ವಿವಾಹ ನೋಂದಣಿಯಿಂದ ಮಹಿಳಾ ದೌರ್ಜನ್ಯಕ್ಕೆ ಕಡಿವಾಣ

Updated on: 

ಯಳಂದೂರು: ವಿವಾಹ ನೋಂದಣಿಯಿಂದ ಮಹಿಳಾ ದೌರ್ಜನ್ಯಕ್ಕೆ ಕಡಿವಾಣ ಹಾಕಬಹುದು. ಕಡ್ಡಾಯವಾಗಿ ವಿವಾಹ ನೋಂದಣಿ ಮಾಡಿಸುವುದರಿಂದ ಗಂಡ-ಹೆಂಡತಿಯರಲ್ಲಿ ಉತ್ತಮ ಬಾಂಧವ್ಯ ವೃದ್ಧಿಸುತ್ತದೆ
ಎಂದು ನ್ಯಾಯಾಧೀಶ ಎಚ್.ಆರ್.ರವಿಕುಮಾರ್ ತಿಳಿಸಿದರು.
ಅವರು ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಿವಾಹ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ವಿವಾಹವು ಗಂಡು-ಹೆಣ್ಣಿನ ನಡುವಿನ ಪವಿತ್ರ ಬಂಧನವಾಗಿದ್ದು, ಬದಲಾದ ಪರಿಸ್ಥಿತಿಯಲ್ಲಿ ಗಂಡು-ಹೆಣ್ಣಿನ ನಡುವೆ ವಿವಾದಗಳು ಬಂದಾಗ, ಮದುವೆಯಾದ ವರ ತಾನು ವಧುವಿನೊಂದಿಗೆ ಮದುವೆಯನ್ನೇ ಮಾಡಿಕೊಂಡಿಲ್ಲ ಮತ್ತು ಜನಿಸಿರುವ ಮಕ್ಕಳು ನಮ್ಮ ವಿವಾಹದಿಂದ ಜನಿಸಿಲ್ಲವೆಂದು ಕೆಲವು ಪ್ರಕರಣಗಳಲ್ಲಿ ಹೇಳುತ್ತಿರುವುದು ವಿಷಾದಕರ ಎಂದರು.
ಹೆಂಡತಿಯು ಗಂಡನ ಮೇಲೆ ಜೀವನಾಂಶಕ್ಕಾಗಿ ದಾವೆ ಹೂಡಿದ ಕಾಲಕ್ಕೆ ಅವರ ಮದುವೆಯನ್ನು ನಿರೂಪಿಸಲು ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದೆ ಹೆಂಡತಿಯು ನ್ಯಾಯಾಲಯದಲ್ಲಿ ಸೋತು ತನ್ನ ಜೀವನಾಂಶ ಕಳೆದುಕೊಂಡು ಸಮಾಜದಲ್ಲಿ ಅವಮಾನಿತಳಾಗಿ ದೌರ್ಜನ್ಯವನ್ನು ಅನುಭವಿಸುವಂತಾಗುತ್ತದೆ. ಇದನ್ನು ಮನಗಂಡು 1956ರ ಹಿಂದೂ ವಿವಾಹ ಅಧಿನಿಯಮದ ಕಲಂ 8ರನ್ವಯ ಸುಪ್ರೀಂ ಕೋರ್ಟ್ ಆದೇಶದಂತೆ ಭಾರತದ ಎಲ್ಲ ಧರ್ಮಗಳ ಪ್ರಜೆಗಳೂ ತಮ್ಮ ವಿವಾಹವನ್ನು ನೋಂದಣಿ ಮಾಡಿಸುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದರು.
ರಾಷ್ಟ್ರದಲ್ಲಿಯೇ ಮೊಟ್ಟಮೊದಲಾಗಿ ಈ ವಿವಾಹ ನೋಂದಣಿ ಅಭಿಯಾನವನ್ನು ರಾಜ್ಯದಲ್ಲೇ ಹಿಂದುಳಿದ ತಾಲೂಕೆನಿಸಿದ ಚಾಮರಾಜನಗರ ಜಿಲ್ಲೆಯ ಯಳಂದೂರಿಲ್ಲಿ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕು ವಕೀಲರ ಸಂಘ ಹಾಗೂ ಕಾನೂನು ಸೇವೆಗಳ ಸಮಿತಿ ವತಿಯಿಂದ ವಿವಿಧ ಹಂತಗಳಲ್ಲಿ ತಾಲೂಕಿನ ಎಲ್ಲ ಪ್ರಜೆಗಳ ವಿವಾಹವನ್ನು ನೋಂದಣಿ ಮಾಡಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ನಂತರ ಹಿರಿಯ ವಕೀಲ ಬಿ.ಎಂ.ಮಹಾದೇವಸ್ವಾಮಿ ಮಾತನಾಡಿ, ಅಪಾರ ದುಂದುವೆಚ್ಚ ಮಾಡಿ ಅದ್ಧೂರಿ ಮದುವೆಯಾಗುವ ಬದಲು ಸರಳ ವಿವಾಹವಾಗಿ ತಮ್ಮ ವಿವಾಹವನ್ನು ನೋಂದಣಿ ಮಾಡಿಕೊಂಡು ದಂಪತಿಗಳು ಸುಖ-ಸಂತೋಷದಿಂದ ಸಂಸಾರ ನಡೆಸಬೇಕೆಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಚಿನ್ನಸ್ವಾಮಿ, ಕಾರ್ಯದರ್ಶಿ ಎಂ. ಜೈಶಂಕರ್, ಮಾಜಿ ಅಧ್ಯಕ್ಷ ಮಾದೇಶ್, ವಕೀಲರಾದ ಸಿ.ಆರ್.ನಾಗರಾಜ, ಸಿ.ಸಿದ್ದರಾಜು, ಎಸ್.ಸಿದ್ದರಾಮು, ಮಂಜುನಾಥ್, ಶಶಿಧರ್, ಮಹಿಳಾ ಸಾಂತ್ವನ ಕೇಂದ್ರದ ಕವಿತಾ, ಉಪನೋಂದಣಾಧಿಕಾರಿ ರುದ್ರಯ್ಯ, ಸಿಪಿಐ ಕೀರ್ತಿ ಕುಮಾರ್, ಪಿಎಸ್‌ಐ ಚಿಕ್ಕರಾಜಶೆಟ್ಟಿ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com