ವಿದ್ಯುತ್‌ಗೆ ಆಗ್ರಹಿಸಿ ರಸ್ತೆ ತಡೆ

Updated on: 

ದಾವಣಗೆರೆ: ಗ್ರಾಮೀಣ ಪ್ರದೇಶಕ್ಕೆ ನಿತ್ಯ 12 ಗಂಟೆ ಕಾಲ ನಿರಂತರ ವಿದ್ಯುತ್ ಪೂರೈಸಲು ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಚನ್ನಗಿರಿ ತಾಲೂಕಿನ ಸುಮಾರು 500ಕ್ಕೂ ಹೆಚ್ಚು ರೈತರು ನಗರದಲ್ಲಿ ಸೋಮವಾರ ಟ್ಯಾಕ್ಟರ್‌ಗಳಲ್ಲಿ ಧಾವಿಸಿ ಪ್ರತಿಭಟನೆ ನಡೆಸಿದರು.
ಚನ್ನಗಿರಿ ತಾ. ಸೂಳೆಕೆರೆಯಿಂದ ಸುಮಾರು 15ಕ್ಕೂ ಹೆಚ್ಚು ಟ್ರ್ಯಾಕ್ಟರ್, ಇತರೆ ವಾಹನ, ದ್ವಿಚಕ್ರ ವಾಹನಗಳಲ್ಲಿ ಜಿಲ್ಲಾ ಕೇಂದ್ರಕ್ಕೆ ಧಾವಿಸಿದ ರೈತರು ಇಲ್ಲಿನ ಗಾಂಧಿ ವೃತ್ತದಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸುವ ಮೂಲಕ ಸಮರ್ಪಕ ವಿದ್ಯುತ್ ಪೂರೈಸಲು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
3 ಗಂಟೆ ಮಾತ್ರ ರ್ಪೀಫೇಸ್: ಇದೇ ವೇಳೆ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ವಿ. ಪಟೇಲ್, ಬೇಸಿಗೆ ದಿನಗಳ ಆರಂಭದಲ್ಲೇ ನಾಡಿನಾದ್ಯಂತ ಕುಡಿಯುವ ನೀರಿಗೂ ಹಾಹಾಕಾರ ಎದ್ದಿದೆ. ಈ ಸ್ಥಿತಿಯಲ್ಲಿ ಬೆಸ್ಕಾಂ 6 ತಾಸು ವಿದ್ಯುತ್ ನೀಡಿದರೆ, ರೈತರು ಏನು ಬೆಳೆಯಬೇಕು. ಬೆಳಿಗ್ಗೆ 3 ಗಂಟೆ ತ್ರಿಫೇಸ್, ಮತ್ತೆ ಸಂಜೆ 3 ಗಂಟೆ ತ್ರಿಫೇಸ್ ಮಾತ್ರ ನೀಡಲಾಗುತ್ತಿದೆ. ಕೇವಲ 6 ಗಂಟೆ ವಿದ್ಯುತ್ ಕೊಟ್ಟರೂ, ಅಷ್ಟರದ್ಲೇ ಗಂಟೆ, ಅರ್ಧ ಗಂಟೆಗೊಮ್ಮೆ ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತದೆ ಎಂದು ಕಿಡಿಕಾರಿದರು.
ಆರು ಗಂಟೆ ವಿದ್ಯುತ್ ಪೂರೈಸುವ ಸರ್ಕಾರ ಅಷ್ಟರಲ್ಲಿ ಹೊಲ, ಗದ್ದೆಗೆ ನೀರು ಹರಿಸಿ, ರೈತರು ಯಾವ ಬೆಳೆ ಬೆಳೆಯ ಬೇಕೆಂಬುದನ್ನು ತಿಳಿಸಲಿ. ನಿರಂತರ 12 ತಾಸು ವಿದ್ಯುತ್ ಪೂರೈಸಬೇಕು. ಬೆಳಿಗ್ಗೆ, ಸಂಜೆ ಅಸಮರ್ಪಕವಾಗಿ ನೀಡುವ ಅದೇ 6 ಗಂಟೆ ವಿದ್ಯುತ್‌ನಿಂದಾಗಿ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾದರೆ ರೈತರು ಕೃಷಿಯನ್ನೇ ಕೈಬಿಡಬೇಕಾದ ಪರಿಸ್ಥಿತಿಯೂ ಬಂದೊದಗೀತು ಎಂದು ಎಚ್ಚರಿಸಿದರು.
ಪ್ರತಿ ಹಳ್ಳಿಯಲ್ಲೂ ಇದೇ ಸಮಸ್ಯೆ ಇದೆ. ರಾಜ್ಯದಲ್ಲಿ ಶೇ.38 ಮಾತ್ರ ಪಂಪ್‌ಸೆಟ್‌ಗೆ ವಿದ್ಯುತ್ ಬಳಕೆಯಾಗುತ್ತಿದೆ. ವಿದ್ಯುತ್ ಅಭಾವವಿದ್ದರೆ ಇತರರಿಗೂ ವಿದ್ಯುತ್ ಕಡಿತ ಮಾಡಿ, ರೈತರಿಗೆ ನ್ಯಾಯ ಒದಗಿಸಿ. ಕೂಡಲೇ ಸರ್ಕಾರ ಹಾಗೂ ಬೆಸ್ಕಾಂ ವ್ಯವಸ್ಥಾಸಕರ ನಿರ್ದೇಶಕರು ಕ್ರಮ ಕೈಗೊಳ್ಳಬೇಕು. ನೀರೇ ಇಲ್ಲದಿದ್ದರೂ, ಸಿಎಂ ಶೆಟ್ಟರ್ ಮಂಡಿಸುವ ಪ್ರತ್ಯೇಕ ಕೃಷಿ ಬಜೆಟ್‌ಗೆ ಅರ್ಥವಿರದು. ಬೆಳೆಗೆ ಬೇಕಾಗಿರುವುದು ಸಮರ್ಪಕ ವಿದ್ಯುತ್ ಎಂಬುದನ್ನು ಸರ್ಕಾರ ಅರಿಯಲಿ ಎಂದು ಹೇಳಿದರು.
ಸರ್ಕಾರಕ್ಕೆ ಎಚ್ಚರಿಕೆ: ಬೆಳೆಗೆ ಸಮರ್ಪಕ ವಿದ್ಯುತ್ ಪೂರೈಸಿ, ನಂತರ ಯಾವುದೇ ಬಜೆಟ್‌ನ್ನಾದರೂ ಮಂಡಿಸಿಕೊಳ್ಳಲಿ. ರೈತರ ಜೀವನದ ಜೊತೆ ಸರ್ಕಾರ ಆಟವಾಡುತ್ತಿರುವುದು ಒಳ್ಳೆಯದಲ್ಲ. ಉದಾಸೀನ ಮಾಡಿದರೆ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾದೀತು. ಸರ್ಕಾರ ನಮ್ಮ ತಾಳ್ಮೆ ಪರೀಕ್ಷಿಸುವ ದುಸ್ಸಾಹಸ ಮಾಡದಿರಲಿ ಎಂದು ಎಚ್ಚರಿಸಿದರು.
ರೈತ ಮುಖಂಡರಾದ ವಾಸನ ಓಂಕಾರಪ್ಪ, ಮರಡಿ ನಾಗಪ್ಪ, ಚಿರಡೋಣಿ ಚಂದ್ರಪ್ಪ, ಕಾಂತರಾಜ, ಪೂಜಾರ ಅಂಜಿನಪ್ಪ, ಎನ್.ಕೆ. ಬಸಪ್ಪ, ಕಾರಿಗನೂರು ಕೊಂಪೇರ ಬಸವರಾಜಪ್ಪ, ಜಿ.ಟಿ. ಮಹರುದ್ರಪ್ಪ, ಮಿಲ್ಟ್ರಿ ಬಸವರಾಜಯ್ಯ, ಪಿ.ವಿ. ವಾಗೀಶ, ಎಚ್.ಎಸ್. ವೀರಪ್ಪ, ಬೆಳಲಗೆರೆ ಡಿಎಸ್ಸೆಸ್ ದೇವೇಂದ್ರಪ್ಪ, ಕಾರಿಗನೂರು ತಿಪ್ಪೇಸ್ವಾಮಿ, ಗ್ರಾಪಂ ಅಧ್ಯಕ್ಷ ಗಿರೀಶ ನಾಯ್ಕ, ಉಮಾಬಾಯಿ ಮತ್ತಿತರರು ನೇತೃತ್ವ ವಹಿಸಿದ್ದರು.
ನಂತರ ಟ್ರ್ಯಾಕ್ಟರ್, ದ್ವಿಚಕ್ರ ವಾಹನ ಮತ್ತಿತರೆ ವಾಹನಗಳಲ್ಲಿ ರೈತರು ಜಿಲ್ಲಾಧಿಕಾರಿ ಕಚೇರಿಯತ್ತ ತೆರಳಿ, ಜಿಲ್ಲಾಡಳಿತದ ಮುಖಾಂತರ ಸಮರ್ಪಕ ವಿದ್ಯುತ್ ಪೂರೈಸಲು ಒತ್ತಾಯಿಸಿ ರೈತರು ಸರ್ಕಾರಕ್ಕೆ ಮನವಿ ಅರ್ಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com