ಯಳಂದೂರು: ಪಟ್ಟಣದ ಆದರ್ಶ ಶಾಲೆಯು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಹಿನ್ನೆಲೆಯಲ್ಲಿ ಮಕ್ಕಳ ಪೋಷಕರು, ಶಾಲೆಗೆ ಮೂಲಭೂತ ಸೌಲಭ್ಯ ಕಲ್ಪಿಸಿ ಇಲ್ಲವೇ ವರ್ಗಾವಣೆ ಪತ್ರ ನೀಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಒತ್ತಾಯ ಮಾಡಿರುವ ಘಟನೆ ನಡೆದಿದೆ.
ಪಟ್ಟಣದಲ್ಲಿ ಆದರ್ಶ ಶಾಲೆಯನ್ನು ಕಳೆದ 3 ವರ್ಷದ ಹಿಂದೆ ತೆರೆಯಲಾಗಿದ್ದು, 206 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಶಾಲೆ ಆರಂಭವಾಗಿ 3 ವರ್ಷ ಕಳೆದರೂ ಅಗತ್ಯವಾಗಿ ಬೇಕಾದ ಕೊಠಡಿ, ಶೌಚಾಲಯ, ಕುಡಿಯುವ ನೀರು ಇನ್ನಿತರ ಸೌಲಭ್ಯಗಳೇ ಇಲ್ಲ. ಈ ನಡುವೆ ಕೊಠಡಿಗಳ ಮೇಲ್ಚಾವಣಿ ಕುಸಿದು ಬೀಳುವ ಹಂತದಲ್ಲಿದ್ದು, ಕಬ್ಬಿಣ ಮತ್ತು ಸಿಮೆಂಟ್ ಪುಡಿಪುಡಿಯಾಗಿ ಉದುರುತ್ತಿದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆತಂಕದಲ್ಲಿ ಪಾಠ ಪ್ರವಚನ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಇಷ್ಟೊಂದು ಸಮಸ್ಯೆಗಳಿದ್ದರೂ ಯಾರೂ ಗಮನ ಹರಿಸಿಲ್ಲ. ಆಕಸ್ಮಾತ್ ಚಾವಣಿ ಕುಸಿದು ಮಕ್ಕಳ ಪ್ರಾಣಹಾನಿಯಾದರೆ ಯಾರು ಹೊಣೆ? ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸದೆ ಹೋದರೆ ಮಕ್ಕಳನ್ನು ಶಾಲೆಗೆ ಶಾಲೆಗೆ ಕಳುಹಿಸುವುದಿಲ್ಲ ಎಂದು ಪೋಷಕ ಕಲೀ ಉಲ್ಲಾ ಖಾನ್ ಎಚ್ಚರಿಸಿದ್ದಾರೆ.