ಚಾಮರಾಜನಗರ: ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ, ಗಂಭೀರ ಗಾಯಗೊಂಡ ಬೈಕ್ ಸವಾರನನ್ನು ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿ ಮಾರ್ಗಮಧ್ಯೆ ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ತಾಲೂಕಿನ ಬದನಗುಪ್ಪೆ ಬಳಿ ಜರುಗಿದೆ.ನಗರದ ಕೊಳದ ಬೀದಿ ನಿವಾಸಿ ಸುಮಂತ (27) ಮೃತ ಯುವಕ. ಸುಮಂತ ನಗರದಿಂದ ದ್ವಿಚಕ್ರ ವಾಹನದಲ್ಲಿ ಬದನಗುಪ್ಪೆ ಕಡೆಗೆ ತೆರಳುತ್ತಿದ್ದಾಗ ತಾಳನಹುಂಡಿಯಿಂದ ವೇಗವಾಗಿ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಲು ತೆರಳುತ್ತಿದ್ದಾಗ ನಂಜುನಗೂಡಿನ ಬಳಿ ಸುಮಂತ ಮೃತಪಟ್ಟಿದ್ದಾರೆ. ಟ್ರ್ಯಾಕ್ಟರ್ ಸವಾರ ನಂಜುಂಡ ಪರಾರಿಯಾಗಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ