ಬಸವನಬಾಗೇವಾಡಿ: ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯ ನಿರ್ದೇಶನದ ಅನ್ವಯ ರಾಜ್ಯದಲ್ಲಿ ಶಿಕ್ಷಣ ಇಲಾಖೆಯ ಕೇಂದ್ರಿಕೃತ ದಾಖಲಾತಿ ಘಟಕವು ಇದೇ ಮೊದಲ ಬಾರಿಗೆ ನಡೆಸುತ್ತಿರುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ (ಟಿಇಟಿ) ಅರ್ಜಿ ತುಂಬಲು, ಶುಲ್ಕ ಪಾವತಿಸಲು ವಿದ್ಯಾರ್ಥಿಗಳು ಹರಸಾಹಸ ಪಡುತ್ತಿದ್ದಾರೆ.
ಆನ್‌ಲೈನ್ ಮೂಲಕ ಅರ್ಜಿ ಭರ್ತಿ ಮಾಡಿ ಶುಲ್ಕ ಪಾವತಿಸಲು ಕೇವಲ 13 ದಿನ ಕಾಲಾವಕಾಶ ನೀಡಿದ್ದರಿಂದ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ಈ ಪರೀಕ್ಷೆಯಲ್ಲಿ ಉತ್ತೀರ್ಣವಾದ ಬಳಿಕ ಕೇಂದ್ರೀಕೃತ ಘಟಕ ನಡೆಸುವ ಸಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಬಹುದಾಗಿದೆ. ಪಟ್ಟಣ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಿಂದ ದಿನನಿತ್ಯವೂ ನೂರಾರು ಅಭ್ಯರ್ಥಿಗಳು ಬೆಳಗ್ಗೆಯಿಂದಲೇ ಅರ್ಜಿ ಸಲ್ಲಿಸಲು ಇಂಟರನೆಟ್ ಸೆಂಟರ್‌ಗಳ ಮುಂದೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎದುರು ಶುಲ್ಕ ಪಾವತಿಸಲು ಸರದಿಯಲ್ಲಿ ನಿಲ್ಲಬೇಕಾಗಿದೆ.
ನಿತ್ಯವೂ ಸರ್ವರ್ ಕೈಕೊಡುತ್ತಿರುವುದರಿಂದ ಅಭ್ಯರ್ಥಿಗಳು ಅರ್ಜಿ ತುಂಬಲು ಪ್ರಯಾಸ ಪಡಬೇಕಾಗಿದೆ. ಅಲ್ಲದೇ ಇದೇ ಪ್ರಥಮ ಬಾರಿಗೆ ಪರೀಕ್ಷೆ ನಡೆಸುತ್ತಿರುವುದರಿಂದ ಪರೀಕ್ಷೆ ಬಗ್ಗೆ ಅಭ್ಯರ್ಥಿಗಳಲ್ಲಿ ಅನೇಕ ಗೊಂದಲಗಳಿವೆ. ಒಮ್ಮೆ ಅರ್ಜಿ ಸಲ್ಲಿಸಿ ಎಸ್‌ಬಿಎಂ ಬ್ಯಾಂಕ್‌ನಲ್ಲಿ ಶುಲ್ಕ ಪಾವತಿಸಿ ಮತ್ತೆ ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಪೂರ್ಣಗೊಳಿಸಬೇಕು. ಆದರೆ ಪದೇ ಪದೇ ಸರ್ವರ್ ಕೈ ಕೊಡುತ್ತಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ.
ಸರ್ಕಾರ ಟಿಇಟಿ ಪರೀಕ್ಷೆ ಅರ್ಜಿ ಸಲ್ಲಿಸಲು ಇನ್ನು ಹೆಚ್ಚು ಕಾಲಾವಕಾಶ ನೀಡಬೇಕು. ಇಲ್ಲವೇ ಈ ಪರೀಕ್ಷೆಯನ್ನೇ ರದ್ದುಪಡಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ತಾಳಿಕೋಟೆ: ಟಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕಳೆದೆರಡು ದಿನಗಳಿಂದ ಸರ್ವರ್ ಸಿಗದೆ ಆಕಾಂಕ್ಷಿಗಳು ಪರದಾಡುತ್ತಿದ್ದಾರೆ.
ಆಕಾಂಕ್ಷಿಗಳು ಅರ್ಜಿ ಭರ್ತಿ ಮಾಡುವ ಸಂದರ್ಭದಲ್ಲಿ ಸರ್ವರ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಅರ್ಜಿ ಸಲ್ಲಿಸಲು ಆಗುತ್ತಿಲ್ಲ. ಎಲ್ಲಾ ಮಾಹಿತಿ ತುಂಬಿ ಕೇವಲ ಪೋಟೋ ಹಾಗೂ ಸಹಿ ಅಪಲೋಡ್ ಮಾಡಿದದರೂ ಸಹಿತ ಮತ್ತೆ ಅಪಲೋಡ ಮಾಡಿ ಎಂದು ಹೇಳುತ್ತಿದೆ.
ಮಹಿಳಾ ಆಕಾಂಕ್ಷಿಗಳು ಸಹಿತ ರಾತ್ರಿಯೆಲ್ಲಾ ಇಂಟರನೆಟ್ ಸೆಂಟರ್‌ಗಳ ಮುಂದೆ ಕಾದು ಕುಳಿತುಕೊಂಡಿರುವ ದೃಶ್ಯ ಸಾಮಾನ್ಯವಾಗಿದೆ.
Advertisement