ಜನಪ್ರತಿನಿಧಿಯೇ ಎಲ್ಲಿದೆ ರಸ್ತೆ ಬದಿ!

Updated on: 

ದೇವರಾಜು ಕಪ್ಪಸೋಗೆ
ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಕೇಂದ್ರವಾಗಿ 17 ವರ್ಷವಾದರೂ ಯಾವೊಬ್ಬ  ಅಧಿಕಾರಿಯಾಗಲಿ ಮತ್ತು ಜನಪ್ರತಿನಿಧಿಯಾಗಲಿ ನಗರದ ರಸ್ತೆಗಳ ಅಗಲೀಕರಣ ಮಾಡುವ ದೃಢ ನಿರ್ಧಾರ ಮಾಡದ ಪರಿಣಾಮ, ನಿತ್ಯ ಇಲ್ಲಿನ ಜನ ಜೀವ ಕೈಯಲ್ಲಿಡಿದುಕೊಂಡು ರಸ್ತೆಯಲ್ಲಿ ತಿರುಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲಾ ಕೇಂದ್ರವಾದ ಚಾಮರಾಜನಗರದಲ್ಲಿ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತ ಹೋಗುತ್ತಿದೆ. ಅಂತೆಯೇ ವಾಹನ ಸಂಖ್ಯೆಯೂ ದುಪ್ಪಟ್ಟಾಗಿದೆ. ಆದರೆ, ರಸ್ತೆಗಳು ಮಾತ್ರ ಇದ್ದ ರೀತಿಯಲ್ಲೇ ಇವೆ. ಆಡಳಿತ ನಡೆಸುವ ಮಂದಿಗೆ ದೂರದೃಷ್ಟಿ ಕೊರತೆ ಇರುವುದು ನಗರದ ರಸ್ತೆಗಳ ಸ್ಥಿತಿ ಗಮನಿಸಿದರೆ ಮನದಟ್ಟಾಗುತ್ತದೆ. ಇದರಿಂದಾಗಿ ನಗರದ ಹೃದಯಭಾಗದಲ್ಲಿ ಹಾದು ಹೋಗಿರುವ ಹೆಸರಿಗೆ ರಾಷ್ಟ್ರೀಯ ಹೆದ್ದಾರಿಯಾಗಿರುವ ರಾ-ಹೆ 209 ಎರಡು ಕಡೆ ಒತ್ತುವರಿಯಾಗಿ ಫುಟ್ಪಾತ್ ಇಲ್ಲದೆ ಗಲ್ಲಿಯಂತೆ ಕಿರಿದಾಗಿರುವುದೇ ಸಾಕ್ಷಿ.  
ಸದ್ಯಕ್ಕೆ  ಡಿವಿಯೇಷನ್ ಮತ್ತು ಬಿ.ರಾಚಯ್ಯ ಜೋಡಿರಸ್ತೆ, ಭುವನೇಶ್ವರಿ, ಸಂತೇಮರಹಳ್ಳಿ, ಗುಂಡ್ಲುಪೇಟೆ ವೃತ್ತ ಸೇರಿದಂತೆ  ಮುಖ್ಯ ವೃತ್ತಗಳು ಹಾಗೂ ಪ್ರಮುಖ ರಸ್ತೆಗಳನ್ನಾದರೂ ಅಗಲ ಮಾಡುವ ಕಾರ್ಯಕ್ಕೆ ನಗರಸಭೆ ಆಡಳಿತ ಮುಂದಾಗಬೇಕಾಗಿದೆ. ನಗರದ ಪ್ರಮುಖ ಎನಿಸಿದ ಜೋಡಿ ರಸ್ತೆಯಲ್ಲಿ ಪ್ರತಿದಿನ ಒಂದಿಲ್ಲೊಂದು ಅಪಘಾತ ತಪ್ಪಿದಲ್ಲ. ಇದಕ್ಕೆ ಇಕ್ಕಟ್ಟು ಕಾರಣ. ಇದು ಪೂರ್ಣ ವೈಜ್ಞಾನಿಕ ರಸ್ತೆ. ಈ ರಸ್ತೆಯಲ್ಲೇ ಸರಕಾರಿ ಜಿಲ್ಲಾಸ್ಪತ್ರೆ, ಜಿಲ್ಲಾಡಳಿತ ಭವನ, ಜೆಎಸ್ಎಸ್ ಕಾಲೇಜು, ಮೈಸೂರು ವಿವಿ ಉಪಗ್ರಹ ಕೇಂದ್ರ, ತಾಲೂಕು ಕಚೇರಿ, ಎಸ್ಪಿ ಕಚೇರಿ, ಡಿವೈಎಸ್ಪಿ ಕಚೇರಿಗಳಿದ್ದು, ಕೆಲಸ ಕಾರ್ಯಗಳಿಗೆ ತೆರಳುವ ಮಂದಿ ಹೆಚ್ಚು. ಅಲ್ಲದೆ, ರಾಮಸಮುದ್ರ, ಹೌಸಿಂಗ್ ಬೋರ್ಡ್ ಕಾಲೋನಿ ಜನತೆಯೂ ಇದೇ ರಸ್ತೆಯಲ್ಲೇ ಸಾಗಬೇಕು. ಇನ್ನು ಕಾಲೇಜು, ಚಿತ್ರ ಮಂದಿರ ಬಿಟ್ಟ ವೇಳೆಯಲ್ಲಿ ಈ ರಸ್ತೆಯಲ್ಲಿ ಸಂಚರಿಸುವುದು ಸಾಹಸವೇ ಸರಿ.
ಒಂದು ಭಾರಿ ವಾಹನ ಸಾಗುತ್ತಿದ್ದರೆ, ಅದನ್ನು ಮತ್ತೊಂದು ವಾಹನ ಹಿಂದಿಕ್ಕಲು ಸಾಧ್ಯವಾಗದಷ್ಟು ಕಿರಿದಾದ ರಸ್ತೆ ಇದು. ಈ ರಸ್ತೆಯ ಅಭಿವೃದ್ಧಿ ಕುರಿತು ಆಗಾಗ ಜನ ಪ್ರತಿನಿಧಿಗಳಿಂದ ಆಶ್ವಾಸನೆಗಳ ಸುರಿಮಳೆಯೇ ಹರಿಯುತ್ತದೆ. ಆದರೆ, ಅದು ಕಾರ್ಯಗತವಾಗಿಲ್ಲ. ಹೀಗಾಗಿ ನಿತ್ಯ ತಾಲೂಕು ಕಚೇರಿಯ ಬಳಿ, ಪಿಕಾರ್ಡೋ ನರ್ಸಿಂಗ್ ಹೋಂ ಬಳಿ ಹಾಗೂ ಜಿಲ್ಲಾಸ್ಪತ್ರೆ ಬಳಿಯಲ್ಲಿ ಅಪಘಾತಗಳು ತಪ್ಪಿದ್ದಲ್ಲ.  
ಫುಟ್ಪಾತ್ ಹುಡಕಬೇಕಿದೆ: ಇನ್ನೂ ಡಿವಿಯೇಷನ್ ರಸ್ತೆಯನ್ನಂತೂ ಎರಡು ಬದಿಯಲ್ಲಿ ತಲಾ 2.5 ಮೀಟರ್ ಸ್ಥಳವನ್ನು ವ್ಯಾಪಾರಿಗಳು ಅಕ್ರಮಿಸಿಕೊಂಡಿರುವುದರಿಂದ. ರಾಷ್ಟ್ರೀಯ ಹೆದ್ದಾರಿ 209ರಲ್ಲಿ ವಾಹನಗಳ ದಟ್ಟನೆ ನಡುವೆ ಸಾರ್ವಜನಿಕರು ಸಾಗಬೇಕಾಗಿದೆ.                 
ಸಮನ್ವಯತೆ ಕೊರತೆ: ಮೊದಲೇ ಜನಪ್ರತಿನಿಧಿಗಳಿಗಳಿಗೆ ರಸ್ತೆ ಆಗಲೀಕರಣ ಮನಸ್ಸಿಲ್ಲ. ಇದರಿಂದಾಗಿ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ರಸ್ತೆ ಅಗಲೀಕರಣ ಬಗ್ಗೆ ವಿಚಾರಿಸಿದರೆ ನಗರಸಭೆಯವರು ಪಿಡಬ್ಲ್ಯೂಡಿ ಕಡೆ, ಪೊಲೀಸರು ಆರ್ಟಿಒ ಕಡೆ, ಜಿಲ್ಲಾಡಳಿತ ಜನಪ್ರತಿನಿಧಿಗಳ ಕಡೆ  ಹೀಗೆ ಒಬ್ಬರು ಮತ್ತೊಬ್ಬರ ಕಡೆ ಕೈ ತೋರಿಸುತ್ತಾರೆ. ಇನ್ನೂ ಶಾಸಕರು, ಸಂಸದರು ಹಾಗೂ ಉಸ್ತುವಾರಿ ಸಚಿವರು ಸಹ ಈ ವಿಚಾರದಲ್ಲಿ ಸಮನ್ವಯತೆ ಸಾಧಿಸಿಲ್ಲ. ಪ್ರತಿಯೊಬ್ಬರು ಅವರು ಕೈ ಜೋಡಿಸಿದರೆ ನಾವು ಆಗಲೀಕರಣ ಮಾಡಲು ಸಿದ್ಧವಾಗಿದ್ದೇವೆ ಎನ್ನುವ ಹಾರಿಕೆ ಉತ್ತರ ನೀಡುತ್ತಾರೆ. ಯಾವಾಗ ರಸ್ತೆ ಆಗಲಿಕರಣವಾಗುತ್ತದೇ ಎಂಬುದನ್ನು ಮಲೆ ಮಹದೇಶ್ವರನೇ ಬಲ್ಲ.
ಏನೇನು ಆಗಬೇಕಿದೆ
-ಭುವನೇಶ್ವರಿ, ಸಂತೇಮರಹಳ್ಳಿ  ಗುಂಡ್ಲುಪೇಟೆ ವೃತ್ತಗಳು ನಗರದಲ್ಲಿ ಪ್ರಮುಖ ವಾದವು. ಆದರೆ, ಯಾವ ವೃತ್ತವೂ ವಿಶಾಲವಾಗಿಲ್ಲ. ಎಲ್ಲ ಚಿಕ್ಕಪುಟ್ಟವು. ಈ ಪುಟ್ಟ ವೃತ್ತಗಳಿಗೆ ಕಷ್ಟಪಟ್ಟು ಸಂಚಾರಿ ಸಿಗ್ನಲ್ ಲೈಟ್ಗಳನ್ನು ಅಳವಡಿಸಲಾಗಿದೆ. ಈ ವ್ಯವಸ್ಥೆ ಇಲ್ಲವಾಗಿದ್ದರೆ ಪರಿಸ್ಥಿತಿ ಇನ್ನು ಅಧ್ವಾನವಾಗಿರುತ್ತಿತ್ತು. ಈ ಪೈಕಿ ಸಂತೇಮರಹಳ್ಳಿ ವೃತ್ತ ತೀರ ಚಿಕ್ಕದು. 2007ರಲ್ಲೇ ಮಾಸ್ಟರ್ ಪ್ಲಾನ್ ಮಾಡಲಾಗಿದ್ದರೂ ವೃತ್ತಗಳ ವಿಸ್ತರಣೆ ನಡೆದಿಲ್ಲ.
-ಸಂತೇಮರಹಳ್ಳಿ ಕಡೆಯಿಂದ ಡಿವಿಯೇಷನ್ ರಸ್ತೆ ಅಥವಾ ನಂಜನಗೂಡು ಕಡೆಗೆ ತೆರಳುವ ವಾಹನಗಳನ್ನು ಇಲ್ಲಿ ತಿರುಗಿಸುವುದು ತೀರ ಕಷ್ಟದ ಕೆಲಸ. ಅಷ್ಟು ಚಿಕ್ಕದಾಗಿದೆ ಈ ವೃತ್ತ. ಇನ್ನೂ ಭುವನೇಶ್ವರಿ ವೃತ್ತದಲ್ಲಿ ಬಿ.ರಾಚಯ್ಯ ಜೋಡಿ ರಸ್ತೆಯಿಂದ ಬಂದ ವಾಹನಗಳನ್ನು ಎಡಕ್ಕಾಗಲಿ ಅಥವಾ ಬಲಕ್ಕಾಗಲಿ ತಿರುಗಿಸುವುದು ಸಹ ಕಷ್ಟದ ಕೆಲಸ.
ಇದರ ಅರಿವಿದ್ದರೂ ಅದನ್ನು ಅಗಲೀಕರಣ ಮಾಡುವ ಕಾರ್ಯಕ್ಕೆ ಯಾರೂ ಮುಂದಾಗಿಲ್ಲ.
-ಕಿರಿದಾದ ಹಾಗೂ ಪುಟ್ಟ ರಸ್ತೆಗಳಲ್ಲೇ ಸಾಮರ್ಥ್ಯ ಮೀರಿ ಲೋಡು ತುಂಬಿದ  ಲಾರಿಗಳು, ಟ್ರ್ಯಾಕ್ಟರ್ಗಳು ಸಂಚರಿಸುತ್ತವೆ. ಮರಳು ತುಂಬಿದ ಹಾಗೂ ಕಬ್ಬು ತುಂಬಿದ ಟ್ರ್ಯಾಕ್ಟರ್ಗಳ ಹಾವಳಿಯೇ ಹೆಚ್ಚು. ಕೃಷಿ ಚಟುವಟಿಕೆಗೇ ಸೀಮಿತವಾಗಿರಬೇಕಾದ ಟ್ರ್ಯಾಕ್ಟರ್ಗಳು ಮರಳು ಹೂಡುವ ದಂಧೆಯಲ್ಲಿ ತೊಡಗಿಸಿಕೊಂಡಿರುವುದೇ ಹೆಚ್ಚು. ಇನ್ನು ನಿಯಮ, ಸಾಮರ್ಥ್ಯ ಮೀರಿ ಕಬ್ಬನ್ನು ಟ್ರ್ಯಾಕ್ಟರ್ಗಳಿಗೆ ತುಂಬಲಾಗುತ್ತದೆ.
-ಟ್ರ್ಯಾಕ್ಟರ್ಗಳಿಂದಲೇ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಹೀಗಿದ್ದರೂ ಆರ್ಟಿಒ ಅಧಿಕಾರಿಗಳಾಗಲಿ, ಪೊಲೀಸರಾಗಲಿ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಕೆಲ ವರ್ಷಗಳ ಹಿಂದೆ ಭುವನೇಶ್ವರಿ ವೃತ್ತದಲ್ಲಿ ಶಾಲೆ ವಿದ್ಯಾರ್ಥಿನಿ ಮೇಲೆ ಟ್ರ್ಯಾಕ್ಟರ್ ಹರಿದಿತ್ತು.  ಡಿವಿಯೇಷನ್ ಇತ್ತೀಚಿಗೆ ಪಾದಚಾರಿ ಸಾವನಪ್ಪಿದ್ದ, ದೆಹಲಿ ದರ್ಬಾರ್ ಹೋಟೆಲ್ ಬಳಿಯಂತೂ ಆಗಾಗ್ಗೆ ಅಪಘಾತಗಳು ಸಂಭವಿಸಿ ಜನರು ಸಾವನಪ್ಪುತ್ತಲೇ ಇದ್ದಾರೆ.  ಕೆಲ ತಿಂಗಳುಗಳ ಹಿಂದೆ ಸಂತೇಮರಹಳ್ಳಿ ವೃತ್ತದಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್ ಪಲ್ಟಿ  ಹೊಡೆದಿತ್ತು.
-ಮೊದಲೇ ಚಿಕ್ಕದಾಗಿರುವ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ಯುವಕರು ಬೈಕ್ ಓಡಿಸುವುದು, ವಾಹನ ಸವಾರರು ವೇಗವಾಗಿ ಚಲಿಸುವುದು ನಡೆಯುತ್ತಿದ್ದರೂ ಟ್ರಾಫಿಕ್ ಸುಧಾರಣೆಯಾಗದ ಪರಿಣಾಮ, ಇದಕ್ಕೆ ಬ್ರೇಕ್ ಹಾಕುವವರೇ ಇಲ್ಲವಾಗಿದ್ದಾರೆ.


ಒತ್ತುವರಿ ತೆರವಿಗೆ ಇನ್ನೆಷ್ಟು ದಿನ ಬೇಕು?
ಅಭಿವೃದ್ಧಿಯ ಕನಸು ಹೊತ್ತು ಚಾಮರಾಜನಗರ ಮತದಾರರು ಶಾಸಕರು ಮತ್ತು ಸಂಸದರನ್ನ ತಲಾ ಎರಡು ಬಾರಿ ಹಾಗೂ ನಗರಸಭಾ ಅಧ್ಯಕ್ಷರನ್ನು 9 ಬಾರಿ ಆಯ್ಕೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಆದರೆ, ಜಿಲ್ಲಾ ಕೇಂದ್ರದ ಹೃದಯ ಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಒತ್ತುವರಿ ಮಾತ್ರ ಒಂದಿಚು ಅಲುಗಾಡಿಲ್ಲ.  ಇಲ್ಲಿನ ಅಧಿಕಾರಿಗಳಂತೂ ಶಂಖದಿಂದ ಬಿದ್ದರೆ ತೀರ್ಥ ಎಂಬಂತೆ ಜನಪ್ರತಿನಿಧಿಗಳಿಂದ ಹಲವು ಬಾರಿ ಒತ್ತಡ ಬಂದರೆ ಮಾತ್ರ ಯಾವುದೇ ಕೆಲಸ ಕೈಗೊಳ್ಳುತ್ತಾರೆ. ನಗರಾಭಿವೃದ್ಧಿ ನಿಟ್ಟಿನಲ್ಲಿ ಸ್ವಂತ ಯಾವುದೇ ನಿರ್ಧಾರ ಕೈಗೊಂಡ ಉದಾಹರಣೆ ಇಲ್ಲ. ಇಂತಹ ಮನೋಭಾವವುಳ್ಳ ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳಿಂದ ಚಾಮರಾಜನಗರ ಅಭಿವೃದ್ಧಿ ಸಾಧ್ಯವೇ ಎಂಬ ಪ್ರಶ್ನೆ ಜನ ಸಾಮಾನ್ಯರಲ್ಲಿ ಕಾಡುತ್ತಿದೆ. ನಗರದ ಡಿವಿಯೇಷನ್ ರಸ್ತೆಯಲ್ಲಿ ಸಂಚರಿಸಲು ಎಷ್ಟು ಕಷ್ಟ ಎಂಬುದನ್ನು ನಿಜವಾಗಿಯೂ ಅರಿಯಬೇಕಾದರೆ ಒಮ್ಮೆ ಜನಪ್ರತಿನಿಧಿಗಳು ಅಧಿಕಾರಿಗಳನ್ನು ಕರೆದುಕೊಂಡು ಬೆಳಗ್ಗೆ 8ರಿಂದ 10 ಗಂಟೆ ಅವಧಿಯಲ್ಲಿ ಸಂಚರಿಸಿದರೆ  ಪಾದಚಾರಿಗಳ ಕಷ್ಟ ಅರ್ಥವಾಗುತ್ತದೆ. ಎರಡು ಬದಿಯಲ್ಲಿ ಫುಟ್ಪಾತ್ ಇಲ್ಲದ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಜೊತೆ ಪಾದಚಾರಿಗಳು ಸಾಗಬೇಕಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com