ಕ.ಪ್ರ.ವಾರ್ತೆ ಮೈಸೂರು ಜೂ. 2
ಆಟೋ ಚಾಲಕರು ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಪ್ರಯಾಣಿಕರು ಕರೆದ ಪ್ರದೇಶಕ್ಕೆ ಆಟೋ ಚಾಲಕರು ಹೋಗಬೇಕು ಎಂದು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಕೆ.ಪಿ. ಭೀಮಯ್ಯ ಸಲಹೆ ನೀಡಿದರು.
ಮೈಸೂರು ಆದರ್ಶ ಆಟೋರಿಕ್ಷಾ ಚಾಲಕರ ವೇದಿಕೆಯು ಬೂದುಗುಂಟೆ ಕಾಮಾಕ್ಷಮ್ಮ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ನೋಟ್ಪುಸ್ತಕ ವಿತರಣೆ, ಚಾಲಕರಿಗೆ ಪರಿಸರ ಹಾಗೂ ರಸ್ತೆ ಸುರಕ್ಷೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅಗತ್ಯ ದಾಖಲೆಗಳಲ್ಲಿ ಆಟೋದಲ್ಲಿ ಇರಬೇಕು. ಪರಿಸರ ಮಾಲಿನ್ಯ ಆಗದಂತೆ ಎಚ್ಚರ ವಹಿಸಬೇಕು ಎಂದರು. ಇದೇ ವೇಳೆ ಆಟೋ ಚಾಲಕರ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ ವಿತರಿಸಲಾಯಿತು. ಪಶ್ಚಿಮ ಆರ್ಟಿಒ ಜಿ. ಅರುಣ್ಕುಮಾರ್ಸಿಂಗ್, ಪೂರ್ವ ಆರ್ಟಿಒ ರಮೇಶ್ ದುಬೆ ಅವರು ಪರಿಸರ ಮಾಲಿನ್ಯ, ವಾಯು ಮಾಲಿನ್ಯ ತಡೆಗಟ್ಟುವ ಬಗ್ಗೆ ಆಟೋ ಚಾಲಕರಿಗೆ ಅರಿವು ಮೂಡಿಸಿದರು.
ವೇದಿಕೆಯ ಅಧ್ಯಕ್ಷ ಸರ್ದಾರ್ ಅಹಮದ್, ಪ್ರಧಾನ ಕಾರ್ಯದರ್ಶಿ ನಾಗರಾಜ ಇದ್ದರು.
Advertisement