ಗುಂಡ್ಲುಪೇಟೆ: ತಾಲೂಕಿನ ರೈತರ ತರಕಾರಿಯನ್ನು ಕೇರಳದ ವ್ಯಾಪಾರಿಗಳು ನೇರವಾಗಿ ಖರೀದಿಸಬಾರದು ಎಂದು ಗುಂಡ್ಲುಪೇಟೆ ಎಪಿಎಂಸಿ ವರ್ತಕರು ಬೇಗೂರಿನಲ್ಲಿ ತಗಾದೆ ತೆಗೆದ ಪರಿಣಾಮ ಪೊಲೀಸರ ಮಧ್ಯಪ್ರವೇಶದಿಂದ ರೈತರು-ಎಪಿಎಂಸಿ ದಳ್ಳಾಳಿಗಳ ಘರ್ಷಣೆ ತಪ್ಪಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.ಕೇರಳದ ವ್ಯಾಪಾರಿಗಳು ನೇರವಾಗಿ ರೈತರಿಂದ ನೇರವಾಗಿ ಖರೀದಿಸಬಾರದು ಎಂದು ಮಂಗಳವಾರ ರಾತ್ರಿ ಕೇರಳದ ವ್ಯಾಪಾರಿಗಳ ವಿರುದ್ಧ ಎಪಿಎಂಸಿ ಅಧಿಕಾರಿಗಳು ಬೇಗೂರು ಠಾಣೆಗೆ ದೂರಿದ್ದಾರೆ. ಬೇಗೂರು ಠಾಣೆಯ ಪಿಎಸ್ಐ ತರಕಾರಿಯನ್ನು ಖರೀದಿಸಬಾರದು ಎಂಬ ನಿಯಮವಿದ್ದರೆ ಕೊಡಿ ಎಂದು ರೈತರ ಪರವಾಗಿ ವಾದ ಮಂಡಿಸಿದರು. ತರಕಾರಿ ಬೆಳೆದ ರೈತ ಮಾತನಾಡಿ, ಎಪಿಎಂಸಿಯಲ್ಲಿ ರೈತರ ತರಕಾರಿಗಳಿಗೆ ಸರಿಯಾದ ದರ ನೀಡುವುದಿಲ್ಲ. ರೈತ ಬೆಳೆದ ತರಕಾರಿಯನ್ನು ಗುಂಡ್ಲುಪೇಟೆ ಎಪಿಎಂಸಿ ಪ್ರಾಂಗಣಕ್ಕೆ ಆಟೋದಲ್ಲಿ ಸಾಗಿಸಬೇಕು ಹಾಗು ದರದಲ್ಲೂ ವಂಚಿಸುವ ಜೊತೆಗೆ ಕಮಿಷನ್ ಬೇರೆ ಪಡೆಯುತ್ತಾರೆ ಎಂಬ ಆರೋಪಿಸಿದರು.ಕೇರಳ ವ್ಯಾಪಾರಿಗಳು ತರಕಾರಿ ಖರೀದಿಸಿದರೆ ಕಮಿಷನ್ ಇಲ್ಲ. ನೇರವಾಗಿ ರೈತರ ಜಮೀನಿಗೆ ಬಂದು ಖರೀದಿಸುವ ಜೊತೆಗೆ ದರವನ್ನು ಎಪಿಎಂಸಿ ದಳ್ಳಾಳಿಗಳಿಗಿಂತಲೂ ಹೆಚ್ಚಿಗೆ ನೀಡುವ ಕಾರಣ, ಕೇರಳದ ವ್ಯಾಪಾರಿಗಳಿಗೆ ಕೊಡುವುದಾಗಿ ರೈತರು ಪಟ್ಟು ಹಿಡಿದರು.ಎಪಿಎಂಸಿ ಅಧಿಕಾರಿಗಳು ಹಾಗು ಗುಂಡ್ಲುಪೇಟೆಯ ಎಪಿಎಂಸಿ ದಳ್ಳಾಳಿಗಳೊಂದಿಗೆ ಮಾತನಾಡಿದ ಬೇಗೂರು ಪಿಎಸ್ಐ ಸಂದೀಪ್, ಗರಂ ಆಗಿಯೇ ರೈತರಿಗೆ ಅನುಕೂಲವಾಗುವ ಕಡೆಯೇ ಮಾರಾಟ ಮಾಡಲಿ ಬಿಡಿ ಎಂದು ಬುದ್ಧಿಮಾತು ಹೇಳಿ ಕಳುಹಿಸಿದರು.
ರೈತರ ಮನವಿ: ಕೇರಳ ತರಕಾರಿ ವ್ಯಾಪಾರಿಗಳು ರೈತರಿಂದ ನೇರವಾಗಿ ಖರೀಸಿದರೆ, ಎಪಿಎಂಸಿ ದಳ್ಳಾಳಿಗಳಿಗೆ ವಹಿವಾಟು ಕಡಿಮೆಯಾಗಲಿರುವ ಕಾರಣ, ರೈತರ ಪರ ಇರಬೇಕಾದ ಎಪಿಎಂಸಿ ಅಧಿಕಾರಿಗಳು ದಳ್ಳಾಳಿಗಳ ಪರ ಬಂದ ಬಗ್ಗೆ ಸಹಕಾರ ಸಚಿವರು ಜರುಗಿಸಲಿ ಎಂದು ರೈತರು ಮನವಿ ಮಾಡಿದ್ದಾರೆ.ಸಂತೆಯಲ್ಲಿ ರೈತರು ಇಷ್ಟ ಬಂದವರಿಗೆ ಮಾರಾಟ ಮಾಡುವ ಹಕ್ಕು ಕಿತ್ತುಕೊಳ್ಳಲು ಮುಂದಾಗಿರುವ ಎಪಿಎಂಸಿ ಅಧಿಕಾರಿಗಳ ಕ್ರಮವನ್ನು ರೈತರು ಖಂಡಿಸಿದರು.
ಸಚಿವರ ಹುಟ್ಟುಹಬ್ಬ: ಯಶಸ್ವಿನಿ ಕಾರ್ಡ್ ಜತೆಗೆ ಸಿಹಿ ವಿತರಣೆ
ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ಹುಟ್ಟುಹಬ್ಬ ಅಂಗವಾಗಿ ತಾಲೂಕಿನ ದೊಡ್ಡರಾಯಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ವತಿಯಿಂದ ಉಚಿತವಾಗಿ ಯಶಸ್ವಿನಿ ಕಾರ್ಡ್ ಹಾಗೂ ಕೊಬ್ಬರಿ ಸಕ್ಕರೆ ವಿತರಿಸಲಾಯಿತು.25 ಹಿರಿಯ ನಾಗರಿಕರಿಗೆ ಯಶಸ್ವಿನಿ ಕಾರ್ಡ್ ನೋಂದಣಿ ಮಾಡಿಸುವ ಜೊತೆಗೆ, ಬ್ಯಾಂಕಿನ ಸಹಕಾರಿ ಬಂಧುಗಳಿಗೆ ಕೊಬ್ಬರಿ ಸಕ್ಕರೆಯನ್ನು ಬ್ಯಾಂಕಿನ ಆಡಳಿತ ಮಂಡಳಿ ಹಂಚಿಕೆ ಮಾಡಿತು.
ಬ್ಯಾಂಕ್ ಅವರಣದಲ್ಲಿ ನಡೆದ ಸಮಾರಂಭದಲ್ಲಿ ಬ್ಯಾಂಕ್ ಮಾಜಿ ಅಧ್ಯಕ್ಷ ದೊಡ್ಡರಾಯಪೇಟೆ ಗಿರೀಶ್ ಯಶಸ್ವಿನಿ ಕಾರ್ಡ್ ವಿತರಿಸಿ ಮಾತನಾಡಿ, ಸಮಾಜದಲ್ಲಿ ರೈತರು ಹಾಗೂ ಮಾಧ್ಯಮ ವರ್ಗದ ಕುಟುಂಬಗಳು ಆರ್ಥಿಕವಾಗಿ ಸಂಕಷ್ಟದಲ್ಲಿವೆ. ಇಂತಹ ಜನರ ಆರೋಗ್ಯ ಸುಧಾರಣೆ ನಿಟ್ಟಿನಲ್ಲಿ ಯಶಸ್ವಿನಿ ಯೋಜನೆ ಸಂಜೀವಿನಿಯಾಗಿದೆ ಸಹಕಾರಿಗಳಿಗೂ ಯೋಜನೆ ವಿಸ್ತರಣೆ ಮಾಡುವುದು ಸಚಿವರ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ ಎಂದರು.ಬ್ಯಾಂಕ್ ಅಧ್ಯಕ್ಷ ಶಂಕರಶೆಟ್ಟಿ, ಉಪಾಧ್ಯಕ್ಷ ಶಿವಸ್ವಾಮಿ, ಮಾಜಿ ಅಧ್ಯಕ್ಷ ಎಂ.ಪಿ. ಶಂಕರ್, ಗ್ರಾಪಂ ಅಧ್ಯಕ್ಷೆ ಮಹದೇವಮ್ಮ, ಉಪಾಧ್ಯಕ್ಷ ಜೋಸೆ ಫ್ ಮೊದಲಾದವರು ಇದ್ದರು.
Advertisement