ಮುಂದುವರಿದ ವೈದ್ಯರ ಮುಷ್ಕರ ಟಿ ಬಿಕೋ ಎನ್ನುತ್ತಿರುವ ಜಿಲ್ಲಾಸ್ಪತ್ರೆ
ಚಾಮರಾಜನಗರ: ಕಳೆದ 3 ದಿನಗಳಿಂದ ರಾಜ್ಯವ್ಯಾಪಿ ಸರ್ಕಾರಿ ಆಸ್ಪತ್ರೆ ವೈದ್ಯರು ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ನಗರದ ಜಿಲ್ಲಾಸ್ಪತ್ರೆಯಲ್ಲೂ ಭಾನುವಾರವೂ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು.
ಇದುವರೆಗೆ ತುರ್ತು ಸೇವೆಗೆ ವಿನಾಯಿತಿ ನೀಡಲಾಗಿತ್ತು. ಆದರೆ ಭಾನುವಾರ ತುರ್ತು ಚಿಕಿತ್ಸೆ ಬಂದ್ ಆಗಿದ್ದರಿಂದ ಹೊರ ರೋಗಿಗಳಿಗೆ ತೊಂದರೆಯಾಯಿತು. ಇದರಿಂದಾಗಿ ಭಾನುವಾರ ಜಿಲ್ಲಾಸ್ಪತ್ರೆಯಲ್ಲಿ ಬಿಕೋ ಎನ್ನುವಂತಹ ವಾತಾವರಣ ನಿರ್ಮಾಣವಾಗಿತ್ತು.
ದಾಖಲಾಗಿರುವ ಹೊರ ರೋಗಿಗಳಿಗೆ ಮಾತ್ರ ಕೆಲ ದಾದಿಯರು ಚಿಕಿತ್ಸೆ ಕೊಡುತ್ತಿರುವುದನ್ನು ಬಿಟ್ಟರೇ, ಯಾರ ಸುಳಿವು ಇಲ್ಲ. ಮಕ್ಕಳ ವಾರ್ಡ್ ಬಿಕೋ ಎನ್ನುತ್ತಿತ್ತು, ಆಸ್ಪತ್ರೆಯ ಪ್ರಯೋಗಾಲಯ ಐಸಿಟಿಸಿ ವಿಭಾಗ, ಎಕ್ಸ್ರೇ ವಿಭಾಗಗಳು ಬೀಗ ಜಡಿದಿದ್ದು, ರೋಗಿಗಳು ಮಾತ್ರ ವೈದ್ಯರಿಲ್ಲದ್ದನ್ನು ನೋಡಿಕೊಂಡು ಕಂಗಾಲಾಗಿ ಬಂದ ದಾರಿಗೆ ವಾಪಸ್ ಹೋಗುತ್ತಿದ್ದರು.
ರೋಗಿಗಳ ಅಳಲು: ವೈದ್ಯರ ಮುಷ್ಕರದಿಂದ ರೋಗಿಗಳು ಕಂಗಾಲಾಗಿದ್ದು, ಭಾನುವಾರ ಪೇಟೆಯ ನಂಜಯ್ಯ ದಂಪತಿಗಳು ಆಸ್ಪತ್ರೆಗೆ ಧಾವಿಸಿ ತುರ್ತು ಚಿಕಿತ್ಸಾ ಘಟಕದತ್ತ ನೋಡಿದಾಗ ಬೀಗ ಜಡಿದಿತ್ತು. ವೈದ್ಯರೇ ಇಲ್ಲದ ಮೇಲೆ ನಮಗೆ ಯಾರು ಚಿಕಿತ್ಸೆ ಕೊಡುವವರು ಯಾರು, ಖಾಸಗಿ ಆಸ್ಪತ್ರೆಗೆ ಹೋಗಲು ನಮ್ಮ ಲ್ಲಿ ಅಷ್ಟು ಹಣವಿಲ್ಲ ನಮಗೆ ದೇವರೇ ದಾರಿ ತೋರಿಸಬೇಕು ಎಂದು ಕಣ್ಣಿರಿಟ್ಟರು.
ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬಂದ್ ಆಗಿದ್ದು, ತುರ್ತು ಸಂದರ್ಭ ಬಂದರೆ ತಾಲೂಕು ಆಸ್ಪತ್ರೆಯಿಂದ 108 ವಾಹನ ಮೂಲಕ ಸಾಗಿಸಿ, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ವ್ಯವಸ್ಧೆ ಮಾಡಲಾಗಿತ್ತು. ಇದಕ್ಕಾಗಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿ 12 ಮಂದಿ ವೈದ್ಯರನ್ನು ನಿಯೋಜಿಸಲಾಗಿತ್ತು.
ಜಿಲ್ಲಾ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ 12 ಮಂದಿ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಹೇಮಂತ್ಕುಮಾರ್ ತಿಳಿಸಿದ್ದಾರೆ.