ಚಿಕ್ಕಮಗಳೂರು: ಶಿಕ್ಷಕರು ತಮ್ಮೊಳಗೆ ಸುಪ್ತವಾಗಿರುವ ಪ್ರತಿಭೆಯನ್ನು ಅನಾವರಣ ಮಾಡಿ ಮಕ್ಕಳಿಗೆ ಧಾರೆ ಎರೆದಾಗ ಮಾತ್ರ ಕಲೆಗೆ ಸಾರ್ಥಕತೆ ಸಿಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಭಾರ ಉಪ ನಿರ್ದೇಶಕ ರವೀಶ್ ಹೇಳಿದರು.
ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಜಿಲ್ಲಾಮಟ್ಟದ ಸಹಪಠ್ಯ ಚಟುವಟಿಕೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಉತ್ತಮ ಶಿಕ್ಷಕರು: ಎಲ್ಲಾ ಶಾಲೆಗಳಲ್ಲೂ ಕಲೆ, ಸಂಗೀತ ಸೇರಿದಂತೆ ಉತ್ತಮ ಹವ್ಯಾಸವಿರುವ ಶಿಕ್ಷಕರಿದ್ದಾರೆ. ಅವರುಗಳನ್ನು ಗುರುತಿಸಲು ಈ ಕಾರ್ಯಕ್ರಮ ಸಹಕಾರಿಯಾಗಲಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ದೇವರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕರಿಗೆ ಸಿಕ್ಕ ವೇದಿಕೆಯನ್ನು ಸದುಪಯೋಗಪಡಿಸಿಕೊಂಡು ತಮ್ಮಲ್ಲಿರುವ ಸಾಂಸ್ಕೃತಿಕ ಚಟುವಟಿಕೆ ಪ್ರದರ್ಶಿಸಿದಾಗ ಮಾನಸಿಕ ನೆಮ್ಮದಿ ಜೊತೆ ನಮ್ಮ ವೃತ್ತಿಯನ್ನು ಲವಲವಿಕೆಯಿಂದ ನಿರ್ವಹಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.
80 ಶಿಕ್ಷಕರು: ನೂಡೆಲ್ ಅಧಿಕಾರಿ ಲಕ್ಷ್ಮಣ್ ಮಾತನಾಡಿ, ಜಿಲ್ಲೆಯ 7 ತಾಲೂಕುಗಳು, 8 ಶೈಕ್ಷಣಿಕ ವಲಯಗಳಿಂದ 80 ಶಿಕ್ಷಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಸಂಗೀತ, ಚಿತ್ರಕಲೆ, ಆಶುಭಾಷಣ, ಪ್ರಬಂಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸರ್ವಶಿಕ್ಷಣ ಅಭಿಯಾನದ ಜಿಲ್ಲಾ ಯೋಜಾನಾಧಿಕಾರಿ ವೆಂಕಟರಮಣ್, ಪ್ರೌಢಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಉಮಾ ಮಹೇಶ್ವರ್, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಚಂದ್ರೇಗೌಡ, ವಿಷಯ ಪರಿವೀಕ್ಷಕ ಅಮ್ಜದ್ ಆಲಿ, ನಾಗರಾಜು, ತೀರ್ಪುಗಾರರಾದ ಮಲ್ಲಿಗೆ ಸುಧೀರ್, ವಿಶ್ವಕರ್ಮ ಆಚಾರ್, ರಶ್ಮಿ ವೇದಿಕೆಯಲ್ಲಿದ್ದರು.
ಲಕ್ಷ್ಮಣ್ ಸ್ವಾಗತಿಸಿದರು. ನಿರಂಜನ ನಿರೂಪಿಸಿದರು. ಅಚ್ಯುತಾನಂದ ವಂದಿಸಿದರು.