ದೇವರಾಜು ಕಪ್ಪಸೋಗೆ
ಚಾಮರಾಜನಗರ: ಸತತ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾ ಬಂದಿರುವ ರಾಜ್ಯದ ಗಡಿ ಚಾಮರಾಜನಗರ ಜಿಲ್ಲೆಗೆ ಈ ಬಾರಿ ಬಜೆಟ್ನಲ್ಲಿ ಗ್ರಾನೈಟ್ ಪಾರ್ಕ್, ಟೌನ್ಶಿಪ್ ಸೇರಿದಂತೆ ಮಹತ್ವದ ಯೋಜನೆಗಳು ದೊರಕುವವೇ ಎಂದು ಜಿಲ್ಲೆಯ ಜನತೆ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಜಿಲ್ಲೆಯಲ್ಲಿ ಪ್ರಾಕೃತಿಕ ಸಂಪನ್ಮೂಲದ ಹೇರಳವಾಗಿದ್ದು ಹೊರ ರಾಜ್ಯಗಳಿಗೆ ಸಾಗಣೆಯಾಗುತ್ತಿವೆ. ಜತೆಗೆ ಮಾನವ ಸಂಪನ್ಮೂಲಕ್ಕೂ ಕೊರತೆಯಿಲ್ಲ. ಆದರೂ ಯಾವುದೇ ಕೈಗಾರಿಕೆ ಸಂಸ್ಥೆಗಳು ಇಲ್ಲವಾಗಿದ್ದು, ಜನರು ಉದ್ಯೋಗಕ್ಕಾಗಿ ಪ್ರತಿ ನಿತ್ಯ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಗೆ ಹೋಗುತ್ತಿದ್ದಾರೆ.
ಜಿಲ್ಲೆಯಲ್ಲಿ ಹೇರಳವಾಗಿ ಸಿಗುವ ಉತ್ಕೃಷ್ಟ ದರ್ಜೆಯ ಗ್ರಾನೈಟ್ ಕಟಿಂಗ್ ಮತ್ತು ಪಾಲಿಶಿಂಗ್ಗೆ ಅಗತ್ಯವಾದ ಕೈಗಾರಿಕೆ ಸ್ಥಾಪಿಸುವ ನಿಟ್ಟಿನಲ್ಲಿ ಗ್ರಾನೈಟ್ ಪಾರ್ಕ್ ಸ್ಥಾಪನೆ ಮಾಡುವಂತೆ ಜಿಲ್ಲೆಯ ಜನತೆ ಹಲವಾರು ದಶಕಗಳಿಂದ ಒತ್ತಾಯಿಸುತ್ತಾ ಬಂದಿದ್ದಾರೆ.
ಗ್ರಾನೈಟ್ ಪಾರ್ಕ್ ಸ್ಥಾಪನೆಗೆ ಗ್ಲೋಬಲ್ ಇನ್ವೆಸ್ಟರ್ ಮೀಟ್ನಲ್ಲೂ ಬೇಡಿಕೆ ಬಂದಿದ್ದು, ಇದಕ್ಕೆ ಈಗಾಗಲೇ ಕೆಐಎಡಿಬಿ ವತಿಯಿಂದ 1350 ಎಕರೆ ಜಾಗವನ್ನು ಭೂಸ್ವಾಧೀನ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು, 300 ಎಕರೆ ಪ್ರದೇಶದಲ್ಲಿ ಗ್ರಾನೈಟ್ ಪಾರ್ಕ್ ಸ್ಥಾಪನೆಯಾಗಬೇಕಿದೆ.
ಟೌನ್ಶಿಪ್ ನಿರ್ಮಾಣ: ಚಾಮರಾಜನಗರ ಜಿಲ್ಲೆಯಾದಾಗಿನಿಂದಲೂ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸ್ವತಂತ್ರವಾಗಿ ಯಾವುದೇ ಟೌನ್ಶಿಪ್ ನಿರ್ಮಾಣವಾಗಿಲ್ಲ. ಈ ಕೊರತೆ ನೀಗಿಸುವ ನಿಟ್ಟಿನಲ್ಲಿ 100 ಎಕರೆ ಜಮೀನನ್ನು ಭೂಸ್ವಾಧೀನ ಮಾಡಿಕೊಂಡು ಯೋಜಿತ ರೀತಿಯಲ್ಲಿ ಟೌನ್ಶಿಪ್ ನಿರ್ಮಾಣ ಮಾಡಿ ನಿವೇಶನಗಳನ್ನು ಆರ್ಹರಿಗೆ ವಸತಿಗಾಗಿ ಹಂಚಿಕೆ ಮಾಡಲು ಸರ್ಕಾರ ಮುಂದಾಗಬೇಕಿದೆ. ಎ, ಬಿ, ಸಿ ಮತ್ತು ಡಿ ದರ್ಜೆ ನೌಕರರಿಗೆ ಮನೆಯ ಅಗತ್ಯ ಇದೆ. ಈ ನಿಟ್ಟಿನಲ್ಲಿ ಸುಮಾರು 20 ಎಕರೆ ಪ್ರದೇಶದಲ್ಲಿ 500ಕ್ಕೂ ಹೆಚ್ಚು ವಸತಿ ಗೃಹಗಳನ್ನು ನಿರ್ಮಾಣ ಮಾಡಬೇಕಿದೆ.
ಚಾಮರಾಜನಗರ ತಾಲೂಕಿನ 166 ಮತ್ತು ಗುಂಡ್ಲುಪೇಟೆ ತಾಲೂಕಿನ 131 ಗ್ರಾಮಗಳಿಗೆ ಕಳೆದ ಬಜೆಟ್ನಲ್ಲಿ ಶಾಶ್ವತ ಕುಡಿಯುವ ನೀರು ಪೂರೈಕೆಗೆ ಈಗಾಗಲೇ ಹಣ ಬಿಡುಗಡೆ ಮಾಡಿ ಚಾಲನೆಯೂ ಸಿಕ್ಕಿದೆ. ಅದೇ ರೀತಿಯಲ್ಲಿ ಕೊಳ್ಳೇಗಾಲ ತಾಲೂಕಿನಲ್ಲೂ ತೀವ್ರ ಕುಡಿಯುವ ನೀರಿನ ಸಮಸ್ಯೆಯಿರುವುದರಿಂದ ಈ ಭಾಗದ 135 ಗ್ರಾಮಗಳಿಗೆ ಅಂದಾಜು 229 ಕೋಟಿ ವೆಚ್ಚದಲ್ಲಿ ಕಾವೇರಿ ನದಿಯಿಂದ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡಲು ಬಜೆಟ್ನಲ್ಲಿ ಹಣ ನೀಡಬೇಕಿದೆ.
ರೈಲ್ವೆಗೆ ರಾಜ್ಯದ ಪಾಲು ಬೇಕಿದೆ: ಜಿಲ್ಲೆಯ ಜನತೆಗೆ ಬಹುನೀರಿಕ್ಷಿತ ಬೆಂಗಳೂರು- ಕೆಂಗೇರಿ- ಕನಕಪುರ- ಚಾಮರಾಜನಗರದ ಅನುಮೋದಿತ ರೈಲು ಮಾರ್ಗದ ಕಾಮಗಾರಿಗೆ ರಾಜ್ಯ ಸರ್ಕಾರದಿಂದ ಅಗತ್ಯ ಭೂಮಿ ಮಂಜೂರಾತಿ ಮತ್ತು ರಾಜ್ಯದ ಪಾಲು ಶೇ.50ರಷ್ಟು ವೆಚ್ಚವನ್ನು ಬಜೆಟ್ನಲ್ಲಿ ಭರಿಸಬೇಕಿದೆ.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಚಾಮರಾಜನಗರಕ್ಕೆ ಭೇಟಿ ನೀಡಿ ಜಿಲ್ಲೆಯ ಅಭಿವೃದ್ಧಿಗಾಗಿ 100
ಕೋಟಿ ವಿಶೇಷ ಪ್ಯಾಕೇಜ್ ನೀಡುವುದಾಗಿ ಹೇಳಿದ್ದಾರೆ. ಅದು ಈ ಬಾರಿಯ ಬಜೆಟ್ನಲ್ಲಿ ಘೋಷಣೆಯಾಗಬೇಕಿದೆ.
ಜಿಲ್ಲೆಯ ಏಕೈಕ ಪ್ರಮುಖ ಜಲಾಶಯವಾದ ಸುವರ್ಣಾವತಿ ಜಲಾಶಯಕ್ಕೆ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಉದ್ಯಾನವನ ನಿರ್ಮಾಣ ಮತ್ತು ಬೋಟಿಂಗ್ ವ್ಯವಸ್ಥೆ ಹಾಗೂ ಶಿವನಸಮುದ್ರದ ಕಾವೇರಿ ನದಿಯಲ್ಲಿ ಪ್ಯಾರ ಗ್ಲೈಡಿಂಗ್ ಮತ್ತು ರಿವರ್ ರ್ಯಾಫ್ಟಿಂಗ್ ಸೌಲಭ್ಯ ಕಲ್ಪಿಸಬೇಕು. ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಹರಳುಕೋಟೆ ದೇವಸ್ಥಾನ, ಕಮರವಾಡಿ ದೇವಸ್ಥಾನ, ಗುಂಡ್ಲುಪೇಟೆ ತಾಲೂಕಿನ ಮಂಚಹಳ್ಳಿ ನಾಗಲಿಂಗೇಶ್ವರ ಗವಿ, ಕಂದೇಗಾಲ ಪಾರ್ವತಿ ಬೆಟ್ಟ, ತೆರಕಣಾಂಬಿ ಲಕ್ಷ್ಮೀ ವರದರಾಜಸ್ವಾಮಿ ದೇವಸ್ಥಾನಗಳ ಅಭಿವೃದ್ಧಿಗೂ ಬಜೆಟ್ನಲ್ಲಿ ಹಣ ನೀಡಬೇಕಿದೆ.
ಹಿಂದಿನ ಬಜೆಟ್ಗಳ ನೋಟ
2009ರ ಬಜೆಟ್ನಲ್ಲಿ ಚಾಮರಾಜನಗರ ಜಿಲ್ಲೆಯ ಹೆಸರೇ ಇರಲಿಲ್ಲ. ನಂತರ ಮಂಡಿಸಿದ ಬಜೆಟ್ನಲ್ಲಿ ಅರಿಶಿನ ಸಂಸ್ಕರಣಾ ಘಟಕಕ್ಕೆ 10 ಕೋಟಿ ಮತ್ತು ಶೀಥಲೀಕರಣ ಘಟಕ ಸ್ಥಾಪನೆಗೆ 10 ಕೋಟಿ, ಮಹದೇಶ್ವರ ಬೆಟ್ಟ, ಹಿಮವದ್ ಗೋಪಾಲಸ್ವಾಮಿ ಹಾಗೂ ಬಿಳಿಗಿರಿರಂಗನಬೆಟ್ಟ ಅಭಿವೃದ್ಧಿಗೆ 5 ಕೋಟಿ ನೀಡುವುದಾಗಿ ಘೋಷಣೆ ಮಾಡಿದರೂ ಇದಕ್ಕೆ ಇದುವರಗೆ ನಿರೀಕ್ಷಿತ ಮಟ್ಟದಲ್ಲಿ ಚಾಲನೆಯೇ ಸಿಗದೇ, ನಯಾಪೈಸೆಯನ್ನೂ ಬಿಡುಗಡೆ ಮಾಡಿಲ್ಲ.
2011ರಲ್ಲಿ ಕುಡಿಯುವ ನೀರು ಯೋಜನೆಗೆ 100 ಕೋಟಿ ನೀಡುವುದಾಗಿ ಘೋಷಣೆ ಮಾಡಿ, ಮತ್ತೆ 2012ರ ಬಜೆಟ್ನಲ್ಲೂ ಅದನ್ನೇ ಘೋಷಣೆ ಮಾಡಲಾಯಿತು. ಈ ಯೋಜನೆಗೆ ಈಗ ಚಾಲನೆ ಸಿಕ್ಕಿದ್ದು, ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲೂಕಿನ 297 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಕಾಮಗಾರಿ ಪ್ರಗತಿಯಲ್ಲಿದೆ. ಜೊತೆಗೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.