ಮೈಸೂರು: ಚಾಮುಂಡಿ ಬೆಟ್ಟದಲ್ಲಿರುವ ನಾಡಿನ ಅಧಿದೇವತೆ ಚಾಮುಂಡೇಶ್ವರಿ ಅಮ್ಮನವರಿಗೆ ಆಷಾಢ ಮಾಸದ ಅಂಗವಾಗಿ ಎರಡನೇ ಶುಕ್ರವಾರದ ವಿಶೇಷ ಪೂಜೆ ನಡೆಯಿತು.
ಅಮ್ಮನವರಿಗೆ ವಿಶೇಷ ಅಭಿಷೇಕ ಹಾಗೂ ಅಲಂಕಾರ ಮಾಡಲಾಗಿತ್ತು. ದೇವಸ್ಥಾನವು ವಿವಿಧ ಹೂವುಗಳ ಅಲಂಕಾರದಿಂದ ಗಮನ ಸೆಳೆಯಿತು. ಅಲ್ಲದೆ ದ್ರಾಕ್ಷಿ ಹಣ್ಣಿನಿಂದ ಶೃಂಗರಿಸಲಾಗಿದ್ದ ಅಲಂಕಾರವು ಆಲಯದ ಅಂದಕ್ಕೆ ಮೆರಗು ನೀಡಿತ್ತು. ಬೆಳಗ್ಗೆಯಿಂದಲೇ ಉದ್ದನೆ ಸರದಿ ಸಾಲಿನಲ್ಲಿ ನಿಂತ ಭಕ್ತರು ಅಮ್ಮನವರ ದರ್ಶನಕ್ಕೆ ಮುಂದಾಗಿದ್ದು ಕಂಡುಬಂತು. ಸಾಮಾನ್ಯ ದರ್ಶನದ ಜತೆಗೆ ಪ್ರವೇಶ ಶುಲ್ಕ ಪಾವತಿಯ ವಿಶೇಷ ದರ್ಶನಕ್ಕೂ ಅಸಂಖ್ಯಾತ ಭಕ್ತ ಸಮೂಹ ನೆರೆದಿತ್ತು. ಶುಲ್ಕ ಪಾವತಿಸಿ ದರ್ಶನ ಪಡೆದವರನ್ನು ಹಾಗೂ ದೇವಸ್ಥಾನಕ್ಕೆ ಆಗಮಿಸುವ ಗಣ್ಯರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವರ್ಷ ಮದುವೆಯಾಗಿರುವ ನವ ದಂಪತಿಗಳ ಜೋಡಿ ಅಲ್ಲಲ್ಲಿ ಕಂಡುಬಂತು. ಮೈಸೂರು ನಗರ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಿಂದ ಅಲ್ಲದೆ, ಮಂಡ್ಯ, ಚಾಮರಾಜನಗರ, ಹಾಸನ ಹಾಗೂ ಬೆಂಗಳೂರು ಇನ್ನಿತರ ಜಿಲ್ಲೆಗಳಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದರು.
ಅನ್ನದಾನ: ಕೊಯಂಬತ್ತೂರಿನ ಶ್ರೀದುರ್ಗ ಏಜೆನ್ಸಿಯವರು 7ನೇ ವರ್ಷದ ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಿದ್ದರು. ಅನ್ನ, ಸಾಂಬಾರು, ಪಲ್ಯ ಹಾಗೂ ಬಿಸಿಬೇಳೆ ಬಾತ್, ಮೊಸರನ್ನವನ್ನು ಭಕ್ತರಿಗೆ ಬಡಿಸಿದರು. ದೇವಸ್ಥಾನದ ಆವರಣದಲ್ಲಿ ನಿರ್ಮಿಸಿರುವ ಶಾಮಿಯಾನದಡಿ ಸಾರ್ವಜನಿಕರಿಗೆ ಹಾಗೂ ದಾಸೋಹ ಭವನದಲ್ಲಿ ಗಣ್ಯರಿಗೆ ಭೋಜನ ವ್ಯವಸ್ಥೆಯಿತ್ತು. ಇಲ್ಲಿನ ವಾಹನ ನಿಲ್ದಾಣದಲ್ಲಿಯೂ ಕೆಲವು ಸೇವಾರ್ಥದಾರರು ಪ್ರಸಾದ ತಂದು ವಿತರಿಸುತ್ತಿದ್ದರು. ಆಷಾಢ ಮಾಸ ಶುಕ್ರವಾರದ ವಿಶೇಷ ಪೂಜೆಗಾಗಿ ಚಿತ್ರ ತಾರೆ ರಕ್ಷಿತಾ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ದೇವಸ್ಥಾನದ ಮುಂಭಾಗ ಕಾರನ್ನೇರಲು ಬಂದ ನಟಿಯನ್ನು ಕಂಡು ಸಾರ್ವಜನಿಕರು ಮುತ್ತಿಕೊಂಡರು. ಸ್ಥಳದಲ್ಲಿದ್ದ ಪೊಲೀಸರು ಜನಸಂದಣಿಯಿಂದ ಪಾರುಮಾಡಿ ಕಳುಹಿಸಿದರು. ವಾಹನಗಳ ನಿಯಂತ್ರಣ ಹಾಗೂ ಜನರ ರಕ್ಷಣೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು. ಮಧ್ಯಾಹ್ನ 12 ರ ವೇಳೆಗೆ ಜೋರಾಗಿ ಮಳೆ ಬೀಳಲಾರಂಭಿಸಿದ ಕಾರಣ, ಸರದಿ ಸಾಲಿನಲ್ಲಿ ನಿಂತಿದ್ದ ಭಕ್ತ ಸಮೂಹ ಚೆಲ್ಲಾ ಪಿಲ್ಲಿಯಾಗಿ ರಕ್ಷಣೆ ಪಡೆಯಲು ಸಮೀಪದ ಕಟ್ಟಡಗಳ ಬಳಿಗೆ ಓಡಿದರು.
ಉಚಿತ ಸಾರಿಗೆ ವ್ಯವಸ್ಥೆ
ಚಾಮುಂಡಿಬೆಟ್ಟಕ್ಕೆ ತೆರಳುವ ಭಕ್ತಾದಿಗಳ ಅನುಕೂಲಕ್ಕಾಗಿ ಇಲ್ಲಿನ ಹೆಲಿಪ್ಯಾಡ್ ಬಳಿಯಿಂದ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಾರು, ದ್ವಿಚಕ್ರ ವಾಹನಗಳನ್ನು ತಂದು ಅಲ್ಲಿನ ಆವರಣದಲ್ಲಿ ನಿಲ್ಲಿಸಿ, ಅಲ್ಲಿಂದ ಸಾರಿಗೆ ಬಸ್ಸೇರಿ ಬೆಟ್ಟಕ್ಕೆ ತೆರಳುವವರ ಸಂಖ್ಯೆ ಹೆಚ್ಚಾಗಿತ್ತು.