ಕ.ಪ್ರ. ವಾರ್ತೆ, ಬನ್ನೂರು, ಆ.6
ತಮ್ಮದು ರೈತರ, ಬಡವರ, ಹಿಂದುಳಿದವರ ಹಾಗೂ ಅಲ್ಪಸಂಖ್ಯಾತರ ಪರ ಸರ್ಕಾರ. ಮುಂದಿನ ನಾಲ್ಕು ವರ್ಷಗಳಲ್ಲಿ ಹಳ್ಳಿಗಾಡಿನ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬನ್ನೂರು ಪಟ್ಟಣದಲ್ಲಿ ಬುಧವಾರ ಕೇಂದ್ರ ಸರ್ಕಾರದ ಭೂಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯ, ರಾಜ್ಯ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ರಾಷ್ಟ್ರೀಯ ಹೆದ್ದಾರಿಗಳ ವಿಭಾಗದ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೊರಟಗೆರೆ- ಬಾವಲಿ ರಸ್ತೆ ರಾಜ್ಯ ಹೆದ್ದಾರಿ 33 ರಲ್ಲಿ 154.77 ಕಿ.ಮೀನಿಂದ 180.97 ಕಿ.ಮೀ.ವರೆಗೆ 59 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾದ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಬನ್ನೂರು ಪಟ್ಟಣದ ಪರಿಮಿತಿಯಲ್ಲಿ ಚತುಷ್ಪಥ ರಸ್ತೆ ಕಾಮಗಾರಿಗೆ ಈ ಸಂದರ್ಭದಲ್ಲಿ ಚಾಲನೆ ನೀಡಿದರು.
ಇದೇ ವೇಳೆ 22.7 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಬನ್ನೂರು ಪಟ್ಟಣಕ್ಕೆ ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಸುವ ಯೋಜನೆಗೂ ಅವರು ಶಂಕುಸ್ಥಾಪನೆ ನೆರವೇರಿಸಿದರು.
ರಸ್ತೆ ಅಭಿವೃದ್ಧಿ ತಮ್ಮ ಸರ್ಕಾರದ ಆದ್ಯತೆಯಾಗಿದ್ದು ಕಳೆದ ಒಂದು ವರ್ಷದಲ್ಲಿ ಮೈಸೂರು ಜಿಲ್ಲೆಯೊಂದರಲ್ಲಿಯೇ ರಸ್ತೆ ಅಭಿವೃದ್ಧಿಗೆ 680 ಕೋಟಿ ವೆಚ್ಚ ಮಾಡಲಾಗಿದೆ. ಮೈಸೂರು- ಮಳವಳ್ಳಿ ರಸ್ತೆಯನ್ನು ಸಹ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಸಂಸದ ಧ್ರುವನಾರಾಯಣ್ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿಸಿದರು.
ಅನ್ನಭಾಗ್ಯ ಯೋಜನೆಯಡಿ ರಾಗಿ ಹಾಗೂ ಜೋಳ ಸಹ ವಿತರಿಸಲು ತೀರ್ಮಾನಿಸಿದ್ದು ಜೋಳ ಹಾಗೂ ರಾಗಿಗೆ ಕ್ವಿಂಟಲ್ಗೆ 2000 ಬೆಂಬಲ ಬೆಲೆ ಈಗಾಗಲೇ ಘೋಷಿಸಲಾಗಿದೆ. ಲೀಟರ್ ಹಾಲಿಗೆ 4 ಸಹಾಯಧನ ನೀಡುವ ಯೋಜನೆಯಿಂದ 818 ಕೋಟಿ ಹಣ ರೈತರಿಗೆ ವರ್ಗಾವಣೆಯಾಗಿದೆ ಎಂದು ಹೇಳಿದರು.
ಅನ್ನಭಾಗ್ಯ ಯೋಜನೆಯಿಂದಾಗಿ ಬಡವರು ನೆಮ್ಮದಿಯಾಗಿ ಎರಡು ಹೊತ್ತು ಹೊಟ್ಟೆ ತುಂಬಾ ಊಟ ಮಾಡುವಂತಾಗಿದೆ. ರಾಜ್ಯದ 6.5 ಕೋಟಿ ಜನಸಂಖ್ಯೆಯ ರಾಜ್ಯದಲ್ಲಿ 4.5 ಕೋಟಿ ಜನ ಅನ್ನಭಾಗ್ಯ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ವರ್ಷಕ್ಕೆ 4500 ಕೋಟಿಯನ್ನು ಯೋಜನೆಗಾಗಿ ಒದಗಿಸಲಾಗುತ್ತಿದ್ದು, ಅನ್ನಭಾಗ್ಯ ಯೋಜನೆಯ ಆಹಾರ ಧಾನ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಇಲ್ಲವೇ ದುರುಪಯೋಗ ಮಾಡಿಕೊಳ್ಳುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ಎಚ್ಚರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಬನ್ನೂರು ಭಾಗದ ರೈತರ ಬಹುದಿನ ಬೇಡಿಕೆಯಾಗಿದ್ದ ರಾಮಸ್ವಾಮಿ ನಾಲೆಯ ಆಧುನೀಕರಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ. 202 ಕಿ.ಮೀ. ಉದ್ದದ ನಾಲೆ ಆಧುನೀಕರಣಕ್ಕೆ 80 ಕೋಟಿ ಮಂಜೂರಾಗಿದೆ. 18 ಕೋಟಿ ವೆಚ್ಚದಲ್ಲಿ ಮಾಧವಮಂತ್ರಿ ನಾಲಾ ಆಧುನೀಕರಣ ಸಹ ಕೈಗೆತ್ತಿಕೊಳ್ಳಲಾಗಿದೆ ಎಂದರು.
ರಾಜ್ಯ ಹೆದ್ದಾರಿ 33ರ (ಕೊರಟಗೆರೆ- ಬಾವಲಿ) ರಸ್ತೆಯ 154.77 ಕಿ.ಮೀ.ನಿಂದ 154.77 ಕಿ.ಮೀ. ವರೆಗೆ ಮಳವಳ್ಳಿಯಿಂದ ಮೈಸೂರಿನವರೆಗೆ ಬನ್ನೂರು ಮುಖಾಂತರ ಹಾದು ಹೋಗಿದ್ದು ಈ ರಸ್ತೆಯನ್ನು ಅಭಿವೃದ್ಧಿಗೊಳಿಸುವ ಸಲುವಾಗಿ ಕೇಂದ್ರ ರಸ್ತೆ ನಿಧಿ ಅಡಿಯಲ್ಲಿ 26 ಕೋಟಿಗೆ ಹಾಗೂ ರಾಜ್ಯ ಅನುದಾನದಡಿಯಲ್ಲಿ 33.50 ಕೋಟಿಗೆ ಅನುಮೋದನೆ ನೀಡಲಾಗಿದೆ. ಈ ರಸ್ತೆಯ ಕಿ.ಮೀ. ಸಂಖ್ಯೆ 154.77 ರಿಂದ 160.00 ಕಿ.ಮೀ. ವರೆಗೆ ಮತ್ತು 163.30 ರಿಂದ 166.00 ಕಿ.ಮೀ. ವರೆಗೆ ಚಾಮನಹಳ್ಳಿ ಗೇಟ್ನಿಂದ ಬನ್ನೂರು ಪಟ್ಟಣದ ಗಡಿಯವರೆಗೆ 4 ಪಥದ ರಸ್ತೆ, ಸರ್ವೀಸ್ ರಸ್ತೆ, ಸೇತುವೆ ಹಾಗೂ ಕಲ್ವರ್ಟ್ಗಳನ್ನು ಒಳಗೊಂಡಂತೆ ಮತ್ತು ರಸ್ತೆಯ ವಿಭಜಕಗಳನ್ನು ಅಳವಡಿಸಿಕೊಂಡು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಸಂಸದ ಧ್ರುವನಾರಾಯಣ್ ಮಾತನಾಡಿ, ಅನ್ನಭಾಗ್ಯ, ಕ್ಷೀರಭಾಗ್ಯ, ಸಾಲಮನ್ನಾ ಮೊದಲಾದ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿರುವ ರಾಜ್ಯ ಸರ್ಕಾರ ಕಳೆದೊಂದು ವರ್ಷದಲ್ಲಿ 6500 ಕೋಟಿ ನೆರವನ್ನು ಫಲಾನುಭವಿಗಳಿಗೆ ಒದಗಿಸಿದೆ ಎಂದು ಹೇಳಿದರು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಆರ್. ಧರ್ಮಸೇನ, ಜಿಪಂ ಅಧ್ಯಕ್ಷೆ ಡಾ.ಪುಷ್ಪಾವತಿ ಅಮರನಾಥ್, ಉಪಾಧ್ಯಕ್ಷ ಎಲ್.ಮಾದಪ್ಪ, ಟಿ. ನರಸೀಪುರ ತಾಪಂ ಅಧ್ಯಕ್ಷೆ ಸುಧಾ ನಾಗಣ್ಣ, ಉಪಾಧ್ಯಕ್ಷ ರಾಮಕೃಷ್ಣ, ಬನ್ನೂರು ಪುರಸಭೆ ಅಧ್ಯಕ್ಷ ಅಜೀಜುಲ್ಲಾ, ಉಪಾಧ್ಯಕ್ಷ ಬಿ.ಎಸ್.ರವೀಂದ್ರಕುಮಾರ್. ಮಾಜಿ ಶಾಸಕರಾದ ಕೆ. ಮಾದೇಗೌಡ, ಎಸ್. ಕೃಷ್ಣಪ್ಪ, ಇದ್ದರು.
ದುಡಿಯದೇ ಮಲಗಿದ್ದಾರಾ?
ಅನ್ನಭಾಗ್ಯ ಯೋಜನೆಯ ಟೀಕಾಕಾರರಿಗೆ ಸ್ಪಷ್ಟ ಮಾತುಗಳಲ್ಲಿ ಉತ್ತರ ನೀಡಿದ ಸಿದ್ದರಾಮಯ್ಯ, ಅನ್ನಭಾಗ್ಯ ಯೋಜನೆಯಿಂದ ಕೂಲಿಕಾರ್ಮಿಕರು ಆರಾಮವಾಗಿ ಎರಡು ಹೊತ್ತು ಮಾಡಿ ಮಲಗಿ ಬಿಡುತ್ತಿದ್ದಾರೆ. ಇದರಿಂದ ಅವರು ಉದ್ಧಾರವಾಗುವುದಿಲ್ಲ ಎನ್ನುವುದಾದರೆ ಎರಡು ಹೊತ್ತು ಊಟ ಮಾಡುವ ಶ್ರೀಮಂತರೆಲ್ಲಾ ದುಡಿಯದೇ ಮಲಗಿದ್ದಾರಾ ಎಂದು ಪ್ರಶ್ನಿಸಿದರು. ಇದೇ ಮೊದಲ ಬಾರಿಗೆ ಪರಿಶಿಷ್ಟ ಜಾತಿ ಹಾಗೂ ಪಂಗಡ ಜನರಿಗೆ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ನಲ್ಲಿ ಹಣ ಕಾಯ್ದಿರಿಸಲಾಗಿದೆ. ಇದರಿಂದಾಗಿ ಕಳೆದ ವರ್ಷ 8 ಸಾವಿರ ಕೋಟಿ ಇದ್ದ ಅನುದಾನ ಈ ವರ್ಷ 15,836 ಕೋಟಿಗೆ ಏರಿಕೆಯಾಗಿದೆ. ಒದಗಿಸಿದ ಅನುದಾನವನ್ನು ಅದೇ ವರ್ಷದಲ್ಲಿ ವೆಚ್ಚ ಮಾಡಬೇಕಾಗಿದೆ. ತಪ್ಪಿದಲ್ಲಿ ಅಂತಹ ಅಧಿಕಾರಿಗಳು ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಹೇಳಿದರು.
Advertisement