ಅಂಬಿಗರ ಚೌಡಯ್ಯ ಕೊಡುಗೆ ಅಪಾರ

Updated on: 

ಚಾಮರಾಜನಗರ: ಯಾರ ಮುಲಾಜಿಗೂ ಒಳಗಾಗದೆ, ತನ್ನ ಬೆಂಕಿಯಂಥ ಮಾತುಗಳಿಂದ ಸಮಾಜ ಪರಿವರ್ತನೆ ಮಾಡಲು ಹೊರಟ ಕಾಯಕ ಜೀವಿ ನಿಜಶರಣ ಅಂಬಿಗರ ಚೌಡಯ್ಯ ಎಂದು ಮೈಸೂರು ಜೆಎಸ್ಎಸ್ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ನಂದೀಶ್ ಹಂಚ್ಯ ತಿಳಿಸಿದರು.
ಅವರು ನಗರದ ಜಿಲ್ಲಾಡಳಿತ ಭವನದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಗಂಗಾಮತಸ್ಥರ ಸಂಘ ಇವರ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
12ನೇ ಶತಮಾನದ ಬಸವಣ್ಣ, ಅಲ್ಲಮಪ್ರಭು ಅವರು ವಚನ ಸಾಹಿತ್ಯ ಚಳವಳಿ ಸಂದರ್ಭದಲ್ಲಿ 360 ವಚನಕಾರರಲ್ಲಿ ಒಬ್ಬರಾದ ಅಂಬಿಗರ ಚೌಡಯ್ಯ ಸ್ವತಃ ಕಾಯಕ ಜೀವಿಯಾಗಿದ್ದು, ದೋಣಿ ನಡೆಸುವ ವೃತ್ತಿಯನ್ನು ಮಾಡುತ್ತ ಕಾಯಕ ಹಾಗೂ ಸಮಾಜ ಸುಧಾರಣೆಯಲ್ಲಿ ಬದುಕನ್ನು ತೇಯ್ದವರು. ಅಂದು ಶರಣರು ಮನೆ ಮನೆಗೆ ಹೋಗಿ, ಭಿಕ್ಷೆ ಬೇಡಿ ಹಸಿದು ಬಂದವರಿಗೆ ದಾಸೋಹ ನಡೆಸುತ್ತಿದ್ದರು. ಆದರೆ ಅಂಬಿಗರ ಚೌಡಯ್ಯ ಇದಕ್ಕೆ ವಿರುದ್ಧವಾಗಿದ್ದು, ಮಾನವ ತಾನು ದುಡಿದು ಬೇರೆಯವರಿಗೆ ನೀಡಬೇಕೆ ಹೊರತೂ, ಬೇರೆಯವರು ಕೊಟ್ಟದ್ದನ್ನು ಕೊಡುವುದು ದಾಸೋಹವಾಗುವುದಿಲ್ಲ ಎಂಬ ಎಚ್ಚರಿಕೆಯ ಪಾಠವನ್ನು ಸಮಾಜಕ್ಕೆ ರವಾನಿಸಿದ್ದರು ಎಂದರು.
ತನ್ನಲ್ಲೇ ದೇವರು: ವಚನಕಾರರಾದ ಬಸವಣ್ಣ ಅವರು ವಚನಗಳ ಅಂಕಿತವಾಗಿ ಕೂಡಲ ಸಂಗಮದೇವ, ಅಕ್ಕಮಹಾದೇವಿ ಚನ್ನಮಲ್ಲಿಕಾರ್ಜುನ, ಅಲ್ಲಮಪ್ರಭು ಗುಹೇಶ್ವರ ಎಂಬುದಾಗಿ ಬಳಸಿ ವಚನ ರಚನೆ ಮಾಡಿದ್ದರು.
ಆದರೆ ಅಂಬಿಗರ ಚೌಡಯ್ಯ ಅವರು ಕಟ್ಟಿದ ಲಿಂಗವ ಬಿಟ್ಟು ಬೆಟ್ಟದ ಲಿಂಗವನ್ನು ಪೂಜಿಸಲು ಹೋಗುವವವರನ್ನು ಏನೆನ್ನಬೇಕು ಎಂದು ಕಿಡಿಕಾರಿ ಆತ್ಮ ಲಿಂಗದ ಮುಂದೆ ಅನ್ಯ ದೈವವನ್ನು ಪೂಜಿಸಬಾರದು ಎಂದು ಸಮಾಜವನ್ನು ತಿದ್ದುವ ಮಹತ್ಕಾರ್ಯ ಕೈಗೊಂಡು ತನ್ನ ವಚನಗಳ ಅಂಕಿತವಾಗಿ ತನ್ನ ಹೆಸರನ್ನೇ ಬಳಸಿಕೊಂಡ ನಿಜಶರಣ ಅಂಬಿಗರ ಚೌಡಯ್ಯ ಎಂದರು.
ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು. ಜಿಪಂ ಅಧ್ಯಕ್ಷೆ ನಾಗಶ್ರೀ ಪ್ರತಾಪ್ ಮಾಲಾರ್ಪಣೆ ಮಾಡಿದರು. ಶಾಸಕ ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಪ ಸದಸ್ಯ ಪ್ರೊ. ಮಲ್ಲಿಕಾರ್ಜುನಪ್ಪ, ಚುಡಾ ಅಧ್ಯಕ್ಷ ಬಾಲಸುಬ್ರಹ್ಮಣ್ಯ, ನಗರಸಭಾಧ್ಯಕ್ಷೆ ಭಾಗ್ಯಮ್ಮ, ಕೆಎಸ್ಐಸಿ ಅಧ್ಯಕ್ಷ ನೂರೊಂದು ಶೆಟ್ಟಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ಆರ್.ಕೃಷ್ಣಮೂರ್ತಿ, ತಾಪಂ ಉಪಾಧ್ಯಕ್ಷೆ ಪಾರ್ವತಮ್ಮ, ಗುಂಡ್ಲುಪೇಟೆ ಶಾಸಕ ಮಹದೇವಪ್ರಸಾದ್, ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷ ಪುರುಷೋತ್ತಮ್, ಜಿಲ್ಲಾಧಿಕಾರಿ ಎನ್. ಜಯರಾಂ, ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಭಾರತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂಜಪ್ಪ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com