲೆ: ಏಳು ವರ್ಷದ ಬಾಲಕಿಯ ಮನೆಯಲ್ಲಿ ಯಾರೂ ಇಲ್ಲದನ್ನು ಅರಿತ ಕಾಮುಕ, ಕುರಿ ಕಾಯಲು ತೆರಳೋಣವೆಂದು ಪುಸಲಾಯಿಸಿ 2013, ಅ.31ರಂದು ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ಈ ಕುರಿತು ಸಂತಪೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಚಾರಣೆ ನಡೆಸಿದ ನ್ಯಾ. ಹಂಚಾಟೆ ಅವರು ಆರೋಪಿ ಸೋಪಾನ್‌ನನ್ನು ತಪ್ಪಿತಸ್ಥನೆಂದು ಗುರುತಿಸಿ ತೀರ್ಪಿತ್ತಿದ್ದಾರೆ. ರಾಮಚಂದ್ರ ಲಮಾಣಿ ಬಾಲಕಿಯ ಕುಟುಂಬದವರ ಪರವಾಗಿ ವಾದಿಸಿದ್ದರು.
Advertisement