ಗೃಹ ಸಚಿವರ ರಾಜಿನಾಮೆಗೆ ಆಗ್ರಹ

Updated on: 

ಚಾಮರಾಜನಗರ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಅರಾಜಕತೆ ನಿರ್ಮಾಣಕ್ಕೆ ಪ್ರಮುಖ ಕಾರಣಕರ್ತರಾಗಿರುವ ಗೃಹ ಸಚಿವ ಕೆ.ಜೆ.ಜಾರ್ಜ್ ಕೂಡಲೇ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಚಾಮರಾಜೇಶ್ವರ ದೇವಸ್ಥಾನ ಮುಂಭಾಗದಿಂದ ಮೆರವಣಿಗೆ ಹೊರಟು ರಾಜ್ಯ ಸರ್ಕಾರದ ವಿರುದ್ಧ  ಘೋಷಣೆಗಳನ್ನು ಕೂಗುತ್ತಾ, ಮಹಿಳೆಯರಿಗೆ ರಕ್ಷಣೆ ನೀಡದ ಸರ್ಕಾರ ತೊಲಗಲಿ, ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಎಂಬ ಘೋಷಣೆಗಳನ್ನು ಕೂಗುತ್ತಾ ಭುವನೇಶ್ವರಿ ವೃತ್ತದಲ್ಲಿ ಗೃಹ ಸಚಿವ ಕೆ.ಜೆ. ಜಾರ್ಜ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಬಿ. ರಾಚಯ್ಯ ಜೋಡಿ ರಸ್ತೆ ಮುಖಾಂತರ ಜಿಲ್ಲಾಡಳಿತ ಭವನ ತಲುಪಿ ಕೆಲಕಾಲ ಧರಣಿ ನಡೆಸಿ ಅಪರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಕೆ.ಎಸ್. ನಾಗರಾಜಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಮಹಿಳೆಯರು ಹಾಗೂ ಮಕ್ಕಳ ಮೇಲಿನ  ಅತ್ಯಾಚಾರ, ದೌರ್ಜನ್ಯಗಳು ಹೆಚ್ಚಾಗುತ್ತಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟು  ಹಾಡುಹಗಲೇ ಅತ್ಯಾಚಾರಗಳು ನಡೆಯುತ್ತಿದ್ದು,  ಬೆಂಗಳೂರಿನಂತಹ ಮಹಾನಗರದಲ್ಲಿಯೇ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆರೋಪಿಸಿದರು.
ಮಾಜಿ ಶಾಸಕ ಸಿ. ಗುರುಸ್ವಾಮಿ ಮಾತನಾಡಿ, ಗೃಹ ಖಾತೆಯನ್ನು ಸಮರ್ಪಕವಾಗಿ ನಿರ್ವಹಿಸದ ಗೃಹ ಮಂತ್ರಿ ಕೆ.ಜೆ ಜಾರ್ಜ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಜಾಗೊಳಿಸಬೇಕು, ಅವರಿಗೆ ನೈತಿಕತೆ ಇದ್ದರೆ ಅವರು ರಾಜಿನಾಮೆ ಪಡೆಯಬೇಕು. ನಿಮ್ಮ ಮನೆಯ ಮಕ್ಕಳಾಗಿದ್ದರೆ ಈ ರೀತಿ ನೀವು ಸುಮ್ಮನಿರುತ್ತಿದ್ದೀರಾ ಎಂದು ಪ್ರಶ್ನಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಸುಮ್ಮನಿರುವುದು ಸರಿಯಲ್ಲ, ಗೃಹ ಸಚಿವರ ಕಾರ್ಯ ವೈಖರಿಯಿಂದ ಕಾನೂನು ಸುವ್ಯವಸ್ಥೆ  ಹದಗೆಟ್ಟಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಅತ್ಯಾಚಾರ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹಾಡು ಹಗಲೇ ಕೊಲೆ ಮಾಡಿ ಕಾನೂನು ಕೈಯಿಂದ ತಪ್ಪಿಸಿಕೊಂಡು ಅಪರಾಧಿಗಳು ನಿರ್ಭಯವಾಗಿ ಓಡಾಡುತ್ತಿದ್ದಾರೆ ಎಂದು ಆರೋಪಿಸಿದರು.
ಗೃಹ ಸಚಿವರು ಈ ಕೂಡಲೇ ರಾಜಿನಾಮೆ ನೀಡಬೇಕು. ರಾಜಿನಾಮೆ ನೀಡದಿದ್ದಲ್ಲಿ ರಾಜ್ಯದ ಹಿತದೃಷ್ಟಿಯಿಂದ ಮುಖ್ಯ ಮಂತ್ರಿಗಳೇ ಗೃಹಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಅಗ್ರಹಿಸಿದರು.
ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಶೀಲಾ, ಮುಖಂಡರಾದ ಕಂದಹಳ್ಳಿ ನಂಜುಂಡಸ್ವಾಮಿ, ಕೆ.ಕೆ.ರೇವಣ್ಣ, ಲಕ್ಕೂರು ರಾಜಣ್ಣ, ಜಿಲ್ಲಾ ವಕ್ತಾರ ರ. ನಾರಾಯಣಗೌಡ, ನೂರೊಂದುಶೆಟ್ಟಿ, ಪರಶಿವಮೂರ್ತಿ, ಗಾಯಿತ್ರಿ, ಸುಧಾಮಲ್ಲಣ್ಣ, ದಾಕ್ಷಾಯಿಣಿ, ತಾ.ಪಂ. ಮಾಜಿ ಅಧ್ಯಕ್ಷ ಅರ್. ಮಹದೇವಯ್ಯ, ಮಹದೇವನಾಯಕ, ಗಣೇಶ್ ದೀಕ್ಷಿತ್, ಬಂಗಾರು, ಸಿ.ಎಂ. ಮಂಜುನಾಥ್, ರಂಗಸ್ವಾಮಿ, ಕಾರ್ತಿಕ್, ಮಂಗಳಮ್ಮ, ಕಲ್ಯಾಣಿ, ಶುಭಾ, ವನಜಾಕ್ಷಿ, ಸುಖೇಶಿನಿ, ನಾಗಣ್ಣ, ರಮೇಶ್, ಪವನ್, ಮಾರ್ಕೇಟ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.
ಎಬಿವಿಪಿ ಪ್ರತಿಭಟನೆ
ಚಾಮರಾಜನಗರ: ರಾಜ್ಯದಲ್ಲಿ ಹೆಚ್ಚುತ್ತಿರುವ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಗೃಹ ಮಂತ್ರಿ ರಾಜಿನಾಮೆಗೆ ಅಗ್ರಹಿಸಿ ನಗರದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ವಿವಿಧ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಭುವನೇಶ್ವರಿ ವೃತ್ತದಲ್ಲಿ ಗೃಹ ಸಚಿವ ಕೆ.ಜೆ. ಜಾರ್ಜ್ ಅವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಭವನ ತಲುಪಿ ಕೆಲಕಾಲ ಪ್ರತಿಭಟನೆ ನಡೆಸಿ ವಿದ್ಯಾರ್ಥಿ ಶಕ್ತಿ ಗುಡುಗಿದರೆ, ರಾಜ್ಯವೇ ನಡುಗಬೇಕು ಎಂಬ ಎಚ್ಚರಿಕೆಯನ್ನು ನೀಡಿದರು. ಪ್ರತಿಭಟನೆಯಲ್ಲಿ ಎಬಿವಿಪಿ ಜಿಲ್ಲಾಧ್ಯಕ್ಷ ಆನಂದ ಬೋಗವಾಡಿ, ಪ್ರಧಾನ ಕಾರ್ಯದರ್ಶಿ ಶಿವು, ಸಹ ಕಾರ್ಯದರ್ಶಿ ನಂದಿಶ್, ಕಾರ್ಯಕರ್ತರಾದ ಆನಂದ್, ಮಹೇಂದ್ರ, ಸುನೀಲ್,  ಅಶ್ವಿನಿ, ಚೈತ್ರಾ, ಅನ್ನಪೂರ್ಣ, ಶ್ವೇತ, ಮಂಜುಳ, ಸೇರಿದಂತೆ ನಗರದ ಸೇವಾಭಾರತಿ, ಸರ್ಕಾರಿ ಪಾಲಿಟೆಕ್ನಿಕ್, ಜೆಎಸ್‌ಎಸ್ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com