ಚಾಮರಾಜನಗರ: ಕಟ್ಟಡ ನಿರ್ಮಾಣ ಕಾರ್ಮಿಕರು ಸುರಕ್ಷತೆ ಹಾಗು ಆರೋಗ್ಯದ ಬಗ್ಗೆ ಹೆಚ್ಚು ಅರಿವು ಮೂಡಿಸಿಕೊಳ್ಳುವ ಜೊತೆಗೆ ಕಟ್ಟಡ ನಿರ್ಮಾಣ ಹಾಗೂ ಬಾಲ ಕಾರ್ಮಿಕ ಕಾಯ್ದೆ ಬಗ್ಗೆ ತಿಳುವಳಿಕೆ ಮೂಡಿಸಿಕೊಂಡು ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಭೃಂಗೇಶ್ ಹೇಳಿದರು.
ನಗರದ ವಾಸವಿ ಮಹಲ್ನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಮತ್ತು ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಟ್ಟಡ ನಿರ್ಮಾಣ ಕಾಯಿದೆ ಮತ್ತು ಬಾಲ ಕಾರ್ಮಿಕ ಕಾಯ್ದೆ ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಸರ್ಕಾರ ಅನೇಕ ವಿಶೇಷ ಸವಲತ್ತುಗಳನ್ನು ನೀಡುತ್ತಿದೆ. ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು. ಕರ್ನಾಟಕ ರಾಜ್ಯ ಭಾರತ ಮಾತ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಜಿ.ಸಿದ್ದರಾಜು ಮಾತನಾಡಿ, ಕಾರ್ಮಿಕ ಕಾಯ್ದೆ ಕುರಿತು ಜಾಗೃತಿ ಮೂಡಿಸಿ ಕಟ್ಟಡ ಕಾರ್ಮಿಕರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಹಿರಿಯ ಕಾರ್ಮಿಕ ನಿರೀಕ್ಷಕಿ ಜಿ.ಬಿ. ವೀಣಾ, ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಕುಮಾರ್, ಚಾಮರಾಜನಗರ ಅಧ್ಯಕ್ಷ ಸಿದ್ದರಾಜು, ಉಪಾಧ್ಯಕ್ಷ ಗೋಪಾಲಶೆಟ್ಟಿ, ರಾಜ್ಯ ಉಪಾಧ್ಯಕ್ಷ ಆಕ್ರಮ್, ಬಾಲ ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ಎಂ.ಮಹೇಶ್, ಬೆಳಕು ಬಾಲ ಕಾರ್ಮಿಕರ ಸಂಘದ ನಿರ್ದೇಶಕ ಬಸವರಾಜು, ವಕೀಲರ ಸಂಘದ ಕಾರ್ಯದರ್ಶಿ ಚಿನ್ನಸ್ವಾಮಿ, ಕಾರ್ಮಿಕರ ಸಂಘದ ಶಿವಣ್ಣ ಇನ್ನಿತರರು ಇದ್ದರು.
Advertisement