ಗುಂಡ್ಲುಪೇಟೆ: ಬಚಪನ್ ಬಚಾವೋ ಆಂದೋಲನವು ಪಂಚಾಯ್ತಿ ವ್ಯಾಪ್ತಿಯಲ್ಲಿ ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿಯುವಲ್ಲಿ ಹಾಗೂ ಮಕ್ಕಳ ಸಮಸ್ಯೆಗಳ ಬಗ್ಗೆ ತ್ವರಿತಗತಿಯಲ್ಲಿ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ರುದ್ರವ್ವ ಹೇಳಿದರು.ತಾಲೂಕಿನ ಮಂಗಲ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ಬಚಪನ್ ಬಚಾವೋ ಆಂದೋಲನ ಸಂಸ್ಥೆ ಮತ್ತು ಸಮಷ್ಟಿ ಸಮಗ್ರ ಅಭಿವೃದ್ಧಿ ಟ್ರಸ್ಟ್ ಸಹಯೋಗದಲ್ಲಿ ನಡೆದ ಚುನಾಯಿತ ಬಾಲ ಪಂಚಾಯಿತಿ ಮಕ್ಕಳ ಪದಾಧಿಕಾರ ಮತ್ತು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಚುನಾಯಿತ ಬಾಲ ಪಂಚಾಯ್ತಿ ಮಕ್ಕಳಗೆ ಪ್ರಮಾಣ ವಚನ ಬೋಧಿಸಿದ ಅವರು, ಇಂದಿನಿಂದ ಒಂದು ವರ್ಷದ ಅವಧಿಯವರೆಗೆ ಅಸ್ತಿತ್ವದಲ್ಲಿರುವಂತೆ ರೂಪುಗೊಂಡಿರುವ ಬಾಲ ಪಂಚಾಯಿತಿಯಾಗಲಿ ಎಂದರು.ಮಕ್ಕಳು ಬಹುತೇಕ ಎಲ್ಲಾ ಸಮುದಾಯಗಳ ಆಸ್ತಿ, ಮಕ್ಕಳು ನೆಮ್ಮದಿ, ಸುಖ, ಸಂತೋಷ ಕಲಿಯುವ ವಾತಾವರಣದಲ್ಲಿ ಬೆಳದರೆ ಅಂತಹವರಿಂದ ಸಮುದಾಯಕ್ಕೆ ಅರ್ಥಪೂರ್ಣ ಭವಿಷ್ಯ ಇರುತ್ತದೆ ಎಂದು ಸಮಷ್ಟಿ ಸಮಗ್ರ ಅಭಿವೃದ್ಧಿ ಟ್ರಸ್ಟ್ ಕಾರ್ಯನಿರ್ವಾಹಕ ಗಂಗಾಧರಸ್ವಾಮಿ ಹೇಳಿದರು.ಗ್ರಾಪಂ ಅಧ್ಯಕ್ಷೆ ಸುನಂದಾ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಿಗೆ ಪರಿಕರಗಳನ್ನು ವಿತರಿಸಲಾಯಿತು. ಗ್ರಾಪಂ ಕಾರ್ಯದರ್ಶಿ ಮಹಾದೇವಯ್ಯ, ಗ್ರಾಪಂ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
Advertisement