ನಂಜನಗೂಡು: ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದಿರುವ ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಾಲಯದ ವ್ಯವಸ್ಥಾಪಕ ಸಮಿತಿ ರಚಿಸಿ ಮುಜರಾಯಿ ಆಯುಕ್ತ ಬಿ.ಜೆ. ನಂದಕುಮಾರ್ ಆದೇಶ ಹೊರಡಿಸಿದ್ದಾರೆ. ಪಟ್ಟಣದ ಕೆ.ಎಸ್. ಮೋಹನ್, ಮಂಜುಳಾ ಎಸ್.ಸಿ.ಎಸ್. ಮೂರ್ತಿ, ಶಶಿಕಲಾ, ಎಸ್. ಮಲ್ಲಿಕಾರ್ಜುನ್, ಪ್ರಚಾರ ಕೇಸರಿ ಎನ್.ಎಸ್. ಶಿವನಾಗಪ್ಪ, ಡಿ. ರಾಮಣ್ಣ, ಎನ್.ಎಸ್. ವಿಜಯ್ಕುಮಾರ್ ಮತ್ತು ದೇಗುಲದ ಆಗಮಿಕರನ್ನೊಳಗೊಂಡ ಎಂಟು ಜನರ ಸಮಿತಿ ರಚನೆಯಾಗಿದೆ. ಆಕಾಂಕ್ಷಿಗಳಿಂದ ಒಟ್ಟು 63 ಅರ್ಜಿಗಳು ಬಂದಿದ್ದವು. ಸದಸ್ಯರ ಸೇವಾವಧಿ ಮೂರು ವರ್ಷದ್ದಾಗಿರುತ್ತದೆ. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯನ್ನು ಸಮಿತಿಯ ಪದನಿಮಿತ್ತ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಕಳೆದ 10 ವರ್ಷಗಳ ಹಿಂದೆ ಧರ್ಮದರ್ಶಿ ಮಂಡಳಿ ಅಸ್ತಿತ್ವದಲ್ಲಿತ್ತು. ನಂತರ ನೇಮಕಾತಿ ನಡೆದಿರಲಿಲ್ಲ.ಬೇಗೂರಲ್ಲಿ ಕ್ಯಾನ್ಸರ್ ಉಚಿತ ತಪಾಸಣೆ
ಮೈಸೂರು: ಮೈಸೂರಿನ ಭಾರತ್ ಕ್ಯಾನ್ಸರ್ ಆಸ್ಪತ್ರೆಯು ಫೆ. 13 ರಂದು ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರ ಏರ್ಪಡಿಸಿದೆ. ಅಂದು ಬೆಳಗ್ಗೆ 11 ರಿಂದ 2 ರವರೆಗೆ ಅಂತರ್ರಾಷ್ಟ್ರೀಯ ಮಾನವ ಅಭಿವೃದ್ಧಿ ಮತ್ತು ಏಳಿಗೆ ಸಂಸ್ಥೆಯಲ್ಲಿ ನಡೆಯಲಿರುವ ಈ ಶಿಬಿರದಲ್ಲಿ ಕ್ಯಾನ್ಸರ್ ತಜ್ಞ ಡಾ. ವೈ.ಎಸ್. ಮಾಧವಿ ಭಾಗವಹಿಸುವರು. ಒಂದು ತಿಂಗಳಿಂದ ವಾಸಿಯಾಗದ ಗಾಯ, ಹೊಟ್ಟೆ ನೋವು, ಗಂಟು, ನುಂಗುವಾಗಿನ ತಡೆ ಅಥವಾ ತೊಂದರೆ, ಅಸ್ವಭಾವಿಕ ರಕ್ತಸ್ರಾವ, ಗಂಟಲಿನ ಹುಣ್ಣು ಇರುವವರು ಈ ಶಿಬಿರದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ದೂ. 0821 4240601 ಅಥವಾ 4240628 ಸಂಪರ್ಕಿಸಬಹುದು.
ನಾಳೆ ವಾಟಾಳುಶ್ರೀಗೆ ಅಭಿನಂದನೆ
ಮೈಸೂರು: ಮೈಸೂರು- ಚಾಮರಾಜನಗರ ಜಿಲ್ಲೆ ಬೇಡ ಜಂಗಮ ಸಮಾಜ ಸಂಸ್ಥೆಯು ಟಿ. ನರಸೀಪುರ ತಾಲೂಕು ವಾಟಾಳು ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಅವರನ್ನು ಫೆ. 12 ರಂದು ಬೆಳಗ್ಗೆ 10.30ಕ್ಕೆ ಅಭಿನಂದಿಸಲಿದೆ. ಸುತ್ತೂರು ಸಿದ್ಧಲಿಂಗ ದೇಶಿಕೇಂದ್ರ ಮಂಗಳ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಡಗೂರು ಮಠ, ಚುಂಚನಹಳ್ಳಿ ಮಠ, ಬೆಟ್ಟದಪುರ ಮಠ, ಪಡವಲು ಮಠ, ಹರವೇ ಮಠ, ಚಿಕ್ಕತಪ್ಪೂರು ಮಠ, ಹುಲ್ಲಳ್ಳಿ ಮಠ, ಸೂರಳ್ಳಿ ಮಠ, ಕಸುವಿನಹಳ್ಳಿ ಮಠ, ಮಾದಾಪಟ್ಟಣ ಮಠದ ಶ್ರೀಗಳು ಭಾಗವಹಿಸುವರು. ಷಡಕ್ಷರಿ, ಶಿವಕುಮಾರಸ್ವಾಮಿ ಅತಿಥಿಗಳಾಗಿರುವರು.