ಚಾಮರಾಜನಗರ: ಸರ್ಕಾರ ನೀಡುವ ಮೀಸಲಾತಿಯನ್ನು ಖಾಸಗಿ ವಲಯಗಳಿಗೂ ವಿಸ್ತರಣೆ ಮಾಡಿ, ಉದ್ಯೋಗಾವಕಾಶಗಳು ದೊರಕುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧಕ ಪ್ರೊ. ಶಿವಕುಮಾರ್ ಆಗ್ರಹಿಸಿದರು.
ಅವರು ನಗರದ ಜಿಲ್ಲಾಡಳಿತ ಭವನದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಬಹುಜನ ವಿದ್ಯಾರ್ಥಿ ಘಟಕದ ವತಿಯಿಂದ ಸಂವಿಧಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಬಹುಜನ ವಿದ್ಯಾರ್ಥಿಗಳು ಮತ್ತು ಯುವಜನರ ಹಕ್ಕೊತ್ತಾಯದ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ಸರ್ಕಾರಿ ವಲಯದಲ್ಲಿ ಉದ್ಯೋಗಾವಕಾಶಗಳು ಕಡಿಮೆಯಿದ್ದು, ಆಳಿದ ಸರ್ಕಾರಗಳು ಶೇ 0.5ಕ್ಕೆ ತಂದು ನಿಲ್ಲಿಸಿದ್ದು, ಖಾಸಗಿ ವಲಯದಲ್ಲಿ ಶೇ.1.75ರಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ಈ ಸಂಬಂಧ ದಲಿತರು, ಹಿಂದುಳಿದ ವರ್ಗದವರು, ಧಾರ್ಮಿಕ ಅಲ್ಪ ಸಂಖ್ಯಾತರು ಸರ್ಕಾರದ ಸೌಲಭ್ಯಗಳಿಂದ ದೂರವಾಗಲಿ ಎಂದು ಆ ವಲಯದಿಂದ ಉದ್ಯೋಗಾವಕಾಶಗಳನ್ನು ಕಡಿಮೆ ಮಾಡಿ ಖಾಸಗೀಕರಣ ಮಾಡಲು ಹೊರಟಿದೆ ಎಂದು ಆರೋಪಿಸಿದರು.
ಖಾಸಗಿಯವರಿಗೆ ಜಾಗ ನೀಡಬೇಡಿ: ಖಾಸಗಿಯವರು ಒಂದು ಕೈಗಾರಿಕೆ ಸ್ಥಾಪನೆ ಮಾಡಬೇಕಾದರೆ ಸರ್ಕಾರವೇ ಭೂಮಿ, ವಿದ್ಯುತ್, ನೀರಿನ ಸೌಕರ್ಯ ಒದಗಿಸಬೇಕು. ಅದಕ್ಕೆ ಸಾರ್ವಜನಿಕ ಹಣ ವೆಚ್ಚ ಮಾಡಬೇಕು. ಹೀಗೆ ನಮ್ಮ ಪದಾರ್ಥವನ್ನು ನೀಡಿ, ನಮಗೆ ಉದ್ಯೋಗ ಕಡಿತ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಮುಂಬರುವ ದಿನಗಳಲ್ಲಿ ಖಾಸಗಿಯವರು ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಅನುಮತಿ ಕೋರಿದರೆ ಸರ್ಕಾರದಿಂದ ಸಿಗುವ ಮೀಸಲಾತಿಯನ್ನು ಖಾಸಗಿ ವಲಯದಲ್ಲೂ ನೀಡುವ ಮೂಲಕ ಉದ್ಯೋಗಾವಕಾಶ ನೀಡಬೇಕು. ಆ ಮೂಲಕ ಬಹುಜನರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಮುಂದಾದಲ್ಲಿ ಮಾತ್ರ ಸರ್ಕಾರ ಜಾಗ ನೀಡಿ ಸೌಲಭ್ಯ ಕಲ್ಪಿಸಿ, ಇಲ್ಲದಿದ್ದರೆ ನಿರಾಕರಿಸಿ ಎಂದರು.
ಸರ್ಕಾರಿ ಹಾಸ್ಟೆಲ್ಗಳಲ್ಲಿ ಒಬ್ಬ ವಿದ್ಯಾರ್ಥಿಗೆ ತಿಂಗಳಿಗೆ 600 ಮಾತ್ರ ನೀಡುತ್ತಿದ್ದು, ಅದನ್ನು 1500ಕ್ಕೇರಿಸಬೇಕು. ಗ್ರಂಥಾಲಯ ತೆರೆಯಬೇಕು. 50 ಸಾವಿರ ಬ್ಯಾಕ್ಲಾಗ್ ಹುದ್ದೆ ಭರ್ತಿ ಮಾಡಬೇಕು. ಹಾಸ್ಟೆಲ್ನಲ್ಲಿ ಕುಡಿಯುವ ನೀರು ವ್ಯವಸ್ಥೆಗೆ ಸ್ವಂತ ಬೋರ್ವೆಲ್ ತೆಗೆಸಬೇಕು ಎಂಬ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲು ಪ್ರತಿ ಜಿಲ್ಲೆಯಲ್ಲೂ ಸಮಾವೇಶ ನಡೆಸಲಾಗುತ್ತಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಎನ್. ಜಯರಾಂ ಮಾತನಾಡಿ, ಜಿಲ್ಲೆಯಲ್ಲಿ ಕೈಗಾರಿಕೆಗಳಿಲ್ಲದೆ, ಸರ್ಕಾರದ ಯೋಜನೆಗಳನ್ನು ನಂಬಿ ಕೂರುವ ಸ್ಥಿತಿಯಿದೆ. ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಇಲ್ಲದಿರುವ ಸಾಕಷ್ಟು ಮಂದಿ ಇದ್ದಾರೆ. ಯುವ ಜನರಾದ ತಾವು ಗ್ರಾಮೀಣ ಪ್ರದೇಶದ ಜನರನ್ನು ಕರೆ ತಂದು ಅವರಿಗೆ ಸರ್ಕಾರದ ಯೋಜನೆಗಳನ್ನು ಪರಿಚಯಿಸುವ ದೊಡ್ಡ ಜವಾಬ್ದಾರಿ ನಿಮ್ಮ ಮೇಲಿದೆ. ಆಗ ಸಂವಿಧಾನ ದಿನಾಚರಣೆಗೆ ಅರ್ಥ ಬರುತ್ತದೆ. ಕೇವಲ ಹಕ್ಕೊತ್ತಾಯ ಮಾಡುವುದೇ ನಮ್ಮ ಕರ್ತವ್ಯವಾಗಬಾರದು ಎಂದು ಕಿವಿಮಾತು ಹೇಳಿದರು.
ಬಿವಿಎಸ್ ಜಿಲ್ಲಾಧ್ಯಕ್ಷ ಶ್ರೀಧರ್ ಸ್ವಾಗತಿಸಿದರು. ಸಂಯೋಜಕ ಪರ್ವತರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಇಡಿ ವಿದ್ಯಾರ್ಥಿನಿ ಎನ್.ಶಿಲ್ಪ ಪ್ರಬಂಧ ಮಂಡಿಸಿದರು. ರಾಜೇಂದ್ರ ಹಕ್ಕೋತ್ತಾಯ ಮಂಡಿಸಿದರು.
ಜಿಲ್ಲಾ ಪರಿಶಿಷ್ಟ ವರ್ಗಗಳ ಇಲಾಖಾಧಿಕಾರಿ ನಾಗರತ್ಮಮ್ಮ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಎಸ್. ಪ್ರತಿಭಾ, ಬಿಸಿಎಂ ಜಿಲ್ಲಾಧಿಕಾರಿ ಎಂ. ಪ್ರಕಾಶ್, ಬಿಎಸ್ಪಿ ಜಿಲ್ಲಾಧ್ಯಕ್ಷ ಅರಕಲವಾಡಿ ನಾಗೇಂದ್ರ, ಸಂಯೋಜಕ ಶಿವಮಲ್ಲು, ಬಿಎಸ್ಆರ್ ಜಿಲ್ಲಾಧ್ಯಕ್ಷ ಎಂ.ರಾಮಚಂದ್ರ, ತಾಲೂಕು ಜೆಡಿಎಸ್ ಅಧ್ಯಕ್ಷ ಮಂಗಲ ಶಿವಕುಮಾರ್, ತಾಲೂಕು ಘಟಕಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಜರಿದ್ದರು.