ರಾಷ್ಟ್ರ ನಾಯಕರ ಕುರಿತು ಅರಿವು ಅಗತ್ಯ

Updated on: 

ಚಿಕ್ಕಮಗಳೂರು: ರಾಷ್ಟ್ರೀಯತೆಯನ್ನು ಉದ್ದೀಪನಗೊಳಿಸುವ, ಸೇವೆಗಾಗಿ ಬಾಳನ್ನು ಅಣಿಗೊಳಿಸುವ ಸೇವಾದಳ ಚಳುವಳಿ ಸಮಾಜದ ಇಂದಿನ ಅಗತ್ಯ ಎಂದು ಭಾರತ ಸೇವಾದಳ ರಾಜ್ಯ ಉಪಾಧ್ಯಕ್ಷ, ಮಾಜಿ ಶಾಸಕ ಐ.ಬಿ. ಶಂಕರ್ ಹೇಳಿದ್ದಾರೆ.
ಭಾರತ ಸೇವಾದಳ ಜಿಲ್ಲಾ ಘಟಕ ಜ. 16ರಿಂದ 22ರವರೆಗೆ ಅಲ್ಲಂಪುರದ ಕುವೆಂಪು ಮಾದರಿ ಶಾಲಾವರಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ಶಿಕ್ಷಣ ತರಬೇತಿ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮಂಗಳವಾರ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ಅರಿವು ಮೂಡಿಸುವುದು ಅಗತ್ಯ: ದೇಶದ ಇತಿಹಾಸ, ರಾಷ್ಟ್ರ ನಾಯಕರ ಬಗ್ಗೆ ಚಿಂತಿಸುವ ಅರಿವು ಮೂಡಿಸುವ ಉದ್ದೇಶದ ಭಾರತ ಸೇವಾದಳ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸೇವೆಯ ಮಹತ್ವ, ಜೀವನಮೌಲ್ಯಗಳ ಬಗ್ಗೆ ಶಾಲಾ ಮಕ್ಕಳಿಗೆ ತರಬೇತಿ ನೀಡುತ್ತಿದೆ. ಮಕ್ಕಳನ್ನು ಅಣಿಗೊಳಿಸುವ ಶಿಕ್ಷಕರಿಗೆ 7 ದಿನಗಳ ತರಬೇತಿ ಶಿಬಿರ ಅರ್ಥಪೂರ್ಣ. ದೇಶದ ಮಕ್ಕಳನ್ನು ರೂಪಿಸುವ ಶಿಲ್ಪಿಗಳಾಗಿರುವ ಶಿಕ್ಷಕರನ್ನು ಗುರುವಿನ ಸ್ಥಾನದಲ್ಲಿಟ್ಟು ಸಮಾಜ ಗೌರವಿಸುತ್ತಿದೆ. ಜವಾಬ್ದಾರಿ ಅರಿತು ಶಿಕ್ಷಕ ವೃಂದ ಭಾವಿ ಪ್ರಜೆಗಳನ್ನು ದೇಶದ ಆಸ್ತಿಯಾಗಿ ರೂಪಿಸಬೇಕು. ಇಲ್ಲಿ ಪಡೆದ ತರಬೇತಿ ಶಾಲಾ ಹಂತದಲ್ಲಿ ಮಕ್ಕಳಿಗೆ ಸಿಗುವಂತಾಗಬೇಕು ಎಂದು ಹೇಳಿದರು.
ಸೌಹಾರ್ಧ ಸಂಬಂಧ ವೃದ್ಧಿ: ಸಮಾರೋಪ ಭಾಷಣ ಮಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ನಾಗೇಶ್, ವಸತಿ ಸಹಿತ ತರಬೇತಿ ಇದಾಗಿದ್ದು, ಶಿಬಿರಾರ್ಥಿಗಳಲ್ಲಿ ಪರಸ್ಪರ ಸ್ನೇಹ ಸಂಬಂಧ, ಸೌಹಾರ್ದ ಸಂಬಂಧ ಬೆಸೆಯುವುದರ ಜೊತೆಗೆ ಹೆಚ್ಚಿನ ವಿಷಯಗಳ ಕಲಿಕೆಗೂ ಸಹಕಾರಿಯಾಗಿದೆ. ಪಠ್ಯದ ಜೊತೆಗೆ ದೈಹಿಕ ಶಿಕ್ಷಣವನ್ನೂ ವಿಷಯವಾಗಿಸಿದ್ದು, ಒಟ್ಟು ಏಳು ವಿಷಯ ನಿಗದಿಸಿ 725 ಅಂಕಗಳಿಗೆ 1 ರಿಂದ 9ನೇ ತರಗತಿಯಲ್ಲಿ ಪರೀಕ್ಷೆಗಳನ್ನು ಇಲಾಖೆ ನಡೆಸುತ್ತಿದೆ ಎಂದರು.
ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಬಿ.ಎಚ್. ನರೇಂದ್ರ ಪೈ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶೀಯ ಚಿಂತನೆಯ ಸೇವಾದಳ ಘಟಕಗಳು ಎಲ್ಲ ಶಾಲೆಗಳಲ್ಲೂ ಸಕ್ರಿಯ ಚಟುವಟಿಕೆ ನಡೆಸುವಂತಾಗಬೇಕು ಎಂದು ಹೇಳಿದರು.
ಸೇವಾದಳ ಜಿಲ್ಲಾ ಕಾರ್ಯದರ್ಶಿ ಹಂಪಯ್ಯ, ಖಜಾಂಚಿ ಎಲ್.ವಿ. ಬಸವರಾಜು, ತಾಲೂಕು ಕಾರ್ಯದರ್ಶಿ ಅಲ್ಲಂಪುರ ಬಸವರಾಜು, ಕಡೂರಿನ ಪ್ರಕಾಶ್ ಮೂರ್ತಿ, ಗವನಹಳ್ಳಿ ರಮೇಶ್, ಚಿಕ್ಕಮಗಳೂರಿನ ಪಿ.ಜಿ. ಸುಮಾರಾಣಿ, ತಿಮ್ಮೇಗೌಡ, ಕುಮಾರಪ್ಪ ಮತ್ತು ಲೋಕೇಶ್ವರಾಚಾರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com