ಗೋಕಾಕ: ವಿದ್ಯುತ್ ಪರಿವರ್ತಕ ವಿಚಾರವಾಗಿ ಗೋಕಾಕ ತಾಲೂಕಿನ ಮಹಾನವಮಿ ಗ್ರಾಮದ ಎರಡು ಗುಂಪುಗಳ ನಡುವೆ ಭಾನುವಾರ ರಾತ್ರಿ ನಡೆದ ಘರ್ಷಣೆ ವ್ಯಕ್ತಿಯೊಬ್ಬನನ್ನು ಬಲಿ ಪಡೆದಿದ್ದು, 9 ಮಂದಿ ಗಾಯಗೊಂಡಿದ್ದಾರೆ.
ಗ್ರಾಮದ ದುಂಡಪ್ಪ ಮಲ್ಲಪ್ಪ ಜಿರತೆ (40) ಹತ್ಯೆಗೀಡಾದಾತ. ಈತನನ್ನು ಕಲ್ಲು ಹೊಡೆದು ಕೊಲೆ ಮಾಡಲಾಗಿದೆ. ಗಾಯಗೊಂಡ 9 ಮಂದಿಯಲ್ಲಿ ಮೂವರ ತಲೆಗೆ ಗಂಭೀರ ಗಾಯವಾಗಿದೆ. ಇನ್ನಿತರರ ಕೈಕಾಲು ಮುರಿದಿವೆ. ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಗ್ರಾಮದ ನಾಯಕತ್ವಕ್ಕಾಗಿ ಜಿರತೆ ಮತ್ತು ಮುತಾಳೆ ಕುಟುಂಬಗಳ ನಡುವೆ ಮೊದಲಿನಿಂದಲೂ ಜಗಳವಿತ್ತು. ಹತ್ಯೆಗೀಡಾದ ದುಂಡಪ್ಪನ ಸಹೋದರ ಬಸಪ್ಪ ತನ್ನ ಹೊಲದಲ್ಲಿರುವ ವಿದ್ಯುತ್ ಪರಿವರ್ತಕ ಸುಟ್ಟಿದ್ದರಿಂದ ವಿದ್ಯುತ್ ತಂತಿಯಿಂದ ನೇರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದ. ಇದನ್ನು ಯಾರೋ ಕಿತ್ತುಹಾಕಿದ್ದರು. ಈ ವಿಚಾರವಾಗಿ ನಡೆದ ಗಲಭೆ ಕೊಲೆಯಲ್ಲಿ ಅಂತ್ಯಗೊಂಡಿದೆ.
Advertisement