ಅಮೃತಭೂಮಿಯಲ್ಲಿ ಹಾರಾಡಿದ ಹಸಿರು ಧ್ವಜ

Updated on: 

ಚಾಮರಾಜನಗರ: ರೈತನಾಯಕ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರ ಕನಸಿನ ಕೂಸಾದ ತಾಲೂಕಿನ ಹೊಂಡರಬಾಳುವಿನಲ್ಲಿರುವ ಅಮೃತಭೂಮಿಯಲ್ಲಿ ಮೊದಲ ಬಾರಿಗೆ ನಡೆದ ರೈತೋತ್ಸವ ಹಾಗೂ ನಂಜುಂಡಸ್ವಾಮಿ ಅವರ 77ನೇ ಜನ್ಮ ದಿನೋತ್ಸವ, ಗ್ರಾಮ ಸ್ವರಾಜ್ಯ, ವಿಚಾರ ಸಂಕಿರಣ ಸಮಾರಂಭದಲ್ಲಿ ಹಸಿರು ಧ್ವಜ, ಹಸಿರು ಟವಲ್ ವಿಜೃಂಭಿಸಿದರೆ, ದೇಶಿಯ ಬಿತ್ತನೆ ಬೀಜಗಳು ಗಮನ ಸೆಳೆದವು.
ನಂಜುಂಜಸ್ವಾಮಿ ದಂಪತಿಗಳ ಸಮಾಧಿ ಸ್ಥಳದಲ್ಲಿ ಸಮಾವೇಶಗೊಂಡ ರೈತರು, ರೈತ ಮುಖಂಡರು, ರೈತ ಹೋರಾಟಗಾರರು ತಮ್ಮ ನಾಯಕನಿಗೆ ಹಸಿರು ಧ್ವಜದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ, ವೇದಿಕೆಯತ್ತ ಜಯಘೋಷಗಳನ್ನು ಹಾಕುತ್ತ ಬಂದರು.
ಅಮೃತಭೂಮಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಗ್ರಾಮ ಸ್ವರಾಜ್ ಕೇಂದ್ರ, ನಂಜುಂಡಸ್ವಾಮಿಯವರ  ಜೀವನ ಶಾಲೆ ಹಾಗೂ ಉತ್ತರ ಭಾರತದ ರೈತನಾಯಕ ಮಹೇಂದ್ರ ಸಿಂಗ್ ಟಿಕಾಯತ್ ಹೋರಾಟದ ನೆಲೆಯನ್ನು ನರ್ಮದಾ ಬಚಾವೋ ಚಳುವಳಿಯ ನಾಯಕಿ ಮೇಧಾಪಾಟ್ಕರ್, ಸಾಹಿತಿ ದೇವನೂರು ಮಹದೇವ ಉದ್ಘಾಟಿಸಿದರೆ, ಕೇರಳ ಆದಿವಾಸಿ ಚಳವಳಿಯ ರೂವಾರಿ ಸಿ.ಕೆ. ಜಾನು ಆವರಣದಲ್ಲಿ ತೆಂಗಿನ ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ದೇಶದ ವಿವಿಧ ರಾಜ್ಯಗಳಿಂದ ಬಂದಿದ್ದ ರೈತ ಕಾರ್ಯಕರ್ತರು ಒಂದೆಡೆ ಸೇರಿ, ದೇಶದಲ್ಲಿ ನೈಸರ್ಗಿಕ ಕೃಷಿ, ದೇಶಿಯ ಬೀಜಗಳ ಮಹತ್ವ, ಕೃಷಿ ಮಹತ್ವದ ಬಗ್ಗೆ ಚರ್ಚಿಸಿದರು. ಅನ್ನದಾತ ಎದುರಿಸುತ್ತಿರುವ ಸಮಸ್ಯೆಗಳು, ಪ್ರೊ. ಎಂಡಿಎನ್‌ರ ಕನಸು, ಅವರ ಹೋರಾಟದ ಫಲ, ಮುಂದೆ ರೈತ ಚಳವಳಿ ಸಾಗಬೇಕಾದ ಬಗ್ಗೆ ಚರ್ಚಿಸಿದರು.
ಗಮನ ಸೆಳೆದ ದೇಶಿ ಬೀಜಗಳು: ರೈತೋತ್ಸವದಲ್ಲಿ ಪ್ರದರ್ಶಿಸಿದ ದೇಶಿ ಬೀಜಗಳು, ರೈತರ ಗಮನ ಸೆಳೆದವು. ಹೊಸ ಮಾಲಂಗಿಯ ರೈತ ಎಂ. ರೇಚಣ್ಣ 15 ವಿವಿಧ ತಳಿಯ ಬತ್ತದ ಬೀಜಗಳನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರೇಚಣ್ಣ, ದೇಶಿಯ ಬೀಜಗಳಿಂದ ಬೆಳೆದ ಬೆಳೆ ರೋಗ ನಿರೋಧಕ ಶಕ್ತಿ ಹೊಂದಿರುತ್ತದೆ. ಜೊತೆಗೆ ಆರೋಗ್ಯಪೂರ್ಣವಾಗಿ, ರುಚಿಯಾಗಿರುತ್ತದೆ. ಯಾವುದೇ ರಾಸಾಯನಿಕ ಗೊಬ್ಬರ ಉಪಯೋಗಿಸದೆ, ಕೊಟ್ಟಿಗೆ ಗೊಬ್ಬರ ಹಾಕಿ ಬೆಳೆ ಬೆಳೆಯುವ ಬಗ್ಗೆ ತಿಳಿಸಿದರು.
ಹಾವೇರಿ ಜಿಲ್ಲೆಯ ನಾಗಪ್ಪ ಬಸಪ್ಪ ಹಾಲಂಬಿ ನಿಂಬೆಗೊಂಬಿ ಅವರೆ, ಹಲಸಂದೆ, ರಾಗಿ, ನವಣೆ, ಸೇರಿದಂತೆ  126 ವಿವಿಧ ಬಗ್ಗೆಯ ದೇಶಿಯ ಬೀಜಗಳನ್ನು ಪ್ರದರ್ಶಿಸಿ ಮಾತನಾಡಿ, ನಮ್ಮ ಪೂರ್ವಿಕರು ಹಾಕಿ ಕೊಟ್ಟ, ಬಿತ್ತನೆ ಬೀಜಗಳನ್ನು ಮನೆಯಲ್ಲಿ ತಯಾರಿಸಿ, ಭೂಮಿಯಲ್ಲಿ ಹಾಕಿ ಬೆಳೆದರೆ ನಿಜವಾಗಿಯೂ ಅಮೃತಭೂಮಿಯೇ ಆಗುತ್ತದೆ. ಒಳ್ಳೆಯ ಇಳವರಿ ಬರುವುದರ ಜೊತೆ ಆರೋಗ್ಯಪೂರ್ಣವಾಗಿರುತ್ತದೆ. ನಂಜುಂಡಸ್ವಾಮಿಯರ ಕನಸಿಸ ಕೂಸಾದ ಅಮೃತಭೂಮಿಯಲ್ಲಿ ಇದು ಸಾಕಾರಗೊಳ್ಳಬೇಕು ಎಂದರು.
ರೈತೋತ್ಸವದಲ್ಲಿ ಭಾಗವಹಿಸಿರುವ ಸ್ಕಾಟ್‌ಲ್ಯಾಂಡ್ ನಾಗರೀಕ ಡಿನೇಶ್ ರೈತರಿಗೆ ಭೋಜನ ತಯಾರಿಸಲು ಸಹಾಯ ಮಾಡಿ ರೈತರ ಮನಸೂರೆಗೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com