ಚಾಮರಾಜನಗರ: ವಿಮಾ ಕ್ಷೇತ್ರದಲ್ಲಿ ನೇರ ವಿದೇಶಿ ಬಂಡವಾಳ ಹೆಚ್ಚಳ ಮಾಡುವುದನ್ನು ವಿರೋಧಿಸಿ ವಿಮಾ ನೌಕರರ ಸಂಘದ ವತಿಯಿಂದ ನಗರದಲ್ಲಿ ಬುಧವಾರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.
ನಗರದ ಚಾಮರಾಜೇಶ್ವರ ಉದ್ಯಾನವನ ಎದುರು ಸಮಾವೇಶಗೊಂಡ ನೌಕರರು, ಭುವನೇಶ್ವರಿ ವೃತ್ತದಲ್ಲಿ ಕೇಂದ್ರ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನಾ ನಿರತ ನೌಕರರು ಮಾತನಾಡಿ, ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಏರಿಕೆಯಿಂದ ವಿಮೆ ಎಲ್ಲಾ ವರ್ಗವನ್ನು ತಲುಪುತ್ತದೆ ಎಂಬ ಕೇಂದ್ರ ಸರ್ಕಾರದ ವಾದವು ಅರ್ಥಹೀನಾವಾಗಿದ್ದು, ವಿದೇಶಿ ಬಂಡವಾಳದಿಂದ ದೇಶ ಅಭಿವೃದ್ಧಿಯಾಗುತ್ತದೆ ಎಂಬುದು ಬೂಟಾಟಿಕೆ ಮಾತುಗಳಾಗಿವೆ. ಇದು ದೇಶದ ಜನರಿಗೆ ಮಂಕು ಬೂದಿ ಎರಚುವ ಹೇಳಿಕೆಯಾಗಿದೆ. ಕೇಂದ್ರದ ಹಣಕಾಸು ಸಚಿವರ ಈ ಹೇಳಿಕೆ ದೇಶದ ಆರ್ಥಿಕ ಸ್ಥಿತಿಗೆ ಮಾರಕ ಎಂದು ಆರೋಪಿಸಿದರು.
ವಿಮಾ ಕ್ಷೇತ್ರ ಸಾಮನ್ಯ ವರ್ಗಗಳ ಮೇಲೆ ಅವಲಂಬಿತವಾಗಿದ್ದು, ದೇಶದ ಸಾಮಾಜಿಕ ಹಾಗೂ ಮೂಲಭೂತ ಸೌಕರ್ಯಗಳಿಗೆ ಜನ ಸಾಮನ್ಯರ ಸಣ್ಣ ಉಳಿತಾಯ ಮತ್ತು ಹೂಡಿಕೆಗಳು ಅತ್ಯಗತ್ಯವಾಗಿದೆ. ವಿದೇಶ ನೇರ ಬಂಡವಾಳ ಹೂಡಿಕೆ ಹೆಚ್ಚುಸುವ ಬದಲು ಸಾರ್ವಜನಿಕ ರಂಗದಲ್ಲಿ ವಿಮಾ ಉದ್ದಿಮೆಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡಬೇಕು. ವಿಮಾ ಪಾಲಿಸಿದಾರರ ಮತ್ತು ದೇಶದ ಆರ್ಥಿಕ ಸೌರ್ವಭೌಮತ್ವ ಕಾಪಾಡಬೇಕು ಎಂದು ಪ್ರತಿಭಟನಾಕಾರರು ಅಗ್ರಹಿಸಿದರು.ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಕೈಬಿಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮೈಸೂರು ವಿಮಾ ನೌಕರರ ಸಂಘದ ಅಧ್ಯಕ್ಷ ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಎಸ್.ಎಸ್. ನಾಗೇಶ್, ಜಿಲ್ಲಾ ಶಾಖೆ ಅಧ್ಯಕ್ಷ ಗುರುಸಿದ್ದಪ್ಪ, ಕಾರ್ಯದರ್ಶಿ ಚನ್ನಪ್ಪ, ವಿಮಾ ರಂಗದ ಪದಾಧಿಕಾರಿಗಳು, ಪ್ರತಿನಿಧಿ ಸಂಘದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Advertisement