ಚಿಕ್ಕಮಗಳೂರು: ರಾಜ್ಯದಲ್ಲಿ ಮೀನು ಮರಿಗಳ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು ಎಂದು ಯುವಜನ ಸೇವಾ ಮತ್ತು ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದ್ದಾರೆ.
ರಾಜ್ಯದಲ್ಲಿ ಪ್ರತಿ ವರ್ಷ 50 ಕೋಟಿ ಮೀನು ಮರಿಗಳ ಪಾಲನೆಗೆ ಬೇಡಿಕೆ ಇದೆ. ಆದರೆ, ಈಗ 40 ಕೋಟಿ ಮರಿಗಳನ್ನು ಮಾತ್ರ ಉತ್ಪಾದನೆ ಮಾಡಲಾಗುತ್ತಿದೆ. ಬೇಡಿಕೆಗೆ ತಕ್ಕಂತೆ ಮೀನು ಮರಿಗಳನ್ನು ಉತ್ಪಾದನೆ ಮಾಡಲು ಕ್ರಮ ವಹಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೀನುಗಾರಿಕೆ ಇಲಾಖೆಗೆ ಸೇರಿದ 83 ಕೆರೆಗಳು ಹಾಗೂ ಗ್ರಾಮ ಪಂಚಾಯ್ತಿಗಳಿಗೆ ಸೇರಿದ 1765 ಕೆರೆಗಳಿವೆ. ಇಲ್ಲಿ 12 ಸಾವಿರ ಮೀನುಗಾರರು ಇದ್ದು, ಈ ಪೈಕಿ 3 ಸಾವಿರ ಸಕ್ರಿಯ ಮೀನುಗಾರರು ಇದ್ದಾರೆ. ವಾರ್ಷಿಕ 5 ಸಾವಿರ ಮೆಟ್ರಿಕ್ ಟನ್ ಮೀನು ಉತ್ಪಾದನೆ ಮಾಡಲಾಗುತ್ತಿದ್ದು, 8.93 ಲಕ್ಷ ಮೀನು ಮರಿ ಪಾಲನೆ ಮಾಡಲಾಗಿದೆ ಎಂದರು.
28 ಕೋಟಿ ನಷ್ಟ: 2012-13ನೇ ಸಾಲಿನಲ್ಲಿ ಮತ್ಸ್ಯಾಶ್ರಯ ಯೋಜನೆಯಡಿ 50 ಮನೆಗಳನ್ನು ಮೀನುಗಾರರಿಗೆ ಮಂಜೂರು ಮಾಡಲಾಗಿದೆ. ಇಲಾಖೆಯ 77 ಕೆರೆಗಳಲ್ಲಿ 22.58 ಲಕ್ಷ ಮೀನು ಮರಿಗಳನ್ನು ಬಿತ್ತನೆ ಮಾಡಲಾಗಿದೆ ಎಂದು ಹೇಳಿದರು.
ಮಳೆಯಿಂದಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 28 ಕೋಟಿ ರುಪಾಯಿ ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಮಳೆಯಿಂದಾಗಿ ಹಾಳಾಗಿರುವ ರಸ್ತೆ ಹಾಗೂ ಸೇತುವೆಗಳ ದುರಸ್ತಿಗೆ ತುರ್ತಾಗಿ ಹಣದ ಅವಶ್ಯಕತೆ ಇದೆ ಎಂದರು.
ಕಳೆದ ಅವಧಿಯಲ್ಲಿ ಮಂತ್ರಿಗಳು ವಿಧಾನಸೌಧಕ್ಕೆ ಸರಿಯಾಗಿ ಬರುತ್ತಿರಲಿಲ್ಲ. ಈ ಅವಧಿಯಲ್ಲಿ ಆ ರೀತಿಯಲ್ಲಿ ಆಗದಂತೆ ಎಲ್ಲಾ ಮಂತ್ರಿಗಳು ಕಡ್ಡಾಯವಾಗಿ ವಿಧಾನಸೌಧಕ್ಕೆ ಬರಬೇಕೆಂದು ಮುಖ್ಯಮಂತ್ರಿಯವರು ಸೂಚಿಸಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಮೂರ್ತಿ, ಗೌರವಾಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್ ಉಪಸ್ಥಿತರಿದ್ದರು.
Advertisement