ಕ.ಪ್ರ.ವಾರ್ತೆ ್ಣ ಚಾ.ನಗರ ್ಣ ಮಾ.29
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಿಂದ ಅರ್ಜಿಗಳನ್ನು ಸಲ್ಲಿಸಿದ್ದು, ಪರಿಶೀಲಿಸಿ, ಪಕ್ಷ ಸಂಘಟನೆಯಲ್ಲಿ ತೊಡಗಿರುವ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಬೇಕೆಂದು ನಗರ ಘಟಕದ ಅಧ್ಯಕ್ಷ ಸುಂದರ್ರಾಜ್ ರಾಜ್ಯ ಸಮಿತಿಯನ್ನು ಕೋರಿದ್ದಾರೆ.
ಪ್ರಾಮಾಣಿಕ ಕಾರ್ಯಕರ್ತರು, ಪಕ್ಷ ನಿಷ್ಠೆ ಇರುವವರಿಗೆ ಅವಕಾಶ ನೀಡುವ ಮೂಲಕ ಅವಕಾಶವಾದಿಗಳಿಗೆ ಮಣೆ ಹಾಕಬಾರದು. ಎಲ್ಲ ಪಕ್ಷದವರೊಂದಿಗೆ ನಿರಂತರ ಸಂಪರ್ಕ ಹೊಂದಿ ಪಕ್ಷ ಸಂಘಟನೆಯಿಂದಲೂ ದೂರ ಉಳಿದು, ಎಲ್ಲೂ ಅವಕಾಶ ದೊರೆಯದಿದ್ದಾಗ ಪಕ್ಷದ ಕಡೆಗೆ ವಾಲುವವರಿಗೆ ಸೊಪ್ಪು ಹಾಕದೆ, ಸಂಘಟನೆಗೆ ಬೆಲೆ ಕೊಡುವವರಿಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾರೆ.
ಪಕ್ಷದಿಂದ ಸ್ಪರ್ಧಿಸಲು ಕರ್ನಾಟಕ ರಾಜ್ಯ ರೇಷ್ಮೆ ನಿಗಮದ ಅಧ್ಯಕ್ಷ ನೂರೊಂದುಶೆಟ್ಟಿ, ಮಾಜಿ ಚುಡಾ ಅಧ್ಯಕ್ಷ ಆರ್.ಸುಂದರ್, ರಾಜ್ಯ ಎಸ್ಟಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಅರಕಲವಾಡಿ ಸೋಮನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಬಿ.ಶಾಂತಮೂರ್ತಿ ಕುಲಗಾಣ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಂ.ಎನ್. ನಂದೀಶ್ಕುಮಾರ್ ಮೂಡ್ಲುಪುರ ಅರ್ಜಿ ಸಲ್ಲಿಸಿದ್ದು, ಪಕ್ಷದ ರಾಜ್ಯ ಸಮಿತಿಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದ್ದಾರೆ.