ರಾಜಕೀಯ ಬಿಡಿ, ಅಭಿವೃದ್ಧಿಗೆ ಕೈ ಜೋಡಿಸಿ

Updated on

ಕ.ಪ್ರ. ವಾರ್ತೆ, ಬನ್ನೂರು, ಆ.6
ರಾಜಕೀಯ ಕಡಿಮೆ ಮಾಡಿ. ಕೆಲಸಕ್ಕೆ ಬಾರದ ಮಾತು ನಿಲ್ಲಿಸಿ, ಈ ಅಭಿವೃದ್ಧಿಗೆ ದುಡಿಯೋಣ ನಮ್ಮೊಂದಿಗೆ ಕೈಜೋಡಿಸಿ...
- ಇದು ಟಿ. ನರಸೀಪುರ ಕ್ಷೇತ್ರದ ಶಾಸಕರೂ ಆದ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಪ್ರತಿಪಕ್ಷದವರಿಗೆ ಮಾಡಿದ ಮನವಿ.
ಬುಧವಾರ ಪಟ್ಟಣದ ಫುಟ್ಬಾಲ್ ಮೈದಾನದಲ್ಲಿ ನಡೆದ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಸಭೆಯಲ್ಲಿ ರಾಜಕೀಯ ಮಾತನಾಡುವ ಅಗತ್ಯವೂ ಇಲ್ಲ. ಅನಿವಾರ್ಯತೆಯೂ ನಮಗಿಲ್ಲ. ಆದರೆ ಅಭಿವೃದ್ಧಿ ಕೆಲಸ ಮಾಡಲು ನಾವು ಬದ್ಧರಾಗಿದ್ದೇವೆ. ನೀವು ಕೂಡ ಕೈಜೋಡಿಸಿ, ಸಂತೆಮಾಳದಲ್ಲಿ ನಿಂತು ಮಾತನಾಡುವುದನ್ನು ಬಿಡಿ ಎಂದು ಟೀಕಾಕಾರರಿಗೆ ಸಲಹೆ ಮಾಡಿದರು. ಕಾವೇರಿ ನೀರಾವರಿ ನಿಗಮದಿಂದ ಸಿಡಿಎಸ್ ನಾಲೆ ಆಧುನೀಕರಣ ಮಾಡಲಾಗಿದೆ. ಈಗ ರಾಮಸ್ವಾಮಿ ನಾಲೆಯ ಆಧುನೀಕರಣವೂ ನಡೆಯುತ್ತಿದೆ. ಟಿ.ನರಸೀಪುರ ಪಪಂವನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಲಾಗಿದೆ.  ಚಾಮನಹಳ್ಳಿಯನ್ನು ಬನ್ನೂರು ಪುರಸಭೆ ವ್ಯಾಪ್ತಿಗೆ ತರಲಾಗುತ್ತಿದೆ. ಕೊಡಗಳ್ಳಿ, ಅತ್ತಹಳ್ಳಿ ಕಾಮಗಾರಿ ಕೂಡ ಸದ್ಯದಲ್ಲಿಯೇ ಆರಂಭವಾಗಲಿದೆ. ಟಿ.ನರಸೀಪುರ ತಾಲೂಕಿನಲ್ಲಿಯೇ 500- 600 ಕೋಟಿ ಕಾಮಗಾರಿಗಳು ನಡೆದಿವೆ. ಇವು ಅಭಿವೃದ್ಧಿ ಕಾರ್ಯಗಳಲ್ಲವೇ ಎಂದು ಪ್ರಶ್ನಿಸಿದರು.
ಉತ್ತರದ ಬೀದರ್ನಿಂದ ದಕ್ಷಿಣದ ಚಾಮರಾಜನಗರವರೆಗೆ ರಸ್ತೆ ಸಂಪರ್ಕ ಉತ್ತಮಪಡಿಸಲಾಗಿದೆ. ಬೆಂಗಳೂರು- ಬಂಟ್ವಾಳ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗುತ್ತಿದೆ ಎಂದು ಹೇಳಿದರು. ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅನ್ನಭಾಗ್ಯ ಯೋಜನೆ ಜಾರಿ ಮಾಡಲಾಗಿದೆ. ನೀರಾವರಿಗೆ 11,000 ಕೋಟಿ ಒದಗಿಸಲಾಗಿದೆ ಎಂದು ವಿವರಿಸಿದರು.
ಮಹದೇವಪ್ಪ ಶಾಸಕನಾಗಿದ್ದಾಗ ಕೆಲಸ ಮಾಡುತ್ತಿರಲಿಲ್ಲ. ಆದರೆ ಮಂತ್ರಿಯಾದ ಮೇಲೆ ನನ್ನ ಕ್ಷೇತ್ರಕ್ಕಿಂತಲೂ ಅವರ ಕ್ಷೇತ್ರದಲ್ಲಿ ಹೆಚ್ಚು ಅಭಿವೃದ್ಧಿ ಕೆಲಸ ಮಾಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಹಬ್ಬಾಸ್ಗಿರಿ ನೀಡಿದರು.
ಇದರಲ್ಲಿ ಸ್ವಲ್ಪ ಸ್ವಾರ್ಥ ಇರಬಹುದು. ಆದರೂ ನನಗೆ ಬೇಜಾರಿಲ್ಲ. ಏಕೆಂದರೆ ಬನ್ನೂರು ಭಾಗ ನನಗೆ ವಿದ್ಯಾರ್ಥಿ ದೆಸೆಯಿಂದಲೂ ಚಿರಪರಿಚಿತ. ಪ್ರತಿ ಊರಿನಲ್ಲಿಯೂ ಸ್ನೇಹಿತರಿದ್ದಾರೆ. ಹಬ್ಬಗಳಲ್ಲಿ ಊಟಕ್ಕೆ ಬಂದಿದ್ದೇನೆ.  1972 ರಲ್ಲಿ ಕೆ. ಮಾದೇಗೌಡರ ಪರ ಪ್ರಚಾರಕ್ಕೂ ಬಂದಿದ್ದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com