ಸಾಲಿಗ್ರಾಮ: ಕೆ.ಆರ್. ತಾಲೂಕಿನ ಮಿರ್ಲೆ ಗ್ರಾಪಂ ಕಚೇರಿ ಮುಂದೆ ವೇತನಕ್ಕಾಗಿ ಪೌರಕಾರ್ಮಿಕರು ಧರಣಿ ನಡೆಸಿದರು. ವೇತನ ನೀಡದಿದ್ದರೆ, ಗ್ರಾಪಂ ಕಚೇರಿ ಅಥವಾ ಮೈಸೂರು ಜಿಪಂ ಕಚೇರಿ ಎದುರು ಆತ್ಮಹತ್ಯೆ ಒಂದೇ ಮಾರ್ಗ ಎಂದು ಕಾರ್ಮಿಕರು ಎಚ್ಚರಿಸಿದರು.
ಮಿರ್ಲೆ ಗ್ರಾಪಂ ಕಚೇರಿಯಲ್ಲಿ ಪೌರಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಪ್ರತಿನಿತ್ಯ ರಸ್ತೆಯಲ್ಲಿ ಬಿದ್ದಿರುವ ಕಸ ಹಾಗೂ ಚರಂಡಿಯನ್ನು ಸ್ವಚ್ಛ ಮಾಡುವುದು ಇತರೆ ಕೆಲಸಗಳನ್ನು ನಿತ್ಯ ಮಾಡುತ್ತಿದ್ದಾರೆ. ಆದರೆ 11 ತಿಂಗಳಿಂದ ವೇತನ ನೀಡದೆ ಜೀವನ ಸಾಗಿಸಲು ತುಂಬಾ ಕಷ್ಟಕರವಾಗಿದೆ. ವೇತನ ನೀಡದೆ ರಾಮಯ್ಯ ಮತ್ತು ಮಾದ ಎಂಬವವರು ಸಂಬಳ ಬಂದೆ ಬರುತ್ತದೆ ಎಂಬ ನಂಬಿಕೆಯಲ್ಲಿ ಕೈಸಾಲ ಜಾಸ್ತಿ ಮಾಡಿಕೊಂಡು ತೀರಿಸಲಾಗದೆ ಕೆಲವು ತಿಂಗಳುಗಳ ಹಿಂದೆ ವಲಸೆ ಹೋಗಿ ಕೊಡಗಿನಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಪೌರ ಕಾರ್ಮಿಕ ಆರ್. ಮಂಜುನಾಥ್ ಮಾತನಾಡಿ, 20 ವರ್ಷಗಳಿಂದ ಪೌರ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಕಾಯಂಗೊಳಿಸಿಲ್ಲ ಮತ್ತು ಸರ್ಕಾರದ ಅನುದಾನ ದೊರೆತಿಲ್ಲ. ವಾರ್ಷಿಕ ಆದಾಯದಲ್ಲಿ ಶೇ.40ರಷ್ಟು ಹಣವನ್ನು ಸಂಬಳ ರೂಪದಲ್ಲಿ ನೀಡಬೇಕು ಎಂಬ ನಿಯಮವಿದ್ದರೂ ಕೊಟ್ಟಿಲ್ಲ. ಜತೆಗೆ ಸರಿಯಾದ ಸಮಯಕ್ಕೆ ವೇತನ ನೀಡಿಲ್ಲ, ನಮ್ಮ ಸಿಬ್ಬಂದಿ ಬನ್ನಯ್ಯ ಎಂಬ ಅಂಗವಿಕಲನಿದ್ದು, ಅವರಿಗೆ ಅಂಗವಿಕಲ ವೇತನವೂ ಸಿಗದೆ ಇತ್ತ ಕಾಯಂಗೊಳಿಸದೆ ಸಂಬಳವೂ ಇಲ್ಲದೆ ಪರಿತಪಿಸುತ್ತಿದ್ದೇವೆ ಎಂದು ಹೇಳಿದರು.
ಇದರ ಬಗ್ಗೆ ಸಂಬಂಧಪಟ್ಟ ತಾಲೂಕಿನ ಕಾರ್ಯನಿರ್ವಹಣಾ ಅಧಿಕಾರಿಯವರಿಗೆ ದೂರು ನೀಡಿದರೂ
ಇದೇ ರೀತಿ ಮುಂದುವರಿದರೆ ಜಿಪಂ ಕಚೇರಿ ಮುಂದೆ ಕುಟುಂಬ ಸಮೇತರಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೌರ ಕಾರ್ಮಿಕರಾದ ಪಳನಿ, ರಾಮ, ಆರ್ಮೂಗಂ, ಬನ್ನಾ, ರಾಮರಾಜ ಹಾಗೂ ಇವರ ಕುಟುಂಬಸ್ಥರು ಎಚ್ಚರಿಕೆ ನೀಡಿದ್ದಾರೆ.