ಮೂಡಿಗೆರೆ: ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ತುಳು ಕೂಟದ ವತಿಯಿಂದ ಫೆ.16ರಂದು ತುಳು ವೈಭವೋ-2013 ಕಾರ್ಯಕ್ರಮ ನಡೆಯಲಿದೆ ಎಂದು ಪ್ರಚಾರ ಸಮಿತಿ ಅಧ್ಯಕ್ಷ ಕಿರುಗುಂದ ಅಬ್ಬಾಸ್ ತಿಳಿಸಿದರು.
ಈ ಕುರಿತು ಸೋಮವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ತಾಲೂಕಿನಲ್ಲಿ ನೆಲೆಸಿರುವ ಎಲ್ಲಾ ತುಳು ಬಾಂಧವರನ್ನು ಒಂದೇ ವೇದಿಕೆಯತ್ತ ತರುವ ಉದ್ದೇಶದಿಂದ ಹಾಗೂ ತುಳು ನಾಡಿನ ಜಾನಪದ ಕಲೆ, ಸಾಹಿತ್ಯ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ತುಳು ಕೂಟವನ್ನು ಪ್ರಾರಂಭಿಸಲಾಗಿದೆ ಎಂದ ಅವರು, ಇದರ ನಾಲ್ಕನೇ ವಾರ್ಷಿಕೋತ್ಸವ ಅಂಗವಾಗಿ ತುಳು ವೈಭವೋ-2013 ನಡೆಸಲು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸಂಸದ ಜಯಪ್ರಕಾಶ್ ಹೆಗ್ಡೆ, ಶಾಸಕ ಎಂ.ಪಿ. ಕುಮಾರಸ್ವಾಮಿ, ಮುಖಂಡರಾದ ಪಾಲ್ತಾಡಿ ರಾಮಕೃಷ್ಣ ಆಚಾರ್ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಚಂದ್ರಶೇಖರ್ ಸುವರ್ಣ ಮುಲ್ಕಿ ಇವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಸ್ಥಳೀಯ ಕಲಾವಿದರಿಂದ ವಿವಿಧ ಮನರಂಜನಾ ಕಾರ್ಯಕ್ರಮ ಪ್ರತಿಭಾವಂತರಿಗೆ ಸನ್ಮಾನ ಕಾರ್ಯಕ್ರಮಗಳು ಇರುತ್ತದೆ.
ನೂತನ ಪದಾಧಿಕಾರಿಗಳು: ತುಳುಕೂಟ 2013-14ನೇ ಸಾಲಿನ ನೂತನ ಪದಾಧಿಕಾರಿಗಳಲ್ಲಿ ಅಧ್ಯಕ್ಷರಾಗಿ ಅತುಲ್ರಾವ್, ಗೌರವಾಧ್ಯಕ್ಷರಾಗಿ ವಿಶ್ವನಾಥ ರೈ, ರಾಮಚರಣ್ ಅಡ್ಯಂತಾಯ, ರಮೇಶ್ ಆಚಾರ್ಯ, ಉಪಾಧ್ಯಕ್ಷರಾಗಿ ನರೇಂದ್ರ ಶೆಟ್ಟಿ, ಪಿ.ಕೆ. ಅಹ್ಮದ್ ಮೋನು, ಖಜಾಂಚಿ ರಾಘವ ಮಡಿತ್ತಾಯ, ಪ್ರಧಾನ ಕಾರ್ಯದರ್ಶಿ ಜಾನಪ್ಪ ಮಾಸ್ಟರ್, ಸಂಘಟನಾ ಕಾರ್ಯದರ್ಶಿ ಜನಾರ್ದನ ಶೆಟ್ಟಿ, ಮಹಿಳಾ ಸಮಿತಿ ಅಧ್ಯಕ್ಷರಾಗಿ ಪೂರ್ಣಿಮಾ ಮಲ್ಯ, ಕಾರ್ಯಕ್ರಮದ ನಿರ್ದೇಶಕರಾಗಿ ರವಿಕುಮಾರ್ ಆಯ್ಕೆಯಾಗಿದ್ದಾರೆ.