ಬನ್ನೂರು: ರೈತರ ಸಮಸ್ಯೆ ಬಗೆಹರಿಸುವಂತೆ ಒತ್ತಡ ಹೇರಲು ನಿರ್ಧರಿಸಿದ್ದ ಕಬ್ಬು ಬೆಳೆಗಾರರು ಕಪ್ಪು ಬಾವುಟ ಪ್ರದರ್ಶಿಸುವ ಬದಲಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಪ್ರಸಂಗ ಬುಧವಾರ ಪಟ್ಟಣದಲ್ಲಿ ನಡೆಯಿತು.
ರೈತರ ಸಮಸ್ಯೆಗಳ ಬಗೆಹರಿಸದೆ ನಿರ್ಲಕ್ಷಿಸಿ ರಸ್ತೆ ನಿರ್ಮಾಣದ ಪೂಜೆ ನಡೆಸುವ ನಾಟಕೀಯ ವ್ಯವಸ್ಥೆಗೆ ಧಿಕ್ಕರಿಸಿ ಕಪ್ಪು ಬಾವುಟ ಪ್ರದರ್ಶಿಸಲು ರೈತರು ಸಜ್ಜಾಗಿದ್ದನ್ನು ಗಮನಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ, ಜಿಲ್ಲಾಧಿಕಾರಿ ಎಸ್. ಪಾಲಯ್ಯ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್ಕುಮಾರ್ ಸಂಧಾನ ನಡೆಸಿ, ಮನವೊಲಿಸುವಲ್ಲಿ ಯಶಸ್ವಿಯಾದರು. ಅಲ್ಲದೇ ಶಾಂತಿಯುತವಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಿ ಪರಿಹಾರ ಕೊಡಿಸುವುದಾಗಿ ಷರತ್ತು ವಿಧಿಸಿದ ಮೇಲೆ ಪ್ರತಿಭಟನೆ ಕೈಬಿಡಲಾಯಿತು.
ನಂತರ ಪಟ್ಟಣದ ಫುಟ್ಬಾಲ್ ಮೈದಾನದಲ್ಲಿ ಕಾರ್ಯಕ್ರಮ ನಡೆಯುವ ಸ್ಟಾರ್ಟಿಂಗ್ ಪಾಯಿಂಟ್ನಲ್ಲಿ ಜಮಾಸಿದ್ದ 200ಕ್ಕೂ ಹೆಚ್ಚು ರೈತರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿದರು. ಇದೇ ವೇಳೆ ರೈತರು ಹಾಗೂ ಬನ್ನೂರು ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಆಗಬೇಕಾದ ಕೆಲಸ ಕಾರ್ಯಗಳನ್ನು ಒದಗಿಸುವಂತೆ ಮನವಿ ಪತ್ರ ಸಲ್ಲಿಸಿದರು. ಇವರ ಮನವಿ ಆಲಿಸಿದ ಮುಖ್ಯಮಂತ್ರಿಗಳು ಎಲ್ಲ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಬನ್ನೂರು ಹೋಬಳಿಯ ತುರಗನೂರು ಗ್ರಾಪಂ ಕಾರ್ಯಾಲಯದ ಕಟ್ಟಡ ನಿರ್ಮಾಣವನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಯು ಬೇಸ್ಮೆಂಟ್ ಹಂತಕ್ಕೆ ಮುಗಿದಿದೆ. ನಂತರ ಕೆಲಸ ಮಾಡಲು ತೊಂದರೆಯಾಗಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಈ ಸಂಬಂಧ ಈಗಿರುವ ಸಮಸ್ಯೆಯನ್ನು ಪರಿಹರಿಸಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳುವಂತೆ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು
Advertisement