ಚಾಮರಾಜನಗರ: ಆಷಾಢ ಮಾಸದ ಕೊನೆಯ ಶುಕ್ರವಾರ ಶಕ್ತಿ ದೇವತೆಯ ದಿನ. ನಗರದ ಚಾಮರಾಜೇಶ್ವರ ದೇವಸ್ಥಾನದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಸುಮಂಗಲಿಯರು, ಕನ್ಯೆಯರು ತಂಡೋಪ ತಂಡವಾಗಿ ಆಗಮಿಸಿ, ತಮ್ಮ ಇಷ್ಟಾರ್ಥ ಸಿದ್ದಿಗಾಗಿ ವಿಶೇಷ ಪೂಜೆ ಸಲ್ಲಿಸಿದರು.
ನಿಂಬೆಹಣ್ಣಿನ ಹೋಳಿನಲ್ಲಿ ತುಪ್ಪ ಹಾಗೂ ಎಣ್ಣೆಯ ದೀಪ ಹಚ್ಚಿ ಚಾಮುಂಡಿಯನ್ನು ವಿಶೇಷವಾಗಿ ಪೂಜಿಸಿ, ಸುಮಂಗಲಿಯರು ಪರಸ್ಪರ ಮಾಂಗಲ್ಯ ಪೂಜೆ ಮಾಡಿಕೊಂಡು, ಶುಭ ಕೋರಿ, ತಮ್ಮ ಮಾಂಗಲ್ಯ ಭಾಗ್ಯ ಗಟ್ಟಿಯಾಗಿರಲೆಂದು ಪ್ರಾರ್ಥಿಸಿದರೆ, ಕನ್ಯೆಯರು ತಮಗೆ ಒಳ್ಳೆಯ ಪತಿ ದೊರೆತು, ಜೀವನ ಸುಖಮಯವಾಗಿರುವಂತೆ ಪ್ರಾರ್ಥಿಸಿದರು.
ಒಳ್ಳೆಯ ದಿನ: ದೇವಾಲಯದ ಅರ್ಚಕರಾದ ನಾಗರಾಜ್ ದೀಕ್ಷಿತ್, ಇದೊಂದು ಶುಭ ದಿನ, ಆಷಾಢ ಮಾಸದಲ್ಲಿ ಶಕ್ತಿ ದೇವತೆಗಳಾದ ಕಾಳಿ, ಚಾಮುಂಡಿ, ದೇವತೆಗಳನ್ನು ಪೂಜಿಸಿದರೆ, ಸಕಲ ಇಷ್ಠಾರ್ಥಗಳು ನೆರವೇರುತ್ತವೆ ಎಂಬ ಅಚಲವಾದ ನಂಬಿಕೆ ಇದೆ ಎಂದರು.
ನಿಂಬೆಹಣ್ಣಿನಲ್ಲಿ ವಿಶೇಷವಾದ ಆಕರ್ಷಣೀಯ ಶಕ್ತಿ ಇದೆ, ನಿಂಬೆಹಣ್ಣಿನ ಸರ ಶಕ್ತಿ ದೇವತೆಗಳಿಗೆ ಅಚ್ಚುಮೆಟ್ಟು, ಆದರ ಹೋಳಿನಲ್ಲಿ ದೀಪ ಹಚ್ಚಿದರೆ ಅಮ್ಮನಿಗೆ ಬಲು ಪ್ರೀತಿ ಎನ್ನುವ ಪ್ರತೀತಿ ಇದೆ, ಶುಕ್ರವಾರ ಸುಮಂಗಲಿಯರು ವಿಶೇಷ ಪೂಜೆ ಸಲ್ಲಿಸಿದರೆ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
ಕನ್ನೆಯರಿಗೆ ಅವರ ಇಷ್ಟಾರ್ಥ ನೆರವೇರುತ್ತದೆ ಎಂಬ ಅಚಲವಾದ ನಂಬಿಕೆ ಇರುವುದರಿಂದ ಆಷಾಢ ಶುಕ್ರವಾರದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಸಲ್ಲಿಸುತ್ತಾರೆ ಎಂದರು.