ರುದ್ರಪ್ಪ ಆಸಂಗಿ
ಬಿಜಾಪುರ: ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ಕುಟುಂಬದಲ್ಲಿ ಬುಧವಾರ ಮದುವೆ ಸಂಭ್ರಮ! ಆದರೆ ಒಂದು ಸಣ್ಣ ನಿರ್ಲಕ್ಷ್ಯ, ಉದಾಸೀನ, ಬೇಜವಾಬ್ದಾರಿ ಹೆಜ್ಜೆ ಆ ಮನೆಯ ಅಷ್ಟೂ ಜನರು ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದೆ. ಇಡೀ ಕುಟುಂಬ ತಾವು ಮಾಡದ (?) ತಪ್ಪಿಗಾಗಿ ಪರಿತಪಿಸುವಂತಾಗಿದೆ.
ಇದು ಬಿಜಾಪುರದ ನಾಗಠಾಣ ಬಳಿಯ ದ್ಯಾಬೇರಿ ಗ್ರಾಮದಲ್ಲಿ ಪುಟ್ಟ ಬಾಲಕಿ ಅಕ್ಷತಾಳನ್ನು ಬಲಿ ತೆಗೆದುಕೊಂಡ ಕೊಳವೆ ಬಾವಿ ಮಾಲಿಕ ರಾಮಚಂದ್ರ ಹಳ್ಳಿ ಕುಟುಂಬದ ಪರಿಸ್ಥಿತಿ.
ರಾಮಚಂದ್ರ ಹಳ್ಳಿ ಪುತ್ರಿ ಲಕ್ಷ್ಮೀಯ ವಿವಾಹ ಜು.2ರಂದು ನಡೆಯಬೇಕಿತ್ತು. ತೋಟದ ಮನೆ ಪಕ್ಕದಲ್ಲೇ ಹಂದರ (ಚಪ್ಪರ) ಹಾಕಿ ಮದುವೆಯ ಮೊದಲಿನ ಕಾರ್ಯಕ್ರಮ ನಡೆಸಲು ನಿರ್ಧರಿಸಿದ್ದರು. ಮನೆಯಲ್ಲಿ ಎಲ್ಲ ಸಿದ್ಧತೆಗಳೂ ನಡೆದಿದ್ದವು. ಹೊಸ ಬಟ್ಟೆ ಖರೀದಿಸಲಾಗಿತ್ತು. ಆಮಂತ್ರಣ ಪತ್ರಿಕೆ ಮುದ್ರಿಸುವ ಕಾರ್ಯವೂ ನಡೆದಿತ್ತು. ಧವಸ, ಧಾನ್ಯ, ಚಿನ್ನದ ಆಭರಣಗಳ ತಯಾರಿಯೂ ನಡೆದಿತ್ತು.
ಮನೆಯ ಏಕೈಕ ಹೆಣ್ಣು ಮಗಳ ಮದುವೆ ಸಂಭ್ರಮ ತಿಂಗಳಿಂದಲೇ ಮನೆ ಮಾಡಿತ್ತು. ವಿಪರ್ಯಾಸವೆಂದರೆ ಅಕ್ಷತಾಳ ಕುಟುಂಬದವರೂ ಈ ಸಂಭ್ರಮದಲ್ಲಿ ಆಗಾಗ ಭಾಗಿಯಾಗಿದ್ದರು. ಆದರೆ ಇಂದು ಸಂಭ್ರಮದ ಬದಲು ಸೂತಕದ ಛಾಯೆ, ಮನೆಯಲ್ಲಿ ಓಲಗದ ಸದ್ದಿನ ಬದಲು ಆಕ್ರಂದನ, ಆನಂದ ಭಾಷ್ಪದ ಬದಲು ಕಣ್ಣೀರ ಧಾರೆ ಹರಿಯುತ್ತಿದೆ. ಮದುವೆ ಸಂಭ್ರಮದಲ್ಲಿರಬೇಕಾದ ವಧು ಲಕ್ಷ್ಮೀ (20) ಅನಾರೋಗ್ಯ, ಮಾನಸಿಕ ತೊಂದರೆಗೆ ಸಿಲುಕಿದ್ದಾಳೆ. ಯಾರನ್ನೂ ಮಾತನಾಡಿಸುವ ಸ್ಥಿತಿಯಲ್ಲೂ ಇಲ್ಲ.
ಮನೆಯಲ್ಲಿ ದುಡಿಯುವ ಯಾರೊಬ್ಬರೂ ಇಲ್ಲ. ಧಾರೆ ಎರೆಯಬೇಕಿದ್ದ ತಂದೆ, ದುಡಿದು ಹಾಕುತ್ತಿದ್ದ ಇಬ್ಬರು ಸಹೋದರರು ಕಾರಾಗೃಹದ ಸರಳಿನ ಹಿಂದಿದ್ದಾರೆ. ಇನ್ನಿಬ್ಬರು ಮಹಾರಾಷ್ಟ್ರಕ್ಕೆ ಗುಳೆ ಹೋಗಿದ್ದರೆ, ಮತ್ತೊಬ್ಬ ನಾಪತ್ತೆಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ರಾಮಚಂದ್ರ ಹಳ್ಳಿ, ಪುತ್ರರಾದ ಅನಿಲ, ತಿಪರಾಯರನ್ನು ಬಂಧಿಲಾಗಿದೆ. ಜು.5ರ ತನಕ ನ್ಯಾಯಾಂಗ ಬಂಧನ ವಿಧಿಸಿದ್ದು, ಜಾಮೀನು ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಮದುವೆ ಮುಂದೂಡಲಾಗಿದೆ.
ಅಕ್ಷತಾಳ ಕುಟುಂಬವೂ ಅಲ್ಲಿಲ್ಲ: ದುರಂತ ನಡೆದು ಮೂರ್ನಾಲ್ಕು ದಿನಗಳ ಕಾಲ ದ್ಯಾಬೇರಿಯಲ್ಲೇ ಇದ್ದ ಅಕ್ಷತಾಳ ತಂದೆ ಹನುಮಂತ, ತಾಯಿ ಸಾವಿತ್ರಿ ಹಾಗೂ ಅಕ್ಕ ಪೂಜಾ ಎಲ್ಲರೂ ತೋಟದ ಮನೆಗೆ ಬೀಗ ಜಡಿದು ಸ್ವಗ್ರಾಮ ಗುಲ್ಬರ್ಗ ಜಿಲ್ಲೆಯ ಜೇವರ್ಗಿ ತಾಲೂಕಿನ ವಸ್ತಾರೆಗೆ ತೆರಳಿದ್ದಾರೆ.
Advertisement