ಚಿಕ್ಕಮಗಳೂರು: ಗಿರಿ ಶ್ರೇಣಿಯ ತಪ್ಪಲಿನಲ್ಲಿರುವ ಸಂರಕ್ಷಿತ ಅರಣ್ಯ ಪ್ರದೇಶವಾದ ಕರಡಿಹಳ್ಳಿ ಕಾವಲ್ನಲ್ಲಿ ಅವ್ಯಾಹತವಾಗಿ ಅರಣ್ಯ ನಾಶವಾಗುತ್ತಿದೆ ಎಂದು ಪರಿಸರಾಸಕ್ತ ಅಲ್ಲಂಪುರ ರಘು ಸೇರಿದಂತೆ ಹಲವರು ಆರೋಪಿಸಿದ್ದಾರೆ.
ಕರಡಿಹಳ್ಳಿ ಕಾವಲ್ನ ರಕ್ಷಿತಾರಣ್ಯ ಪ್ರದೇಶದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಹಿಟಾಚಿ ಯಂತ್ರವೊಂದು ಅಲ್ಲಿನ ಮರಗಳನ್ನೆಲ್ಲಾ ಧರೆಗುರುಳಿಸಿ ಗುಡ್ಡವನ್ನು ಸಮತಟ್ಟು ಮಾಡುತ್ತಿದೆ. ಇದರಿಂದಾಗಿ ಈ ಭಾಗದ ಕಾಡು ದಿನೇ ದಿನೇ ನಾಶವಾಗಲಿದೆ. ಬೆಲೆಬಾಳುವ ಮರಗಳಾದ ಶ್ರೀಗಂಧ ಇನ್ನಿತರೆ ಕಾಡುಜಾತಿಯ ಮರಗಳು ನೆಲಕಚ್ಚಿವೆ ಎಂದು ತಿಳಿಸಿದ್ದಾರೆ.
ಈ ಕರಡಿಹಳ್ಳಿ ಕಾವಲಿನ ರಕ್ಷಿತ ಅರಣ್ಯ ಚುರ್ಚೆಗುಡ್ಡ ರಕ್ಷಿತಾರಣ್ಯದ ಗುಡ್ಡಗಳ ಸಾಲಿನಲ್ಲಿ ಬರುತ್ತದೆ. ಇಲ್ಲಿನ ಅನೇಕ ವನ್ಯಜೀವಿಗಳು, ಸರೀಸೃಪಗಳು, ಆವಾಸಸ್ಥಾನವನ್ನು ಹೊಂದಿವೆ. ಇಂತಹ ಪ್ರದೇಶದಲ್ಲಿ ಬೃಹತ್ ಹಿಟಾಚಿ ಇಲ್ಲಿನ ಪ್ರದೇಶವನ್ನು ಸಮತಟ್ಟು ಮಾಡುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ.
ರಕ್ಷಿತಾರಣ್ಯ ಹಾಳು: ಅರಣ್ಯ ಇಲಾಖೆಯ ದಿವ್ಯ ನಿರ್ಲಕ್ಷ್ಯದ ಪರಿಣಾಮ ಯಾರು ಹೇಳದೇ ಕೇಳದೇ ಇಲ್ಲಿ ಯಂತ್ರ ಬಳಸಿ ಮಣ್ಣನ್ನು ತೆಗೆಯುತ್ತಿರುವ ಉದ್ದೇಶವೇನು? ಅರಣ್ಯ ಇಲಾಖೆ ಅಧಿಕಾರಿಗಳು ಕೂಡಾ ಇದರಲ್ಲಿ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ರಕ್ಷಿತಾರಣ್ಯ ಪ್ರದೇಶವನ್ನೇ ಈ ರೀತಿ ಹಾಳು ಮಾಡುತ್ತಿರುವುದನ್ನು ನೋಡಿದರೆ ಇದರ ಹಿಂದೆ ಭಾರಿ ಷಡ್ಯಂತ್ರ ಅಡಗಿದೆ. 1980ನೇ ಅರಣ್ಯ ಸಂರಕ್ಷಣಾ ಕಾಯ್ದೆ ಪ್ರಕಾರ, ರಕ್ಷಿತಾರಣ್ಯ ಪ್ರದೇಶದಲ್ಲಿ ಯಾವುದೇ ಅರಣ್ಯೇತರ ಚಟುವಟಿಕೆ ನಡೆಸಲು ಅವಕಾಶವಿರುವುದಿಲ್ಲ. ಆದಾಗ್ಯೂ ಇಲ್ಲಿ ರಾಜಾರೋಷವಾಗಿ ಅರಣ್ಯ ನಾಶ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ನಗರದ ಪ್ರಭಾವಿ ಗುತ್ತಿಗೆದಾರರೊಬ್ಬರ ಒಡೆತನದ ಈ ಹಿಟಾಚಿ ಯಂತ್ರ ದಿನನಿತ್ಯ ಮಣ್ಣನ್ನು ತೆಗೆದು ಸಮತಟ್ಟು ಮಾಡುತ್ತಿದೆ. ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಅರಣ್ಯ ನಾಶ ಮಾಡುತ್ತಿರುವುದು ಅರಣ್ಯ ಇಲಾಖೆ ಅಧಿಕಾರಿಗಳು ಕೂಡಾ ಈ ಪ್ರಭಾವಿ ಗುತ್ತಿಗೆದಾರರ ಅಣತಿಯಂತೆ ಕೆಲಸ ಮಾಡುತ್ತಿರುವುದು ನೋಡಿದರೆ ಅರಣ್ಯ ಇಲಾಖೆ ಕೂಡಾ ಅವರಿಗೆ ಶಾಮೀಲಾಗಿರುವುದು ಆ ಸ್ಥಳಕ್ಕೆ ಹೋಗಿ ನೋಡಿದಾಗ ಸಾಮಾನ್ಯ ನಾಗರಿಕನಿಗೂ ಕೂಡಾ ತಿಳಿಯುತ್ತವೆ. ಈ ರೀತಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಅರಣ್ಯ ನಾಶ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾನೂನು ಕ್ರಮ ಜರುಗಿಸಿ: ಈಗಾಗಲೇ ನಾಶ ಮಾಡಿರುವ ಅರಣ್ಯವನ್ನು ಪುನರ್ ಸೃಷ್ಟಿ ಮಾಡಲು ಆಗುವುದಿಲ್ಲ. ಈ ಕೃತ್ಯದಲ್ಲಿ ಭಾಗಿಯಾದವರನ್ನೆಲ್ಲಾ ಬಂಧಿಸಿ ಅರಣ್ಯ ಸಂರಕ್ಷಣಾ ಕಾಯ್ದೆ ಪ್ರಕಾರ ಕಾನೂನು ರೀತಿ ಕ್ರಮ ಜರುಗಿಸಬೇಕು. ಹಿಟಾಚಿ ಯಂತ್ರವನ್ನು ಕೂಡಲೇ ವಶಪಡಿಸಿಕೊಂಡು ಇದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಅರಣ್ಯ ಇಲಾಖೆ ಮೇಲಾಧಿಕಾರಿಗಳು ಶಿಸ್ತಿನ ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ಅರಣ್ಯ ಇಲಾಖೆ ಮುಂದೆ ಈ ಭಾಗದ ಸ್ಥಳೀಯರೆಲ್ಲ ಸೇರಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.