ನಿಯಮ ತೂರಿ ತರಾತುರಿಯಲ್ಲಿ ಗುದ್ದಲಿಪೂಜೆ

Updated on: 



ಚಾಮರಾಜನಗರ: ಸುವರ್ಣ ಗ್ರಾಮ ಯೋಜನೆಯಡಿಯಲ್ಲಿ ಆಯ್ಕೆಯಾಗಿರುವ ತಾಲೂಕಿನ ಮಲೆಯೂರು ಹಾಗೂ ಭುಜಗನಪುರಕ್ಕೆ ಇನ್ನೂ ಯಾವುದೇ ಯೋಜನೆ ರೂಪಿಸಿಲ್ಲ. ಅನುದಾನವೂ ಬಿಡುಗಡೆಯಾಗಿಲ್ಲ. ಆದರೂ ಗುದ್ದಲಿ ಪೂಜೆ ನಡೆದಿದೆ ಎಂದು ಮಂಗಳವಾರ ನಡೆದ ತಾಪಂ ಕೆಡಿಪಿ ಸಭೆಯಲ್ಲಿ ಅಧ್ಯಕ್ಷ ಬಸವಣ್ಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮಂಗಳವಾರ ನಡೆದ ತಾಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಭೂಸೇನಾ ಇಲಾಖೆಯ ಅಧಿಕಾರಿಗಳು ಪ್ರಗತಿಯ ವರದಿ ಮಂಡಿಸುತ್ತಿದ್ದಾಗ, ಸುವರ್ಣ ಗ್ರಾಮ ಯೋಜನೆಯಡಿಯಲ್ಲಿ ಆಯ್ಕೆಯಾಗಿರುವ ಮಲೆಯೂರು ಹಾಗೂ ಭುಜಗನಪುರ ಗ್ರಾಮದ ಅಭಿವೃದ್ಧಿಗೆ ಶಾಸಕರಿಂದ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದಾಗ ಕೆಂಡಾಮಂಡಲವಾದ ಅಧ್ಯಕ್ಷ ಬಸವಣ್ಣ ಅವರು ಇದೊಂದು ರಾಜಕೀಯ ಗಿಮಿಕ್. ಯೋಜನೆ ರೂಪಿಸದೆ, ಅನುದಾನವಿಲ್ಲದೆ ಯಾವುದೋ ರಾಜಕೀಯ ಒತ್ತಡಕ್ಕೆ ಮಣಿದು ಯಾಕೆ ಗುದ್ದಲಿಪೂಜೆ ನೆರವೇರಿಸಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ಅನುದಾನ ಬಿಡುಗಡೆಯಾಗಿರುವ ಕಾಮಗಾರಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ನೀವು, ರಾಜಕೀಯ ಒತ್ತಡಕ್ಕೆ ಮಣಿದು ಈ ರೀತಿ ಮಾಡಿರುವುದು ಸರಿಯಲ್ಲ. ವರ್ಷದ ಲೆಕ್ಕದ ಅವಧಿ ಮುಗಿಯುತ್ತ ಬಂದಿದ್ದು, ಬಿಡುಗಡೆಯಾಗಿರುವ ಹಣ ಹಿಂದಿರುಗಿ ಹೋಗದ ಹಾಗೆ ಯೋಜನೆ ರೂಪಿಸಿ, ಅಭಿವೃದ್ಧಿ ಕಾಮಗಾರಿ ಕೈಗೆತ್ತಿಗೊಳ್ಳಬೇಕು. ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ಮುಂದಿನ ಕೆಡಿಪಿ ಸಭೆಗೆ ಬರುವಾಗ ಸರಿಯಾದ ದಾಖಲಾತಿಯೊಂದಿಗೆ ಹಾಜರಾಗುವಂತೆ ತಿಳಿಸಿದರು.
ಗಿರಿಜನರಿಗೆ ಪಡಿತರ ಚೀಟಿ ವಿತರಿಸಿ: ತಾಲೂಕಿನ ಕುಂಟಗುಡಿಯಲ್ಲಿ ವಾಸಿಸುತ್ತಿರುವ ಗಿರಿಜನರಿಗೆ ಸರಿಯಾಗಿ ಪಡಿತರ ಚೀಟಿ ವಿತರಿಸಿಲ್ಲ. ತಕ್ಷಣ ಅಲ್ಲಿಗೆ ಹೋಗಿ ಪರಿಶೀಲಿಸಿ ಜನರಿಗೆ  ಪಡಿತರ ಚೀಟಿ ವಿತರಿಸಿ,  ಸರಿಯಾಗಿ ಪಡಿತರ ವಸ್ತುಗಳು ಸಿಗುವಂತೆ ಮಾಡಲು ಮುಂದಾಗಬೇಕು ಎಂದು ಆಹಾರ ಶಿರಸ್ತೇದಾರರರಿಗೆ ಸೂಚಿಸಿದರು.
ತಾಲೂಕು ಸಮಾಜ ಇಲಾಖೆ ವ್ಯಾಪ್ತಿಗೆ ಬರುವ ವಿದ್ಯಾರ್ಥಿ ನಿಲಯಗಳಗೆ ಸುಣ್ಣ ಬಣ್ಣ ಬಳಿಯಲು ಅನುದಾನ ಬಿಡುಗಡೆಯಾಗಿದೆ. ವಿದ್ಯಾರ್ಥಿ ನಿಲಯಗಳಿಗೆ ಸುಣ್ಣ ಬಣ್ಣಕ್ಕಿಂತ, ಅಲ್ಲಿ ಕಿತ್ತು ಹೋಗಿರುವ ವಿದ್ಯುತ್ ಲೈನ್, ಮುರಿದ ಬಾಗಿಲು, ಕಿಟಕಿ ಇವುಗಳ ದುರಸ್ತಿಗಾಗಿ ಈ ಅನುದಾನವನ್ನು ಬದಲಾಯಿಸಿ ಕೊಡಬೇಕು. ಮಾರ್ಚ್ ಸಮೀಸುತ್ತಿರುವುದರಿಂದ ಕಾಮಗಾರಿ ಮಾಡದಿದ್ದರೆ ಹಣ ಹಿಂತಿರುಗಿ ಹೋಗುತ್ತದೆ ಎಂದು ತಾಲೂಕು ಸಮಾಜ ಕಲ್ಯಾಣಾಧಿಕಾರಿ ದಾಶರಥಿ ಕೇಳಿಕೊಂಡರು. ಈ ಬಗ್ಗೆ ನಾಳೆಯೇ ಎಂಜಿನಿಯರ್ ಜತೆ ಸಮಾಲೋಚಿಸಿ ಕ್ರಮ ಕೈಗೊಳ್ಳುತ್ತೇನೆಂದು ತಾಪಂ ಅಧ್ಯಕ್ಷರು ಹೇಳಿದರು.
ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ಮಾಡಬೇಕಾದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಬರ ಎದ್ದು ಕಾಣುತ್ತಿತ್ತು. ಬಂದಿದ್ದ ಇಲಾಖೆ ಅಧಿಕಾರಿಗಳಲ್ಲಿ ಅವರ ಸಹಾಯಕರೇ ಹೆಚ್ಚಾಗಿದ್ದು ಕಂಡು ಬಂತು. ಇದರ ಜೊತೆ ತಾಪಂ ವ್ಯಾಪ್ತಿಗೆ ಬರುವ 13 ಇಲಾಖೆಗಳ ಪ್ರಗತಿ ವರದಿ ನೀಡುವ ಬದಲಿಗೆ ಕೇವಲ 7 ಇಲಾಖೆಗಳ ಪ್ರಗತಿ ವರದಿ ಮಾತ್ರ ಬಂದಿತ್ತು. ಇದರಿಂದ ಸಿಡಿಮಿಡಿಗೊಂಡ ಅಧ್ಯಕ್ಷ ಬಸವಣ್ಣ, ನೀವು ನಮ್ಮನ್ನು ಕಾಯಬೇಕು. ಆದರೆ ನಾವೇ ನಿಮ್ಮನ್ನು ಕಾಯುವ ಸ್ಥಿತಿ ಬಂದಿದೆ. ಗೈರು ಹಾಜರಾದವರಿಗೆ ನೊಟೀಸ್ ನೀಡುವಂತೆ ಇಒ ಜಯಕೃಷ್ಣ ಅವರಿಗೆ ಸೂಚಿಸಿದರು. ತಾಲೂಕು ವ್ಯಾಪ್ತಿಯಲ್ಲಿ ಕೈಗೊಳ್ಳುವ ಯಾವುದೇ ಅಭಿವೃದ್ಧಿ ಕಾಮಗಾರಿಗಳ ಸಮಾರಂಭಕ್ಕೆ ತಾಪಂ ಆಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಕರೆಯುವಂತೆ ತಾಕೀತು ಮಾಡಿದರು. ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ, ಸೂಚನೆ ನೀಡಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com