ಮುದ್ದೇಬಿಹಾಳ: ಇಲ್ಲಿನ ಪುರಸಭೆ ಸಿಬ್ಬಂದಿ ಕಚೇರಿ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದೆ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪುರಸಭೆ ನಾಲ್ವರು ಸದಸ್ಯರು ಮಂಗಳವಾರ ಬೆಳಗ್ಗೆ ಮುಖ್ಯಾಧಿಕಾರಿ ಕಚೇರಿಗೆ ಬೀಗ ಜಡಿದದ್ದೂ ಅಲ್ಲದೆ ನಿಗದಿತ ಸಮಯಕ್ಕಿಂತ 40 ನಿಮಿಷ ತಡವಾಗಿ ಬಂದ ಮುಖ್ಯಾಧಿಕಾರಿಯೊಂದಿಗೆ ವಾಗ್ವಾದ ನಡೆಸಿದರು.
ಬಿಸಿಲು ಹೆಚ್ಚಾಗಿರುವ ಕಾರಣ ಸರ್ಕಾರದ ಆದೇಶದ ಮೇರೆಗೆ ಬಿಜಾಪುರ ಜಿಲ್ಲೆ ಸಹಿತ ಉತ್ತರ, ಹೈದ್ರಾಬಾದ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಕಚೇರಿ ಸಮಯವನ್ನು ಬೆಳಗ್ಗೆ 10.30ರ ಬದಲಾಗಿ 8 ಗಂಟೆಗೆ ಬದಲಾಯಿಸಲಾಗಿದೆ. ಆದರೂ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಬರದೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಸದಸ್ಯರಾದ ಶರಣು ಬೂದಿಹಾಳಮಠ, ಮಹಿಬೂಬ ಗೊಳಸಂಗಿ, ಶಂಕರ ಕಡಿ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದರು.
8 ಗಂಟೆಗೂ ಮುನ್ನವೇ ಕಚೇರಿಗೆ ಬಂದಿದ್ದ 4 ಸಿಬ್ಬಂದಿಗಳನ್ನು ಹೊರಗೆ ಕರೆದು ಇಡೀ ಕಚೇರಿಗೆ ಬೀಗ ಹಾಕಲು ತೀರ್ಮಾನಿಸಿದ್ದ ಸದಸ್ಯರು, ಮುಖ್ಯಾಧಿಕಾರಿ ಎಂ.ಆರ್.ದಾಯಿ ಬಂದಿದ್ದನ್ನು ಕಂಡು ಬೀಗ ಹಾಕುವುದನ್ನು ಕೈಬಿಟ್ಟರು. ಪುರಸಭೆಯಲ್ಲಿ 22 ಸಿಬ್ಬಂದಿಗಳಿದ್ದಾರೆ.
ಈ ಸಂದರ್ಭ ಮೂವರು ಸದಸ್ಯರೊಂದಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಬಸನಗೌಡ ಪಾಟೀಲ ಅವರೂ ಸೇರಿಕೊಂಡು, ಮುಖ್ಯಾಧಿಕಾರಿಯನ್ನು ಕಚೇರಿ ಸಮಯದ ಕುರಿತು ಪ್ರಶ್ನಿಸಿದರು. ತಡವಾಗಿ ಬರುತ್ತಿರುವುದಕ್ಕೆ ಕಾರಣ ಕೇಳಿದರು. 18 ಸಿಬ್ಬಂದಿ ಗೈರು ಹಾಜರಿದ್ದು ಅವರ ವಿರುದ್ಧ ಏನು ಕ್ರಮ ಕೈಕೊಳ್ಳುತ್ತೀರಿ ಎಂದು ಕೇಳಿದರು.
ಬರುವಾಗ 10-15 ನಿಮಿಷ ಹೆಚ್ಚು ಕಡಿಮೆ ಆಗುತ್ತದೆ. ಮದ್ಯಾಹ್ನ 1.30 ಕ್ಕೆ ಕಚೇರಿ ಸಮಯ ಮುಗಿದರೂ ಹೆಚ್ಚುವರಿ ಕೆಲಸ ಮಾಡಿ ಸರಿಪಡಿಸುತ್ತೇವೆ ಎಂದು ಮುಖ್ಯಾಧಿಕಾರಿ ಹೇಳಿದರೂ ವ್ಯಗ್ರಗೊಂಡಿದ್ದ ಸದಸ್ಯರು ಕೇಳಲಿಲ್ಲ. ಸಮಯಕ್ಕೆ ಸರಿಯಾಗಿ ಬರದೆ ಇರುವವರ ವಿರುದ್ಧ ಕ್ರಮ ಕೈಕೊಳ್ಳಲೇಬೇಕು ಎಂದು ಒತ್ತಾಯಿಸಿದರು.
ಒಂದು ಹೆಜ್ಜೆ ಮುಂದೆ ಹೋದ ಒಂದಿಬ್ಬರು ಸದಸ್ಯರು ಸಮಯಕ್ಕೆ ಸರಿಯಾಗಿ ಬರದ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹಾಜರಿ ಪುಸ್ತಕದಲ್ಲಿ ಸಮಯಕ್ಕೆ ಸರಿಯಾಗಿ ಬರದೆ ಇರುವ ಸಿಬ್ಬಂದಿ ಎದುರು ಸಿಎಲ್ ಹಾಕಲು ಮುಖ್ಯಾಧಿಕಾರಿ ಮುಂದಾದಾಗ ತಡೆದ ಸದಸ್ಯರು, ಗೈರು ಹಾಜರಿ ಹಾಕುವಂತೆ ಪಟ್ಟು ಹಿಡಿದರು. ಇಲ್ಲದಿದ್ದರೆ ಪುರಸಭೆಯ ಮುಂದೆ ಕುಳಿತು ಪ್ರತಿಭಟಿಸುವ ಎಚ್ಚರಿಕೆ ನೀಡಿದರು. ಸದಸ್ಯರ ಮಾತಿಗೆ ಮಣಿದ ಮುಖ್ಯಾಧಿಕಾರಿ ಹಾಜರಿದ್ದವರನ್ನು ಹೊರತುಪಡಿಸಿ ಗೈರಹಾಜರಾದವರ ಹೆಸರಿನ ಮುಂದೆ ಗೈರು ಹಾಜರು ಎಂದು ಬರೆದು ಪರಿಸ್ಥಿತಿ ತಿಳಿಗೊಳಿಸಿದರು.
Advertisement