ಚಾಮರಾಜನಗರ: ಸ್ಥಾಯಿಸಮಿತಿ ರಚಿಸಿಲ್ಲ, ಸಭಾ ನೊಟೀಸ್ನ್ನು ಸರಿಯಾಗಿ ತಲುಪಿಸಿಲ್ಲ ಎಂದು ತಾಪಂ ಸದಸ್ಯರು ಅಕ್ರೋಶ ವ್ಯಕ್ತಪಡಿಸಿದ್ದರಿಂದಾಗಿ ಫೆ.15ರಂದು ನಡೆಯಬೇಕಾಗಿದ್ದ ಸಾಮಾನ್ಯ ಸಭೆಯನ್ನು ಮುಂದೂಡಲಾಯಿತು.ತಾಪಂ ಸಭಾಂಗಣದಲ್ಲಿ ಸಭೆಗೆ ಅಧ್ಯಕ್ಷ ಬಸವಣ್ಣ, ಉಪಾಧ್ಯಕ್ಷೆ ಪಾರ್ವತಮ್ಮ, ಇಒ ಕೃಷ್ಣ ಬರುತ್ತಿದ್ದಂತೆ, ಸದಸ್ಯರಾದ ಮಹದೇವು, ಚಿಕ್ಕಮಹದೇವ ಅವರು, ಸಭಾನಡಾವಳಿ ಪಾಲಿಸದೆ, ಸಾಮಾನ್ಯ ಸಭೆ ಕರೆದಿರುವುದು ಸರಿಯಲ್ಲ ಎಎಂದು ಆರೋಪಿಸಿದ ಕಾರಣ ಅಧ್ಯಕ್ಷ ಬಸವಣ್ಣ ಸಭೆಯನ್ನು ಮುಂದೂಡಿದರು.
ಅರ್ಜಿ ಆಹ್ವಾನ
ಚಾಮರಾಜನಗರ: ಜಿಲ್ಲೆಯಲ್ಲಿ ವಿವಿಧ ತೋಟದ ಬೆಳೆಗಳಲ್ಲಿ ಅಂತರ ಬೆಳೆಯಾಗಿ ಬೆಳೆಯಬಹುದಾದ ಔಷಧೀಯ ಬೆಳೆಗಳ ಕುರಿತು ಫೈಟೋ ಕೆಮಿಕಲ್ ಅನಾಲಿಸಿಸ್ಗೆ ಸಂಬಂಧಿಸಿದ ಸಂಶೋಧನೆಗಾಗಿ ಬೈಬ್ಯಾಕ್ ವ್ಯವಸ್ಥೆ ಇರುವ ಖಾಸಗಿ ಕಂಪನಿಗಳಿಗೆ ನೀಡಲಿರುವ ಸಹಾಯಧನಕ್ಕಾಗಿ ರಾಷ್ಟ್ರೀಯ ಔಷಧ ಬೆಳೆ ಮಂಡಳಿ ಅರ್ಜಿ ಆಹ್ವಾನಿಸಿದೆ. ಆಸಕ್ತ ಖಾಸಗಿ ಕಂಪನಿಗಳು ಔಷಧೀಯ ಬೆಳೆಗಳ ಕುರಿತು ಯೋಜನಾ ವರದಿ ತಯಾರಿಸಿ ತೋಟಗಾರಿಕೆ ಉಪನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು. ಶೇ.50ರಷ್ಟು ಸಹಾಯಧನವನ್ನು ಇಲಾಖೆ ಖಾಸಗಿ ಕಂಪನಿಗಳಿಗೆ ನೀಡಲಿದೆ. ರೋಗ ಮತ್ತು ಕೀಟ ನಿರ್ವಹಣೆಗಾಗಿ ಸಾವಯವ ಕೀಟನಾಶಕಗಳನ್ನೇ ಬಳಸಬೇಕು. ಸಹಾಯಧನ ಸೌಲಭ್ಯ ಅರ್ಜಿ ಸಲ್ಲಿಕೆ ಹಾಗೂ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಕಚೇರಿ ಸಂಪರ್ಕಿಸಬಹುದು.