ಯಳಂದೂರು: ರಾಷ್ಟ್ರಕ್ಕೆ ನಿಜವಾದ ಗೌರವ ಸಲ್ಲಿಸಬೇಕಾರೆ ಮೂಲಭೂತ ಕರ್ತವ್ಯಗಳ ಪಾಲನೆ ಅಗತ್ಯವಾಗಿದೆ ಎಂದು ಎಂದು ಸಿವಿಲ್ ನ್ಯಾಯಾಧೀಶ ಎಚ್.ಆರ್. ರವಿಕುಮಾರ ತಿಳಿಸಿದರು. ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘದ ವತಿಯಿಂದ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಎಸ್ಡಿವಿಎಸ್ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಮೂಲಭೂತ ಕರ್ತವ್ಯಗಳ ಬಗ್ಗೆ ಪ್ರಬಂಧ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ದಿಸೆಯಲ್ಲೇ ಮೂಲಭೂತ ಕರ್ತವ್ಯಗಳ ಪಾಲನೆ ಬಗ್ಗೆ ಅರಿವು ಮೂಡಿಸಬೇಕು, ಪ್ರತಿ ವಿದ್ಯಾರ್ಥಿಗಳು ಚಾಚು ತಪ್ಪದೆ ಪಾಲಿಸಬೇಕು. ಮೂಲಭೂತ ಕರ್ತವ್ಯಗಳನ್ನು ಪ್ರತಿಯೊಬ್ಬ ನಾಗರಿಕನೂ ಕಟ್ಟುನಿಟ್ಟಾಗಿ ಪಾಲಿಸಿದಾಗ ಮಾತ್ರ ರಾಷ್ಟ್ರ ಅಭಿವೃದ್ಧಿಯಾಗಲು ಸಾಧ್ಯ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಮಂಜುನಾಥ. ಸಂಸ್ಥೆ ಅಧ್ಯಕ್ಷ ವಿ.ಮಲ್ಲಿಕಾರ್ಜುನಸ್ವಾಮಿ ಮಾತನಾಡಿದರು. ವಕೀಲ ಜಯಶಂಕರ್ ಉಪನ್ಯಾಸ ನೀಡಿದರು. ನಾಗರಾಜಪ್ಪ, ಮುಖ್ಯ ಶಿಕ್ಷಕಿ ಶ್ರುತಿ, ಚೇತನ್, ಸುಂದರರಾಜ್ ಇತರರು ಇದ್ದರು.
ಎಂಇಎಸ್ ದಾಂದಲೆ
ಖಂಡಿಸಿ ಪ್ರತಿಭಟನೆ
ಚಾಮರಾಜನಗರ: ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ಕನ್ನಡಬಾವುಟ ಸುಟ್ಟು ಕನ್ನಡಾಂಬೆ ಶವಯಾತ್ರೆ ನಡೆಸಿರುವ ಕ್ರಮ ಖಂಡಿಸಿ, ಚಾಮರಾಜನಗರದಲ್ಲಿ ಕರ್ನಾಟಕ ಸೇನಾ ಪಡೆ ಕಾರ್ಯಕತರು ಪ್ರತಿಭಟನೆ ನಡೆಸಿದರು.ನಗರದ ನೃಪತುಂಗ ವೃತ್ತದಲ್ಲಿ ಎಂಇಎಸ್ ಪ್ರತಿಕೃತಿಗೆ ಉಗಿದು, ಬೆಂಕಿ ಇಟ್ಟು ಸುಟ್ಟು ತಮ್ಮ ಅಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸೇನಾಪಡೆ ಅಧ್ಯಕ್ಷ ಶ್ರೀನಿವಾಸಗೌಡ, ನಮ್ಮ ನೆಲದಲ್ಲಿ ಕನ್ನಡ ಬಾವುಟ ಸುಟ್ಟು, ಕನ್ನಡಾಂಬೆಯ ಶವಯಾತ್ರೆ ನಡೆಸಿರುವ ಎಂಇಎಸ್ ಕಾರ್ಯಕರ್ತರ ಉದ್ಧಟತನ ಅಕ್ಷಮ್ಯ, ಅವರು ಕನ್ನಡಿಗರ ಸ್ವಾಭಿಮಾನ ಕೆಣಕಿದ್ದಾರೆ, ಇಷ್ಟಾದರೂ ರಾಜ್ಯ ಸರ್ಕಾರ, ಜಿಲ್ಲಾಡಳಿತ ಜಾಣ ಕುರುಡು ಪ್ರದರ್ಶಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಎಂಇಎಸ್ ಕಾರ್ಯಕರ್ತರ ಅಟ್ಟಹಾಸ ತಡೆಗಟ್ಟದಿದ್ದರೆ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿ ಮನೆ ಮುತ್ತಿಗೆ ಹಾಕುವುದಾಗಿ ಇದೇ ಸಂದರ್ಭದಲ್ಲಿ ಎಚ್ಚರಿಸಿದರು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಚಾ.ವೆಂ.ರಾಜಗೋಪಾಲ್, ಚಾ.ಗು.ನಾಗರಾಜು, ಕಂಡಕ್ಟರ್ ಸೋಮನಾಯಕ, ಮಲ್ಲೇಶ್, ಟೈಲರ್ ನಟರಾಜು, ಅರುಣ್ಕುಮಾರಗೌಡ, ಕೆ.ವಿ.ರಾಜಣ್ಣ, ಶಂಕರರಾವ್, ಶಿವಕುಮಾರಗೌಡಸೇರಿದಂತೆ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.