ನಾಳೆ ಉಪವಾಸ

Updated on: 


ಮೈಸೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆರೋಗ್ಯ ಸಹಾಯಕರು ಬೆಂಗಳೂರಿನಲ್ಲಿ ಫೆ. 7 ರಂದು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಅಂದು ಬೆಳಗ್ಗೆ 9 ರಿಂದ ರಾಜಧಾನಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದ ಮುಂಭಾಗ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾಯಕರ ಕೇಂದ್ರ ಸಂಘದ ಜಿಲ್ಲಾಧ್ಯಕ್ಷ ಪಿ. ಶಿವರಾಮು ಹಾಗೂ ಕಾರ್ಯದರ್ಶಿ ವಿ. ಶ್ರೀನಿವಾಸ್ ತಿಳಿಸಿದ್ದಾರೆ.  ಒಂದನೇ ದಿನಾಂಕದಂದು ವೇತನ ಪಾವತಿ, ವೇತನ ಹೆಚ್ಚಳ, ಗ್ರಾಮೀಣ ಭತ್ಯ ಈ ಮುಂತಾದ ಬೇಡಿಕೆ ಈಡೇರಿಸುವಂತೆ ಕಳೆದ ಸೆಪ್ಟೆಂಬರ್‌ನಲ್ಲಿ ರಾಜ್ಯಾದ್ಯಂತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಗಳ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಯಿತು.  3 ತಿಂಗಳಲ್ಲಿ ಬೇಡಿಕೆ ಈಡೇರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಈವರೆಗೆ ಅದು ಈಡೇರದ ಹಿನ್ನೆಲೆಯಲ್ಲಿ ಈ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ.
ಕಾಡಾನೆ ದಾಳಿ: ಹಾನಿ
ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಕಾಡಾನೆಗಳ ಹಿಂಡು ಜೋಳದ ಬೆಳೆಗೆ ಲಗ್ಗೆ ಇಟ್ಟು, ಸಾವಿರಾರು ರು. ಬೆಳೆಯನ್ನು ನಾಶಪಡಿಸಿರುವ ಘಟನೆ ಕಾಡಂಚಿನ ಗ್ರಾಮ ನೇರಳಕುಪ್ಪೆಯಲ್ಲಿ ನಡೆದಿದೆ. ಗ್ರಾಮದ ಸಿ.ಎನ್. ಬೀರೇಗೌಡ ಎಂಬವರಿಗೆ ಸೇರಿದ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿರುವ ಮುಸುಕಿನ ಜೋಳದ ಬೆಳೆಗೆ ಕಾಡಿನಿಂದ ಆನೆ ಹಿಂಡು ದಾಳಿ ಮಾಡಿ, ಬೆಳೆಯನ್ನು ತಿಂದು ತುಳಿದ ಸುಮಾರು 50 ಸಾವಿರಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ವನಪಾಲಕ ರಶೀದ್ ಮತ್ತು ಶಿವಶಂಕರ್ ಭೇಟಿ ನೀಡಿ ಪರಿಶೀಲಿಸಿದರು.
ಸರ ಅಪಹರಣ
ಮೈಸೂರು: ಹಾಡಹಗಲೇ ಎರಡು ಕಡೆ ಸರ ಅಪಹರಿಸಿರುವ ಘಟನೆ ಮಂಗಳವಾರ ನಡೆದಿದೆ. ಅರವಿಂದನಗರ ನಿವಾಸಿ ಲೇ. ತಿಮ್ಮಪ್ಪ ಎಂಬವರ ಪತ್ನಿ ಶಿವಭಾಗ್ಯ (67) ವಿವೇಕಾನಂದನಗರ ರಸ್ತೆಯಲ್ಲಿ ಬೆಳಗ್ಗೆ ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ವ್ಯಕ್ತಿಗಳು 20 ಗ್ರಾಂ. ಚಿನ್ನದ ಸರ ಎಗರಿಸಿದ್ದಾರೆ. ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಮುಂಡಿಪುರಂ 3ನೇ ಕ್ರಾಸ್‌ನಲ್ಲಿ ಹೋಗುತ್ತಿದ್ದ ಕೋಮಲ (40) ಎಂಬವರ ರೋಲ್‌ಗೋಲ್ಡ್ ಸರವನ್ನು ಬೈಕಿನಲ್ಲಿ ಬಂದವರು ಎಗರಿಸಿದ್ದಾರೆ. ಕೆ.ಆರ್. ಠಾಣೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ವ್ಯಕ್ತಿ ನೀರುಪಾಲು
ಎಚ್.ಡಿ. ಕೋಟೆ: ಮೀನು ಹಿಡಿಯಲು ಹೋದ ವ್ಯಕ್ತಿ ನೀರು ಪಾಲಾಗಿರುವ ಘಟನೆ ತಾಲೂಕಿನ ತಾರಕಾ ಜಲಾಶಯದ ಹಿನ್ನೀರಿನಲ್ಲಿ ಮಂಗಳವಾರ ಜರುಗಿದೆ. ಹಿರೇಹಳ್ಳಿ ಬಿ ಕಾಲೋನಿಯ ನಿವಾಸಿ ಜವರಯ್ಯ ಎಂಬವರ ಪುತ್ರ ದೊಡ್ಡಸ್ವಾಮಿ (60) ನೀರು ಪಾಲಾದವರು. ಮಂಗಳವಾರ ಮೀನು ಹಿಡಿಯಲು ಹೋಗಿ ನೀರು ಪಾಲಾಗಿದ್ದು, ದೊಡ್ಡಸ್ವಾಮಿಗಾಗಿ ಅಧಿಕಾರಿಗಳು ಹಾಗೂ ಪೊಲೀಸರು ಶೋಧಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com