ಚಾಮರಾಜನಗರ: ಪಂಚಾಯತ್ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ತಾವು ಕೆಲಸ ನಿರ್ವಹಿಸುವ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಸಂಪೂರ್ಣ ವಾಸ್ತವಾಂಶ ಅರಿತು, ಉದ್ಯೋಗ ಖಾತ್ರಿ ಯೋಜನೆಯನ್ನು ಅನುಷ್ಠಾನಗೊಳಿಸಿದಾಗ ಮಾತ್ರ ಅದರಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಸಂಸದ ಆರ್. ಧ್ರುವನಾರಾಯಣ ತಿಳಿಸಿದರು.
ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೈಸೂರು ವಿವಿ ಗಾಂಧಿ ಭವನ, ಚಾಮರಾಜನಗರ ಜಿಪಂ ಮತ್ತು ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಪಂಚಾಯತ್ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳಿಗೆ “ಸಾಕಾರಗೊಳ್ಳುತ್ತಿರುವ ಗಾಂಧೀಜಿಯ ಕನಸುಗಳು- ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನ ಮತ್ತು ಕುರಿತು ಏರ್ಪಡಿಸಿದ್ದ ಒಂದು ದಿನದ ಪುನಶ್ಚೇತನ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಈ ಯೋಜನೆಗೆ ಜಿಲ್ಲೆಗೆ ಬಿಡುಗಡೆಯಾಗಿರುವ ಹಣ 90 ಕೋಟಿ. ಆದರೆ ಖರ್ಚು ಮಾಡಿರುವುದು ಶೇ.22 ಮಾತ್ರ. ಆದ್ದರಿಂದ ಮುಂದಿನ ವರ್ಷ ಆದಷ್ಟು ಬೇಗ ಕ್ರಿಯಾಯೋಜನೆ ತಯಾರಿಸಿ ಎಂದರು.
ಜಿಲ್ಲೆಯಲ್ಲಿ ಕೆಲವು ಕಡೆ ಬಿಟ್ಟರೆ ನಿರೀಕ್ಷಿಸಿದ ಮಟ್ಟದಲ್ಲಿ ಯೋಜನೆ ಅನುಷ್ಠಾನಗೊಂಡಿಲ್ಲ. ಆದ್ದರಿಂದ ಪಂಚಾಯತ್ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ಗ್ರಾಮಗಳ ನಿಜವಾದ ಸ್ಥಿತಿ ಅರಿತು, ಯೋಜನೆ ಬಗ್ಗೆ ಅರಿವು ಮೂಡಿಸಿ, ಉದ್ಯೋಗ ಸೃಷ್ಟಿಸಿ, ನಿಜವಾದ ಫಲಾನುಭವಿಗಳನ್ನು ಆಯ್ಕೆ ಮಾಡಿ, ಕೆಲಸ ಕೊಟ್ಟಾಗ ಯೋಜನೆ ಪ್ರಗತಿ ಆಗಲು ಸಾಧ್ಯ. ಇಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹಲವಾರು ಜನಪರ ಯೋಜನೆಗಳು ಪಂಚಾಯತ್ ಮಟ್ಟದಲ್ಲೇ ಅನುಷ್ಠಾನಗೊಳ್ಳುವುದರಿಂದ ನಿಮ್ಮ ಜವಾಬ್ದಾರಿ ಹೆಚ್ಚು. ಈ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿ, ಗ್ರಾಮಗಳ ಅಭಿವೃದ್ಧಿಯಲ್ಲಿ ಖಾತ್ರಿ ಯೋಜನೆ ಮಹತ್ತರ ಪಾತ್ರ ವಹಿಸುತ್ತದೆ. ಜಿಲ್ಲೆಯ ಎಲ್ಲ ಪ್ರಾಥಮಿಕ ಶಾಲೆಗಳ ಕಾಂಪೌಂಡ್ ನಿರ್ಮಾಣಕ್ಕಾಗೇ ಈ ಯೋಜನೆಯಲ್ಲಿ 14 ಕೋಟಿ ಮೀಸಲಿರಿಸಲಾಗಿದೆ. ಈ ನಿಟ್ಟಿನಲ್ಲಿ ಯೋಜನೆಯ ಸಂಪೂರ್ಣ ಮಾಹಿತಿ ಪಡೆದು ಪ್ರಾಮಾಣಿಕ ಸೇವೆ ಸಲ್ಲಿಸಿ ಎಂದರು.
ಕಾರ್ಯಗಾರವನ್ನು ಉದ್ಘಾಟಿಸಿದ ಮೈಸೂರು ಸಂಸದ ಎಚ್. ವಿಶ್ವನಾಥ್ ಮಾತನಾಡಿ, ಸರ್ಕಾರಗಳು ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸುತ್ತವೆ. ಗ್ರಾಮೀಣ ಪ್ರದೇಶದಲ್ಲಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಖಾತ್ರಿ ಯೋಜನೆಯನ್ನು ಅನುಷ್ಠಾನಗೊಳಿಸಿದಾಗ ಈ ಯೋಜನೆ ಯಶಸ್ವಿಯಾಗುವುದರ ಜೊತೆ ಗ್ರಾಮೀಣ ಬಡ ಜನರ ಬದಕು ಹಸನಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಜಿಪಂ ಅಧ್ಯಕ್ಷೆ ನಾಗಶ್ರೀ ಪ್ರತಾಪ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಪಂ ಉಪಕಾರ್ಯದರ್ಶಿ ಶಂಕರರಾಜು, ತಾಪಂ ಇಒ ಜೈಕೃಷ್ಣ ಭಾಗವಹಿಸಿದ್ದರು. ಸಂಪನ್ನೂಲ ವ್ಯಕ್ತಿಗಳಾಗಿ ಮೈಸೂರು ವಿವಿಯ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗದ ಪ್ರೊ. ಡಿ.ಎಸ್.ಲೀಲಾವತಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ದೇವರಾಜು ಭಾಗವಹಿಸಿದ್ದರು. ಮೈಸೂರು ವಿವಿಯ ಗಾಂಧಿಭವನದ ಗೌರವ ನಿರ್ದೇಶಕ ಪ್ರೊ. ಸುಗೀತ ಸುವರ್ಣ ಉಪಸ್ಥಿತರಿದ್ದರು.