ಕ.ಪ್ರ. ವಾರ್ತೆ , ಚಿಕ್ಕಮಗಳೂರು , ನ.3
ಕೆಮ್ಮಣ್ಣುಗುಂಡಿ ರಸ್ತೆ ಅಗಲೀಕರಣ ಮಾಡುವ ಕಾಮಗಾರಿಯನ್ನು ಕೂಡಲೇ ಕೈಬಿಡುವಂತೆ ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಜಿ. ವೀರೇಶ್ ಆಗ್ರಹಿಸಿದ್ದಾರೆ.
ಪಶ್ಚಿಮಘಟ್ಟ ಸಾಲಿನಲ್ಲಿರುವ ಚಂದ್ರದ್ರೋಣ ಪರ್ವತ ಶ್ರೇಣಿಗಳಲ್ಲಿ ರಸ್ತೆಗಳನ್ನು ಅವೈಜ್ಞಾನಿಕವಾಗಿ ಪದೇ ಪದೇ ಅಗಲೀಕರಿಸುವ ಕೆಲಸಕ್ಕೆ ಕೈಹಾಕುತ್ತಿರುವ ಜಿಲ್ಲಾಡಳಿತದ ನಿಲುವನ್ನು ಖಂಡನೀಯ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಸ್ತೆ ಅಗಲೀಕರಣದ ಪರಿಣಾಮ ಗಿರಿಸಾಲಿನಲ್ಲಿ ಬೆಟ್ಟ ಗುಡ್ಡಗಳು, ಝರಿಯುವ ಸಂಭವವೇ ಹೆಚ್ಚು. ಕಳೆದ ವರ್ಷಗಳಲ್ಲಿ ಗಿರಿ ಸಾಲಿನ ರಸ್ತೆಗಳನ್ನು ಅಗಲೀಕರಿಸಿದ ಪರಿಣಾಮ ಅಲ್ಲಲ್ಲಿ ಭೂಕುಸಿತಗಳು ವರದಿಯಾಗಿದೆ. ಈ ಬಗ್ಗೆ ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಂಡು ಗಿರಿಸಾಲುಗಳಲ್ಲಿ ರಸ್ತೆಗಳಲ್ಲಿ ಅಗಲೀಕರಣವನ್ನು ಕೈಗೊಳ್ಳಬಾರದು ಎಂದು ಒತ್ತಾಯಿಸಿದ್ದಾರೆ.
ಕಾಯ್ದೆ ಉಲ್ಲಂಘನೆ: ಕೆಮ್ಮಣ್ಣುಗುಂಡಿ ಅಭಯಾರಣ್ಯ ಪ್ರದೇಶದಲ್ಲಿರುವ ರಸ್ತೆಯನ್ನು ಅಗಲೀಕರಿಸುವ ಕೆಲಸ ಪ್ರಾರಂಭಿಸಿದ್ದು ಇದು ಸ್ಪಷ್ಟವಾಗಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘನೆ ಮಾಡಿದಂತಾಗಿದೆ. ಕೆಮ್ಮಣ್ಣುಗುಂಡಿಯಿಂದ ವಿರೂಪಾಕ್ಷ ಖಾನ್ವರೆಗಿನ ರಸ್ತೆ ಅಭಯಾರಣ್ಯ ಪ್ರದೇಶದಲ್ಲಿ ವಿಶಿಷ್ಟ ಶೋಲಾ ಕಾಡುಗಳಿದ್ದು ಇವುಗಳನ್ನೆಲ್ಲಾ ಪರಿಗಣಿಸದೇ ರಸ್ತೆ ಕಾಮಗಾರಿ ಆರಂಭಿಸಲಾಗಿದೆ. ಇಲ್ಲಿ ಕಾಮಗಾರಿ ಕೈಗೊಳ್ಳಲು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮತಿ ಅಗತ್ಯವಾಗಿದೆ.
ಭದ್ರಾ ವನ್ಯಜೀವಿ ವಿಭಾಗದ ತಣಿಗೆಬೈಲು ವಲಯಕ್ಕೆ ಸೇರುವ ಕೆಮ್ಮಣ್ಣುಗುಂಡಿ ಪ್ರದೇಶದಲ್ಲಿ ರಸ್ತೆ ಅಗಲೀಕರಿಸುವ ಕೆಲಸವನ್ನು ಕೈಬಿಡಬೇಕಿದೆ. ಈ ಬಗ್ಗೆ ಭದ್ರಾ ವನ್ಯಜೀವಿ ವಿಭಾಗದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಗಾಢನಿದ್ರೆಯಲ್ಲಿರುವ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಅವೈಜ್ಞಾನಿಕ ಕಾಮಗಾರಿ: ಜೆಸಿಬಿ ಯಂತ್ರಗಳ ಸಹಾಯದಿಂದ ಬೆಟ್ಟ-ಗುಡ್ಡಗಳನ್ನು ಅಗಲೀಕರಿಸುತ್ತಿದ್ದು ಇದು ಅವೈಜ್ಞಾನಿಕತೆಯಿಂದ ಕೂಡಿದೆ. ಮಳೆಗಾಲದಲ್ಲಿ ಈ ಬೆಟ್ಟ-ಗುಡ್ಡಗಳು ಝರಿಯುವುದರಲ್ಲಿ ಅನುಮಾನವೇ ಇಲ್ಲ. ಗಿರಿಸಾಲಿನ ಮಣ್ಣು ಅತ್ಯಂತ ಮೆದು ಮಣ್ಣಾಗಿದ್ದು ಈ ರೀತಿ ಅಗಲೀಕರಣದಿಂದ ಗುಡ್ಡಗಳೇ ಕುಸಿಯುವ ಸಾಧ್ಯತೆ ಹೆಚ್ಚು. ಈ ಬಗ್ಗೆ ಆಲೋಚಿಸದೇ ಲೋಕೋಪಯೋಗಿ ಇಲಾಖೆ ಜೆಸಿಬಿ ಯಂತ್ರಗಳನ್ನು ಬಳಸಿ ಗಿರಿಸಾಲುಗಳಲ್ಲಿ ರಸ್ತೆಗಳನ್ನು ಕೆರೆದು ಅಗಲೀಕರಿಸುತ್ತಿರುವುದು ಮುಂದಿನ ಪರಿಣಾಮಗಳನ್ನು ಮತ್ತು ಅಪಾಯವನ್ನು ಮನಗೊಂಡಂತೆ ಕಾಣುತ್ತಿಲ್ಲ.
ಚಂದ್ರದ್ರೋಣ ಪರ್ವತ ಶ್ರೇಣಿಯ ರಸ್ತೆಗಳನ್ನು ಅಗಲೀಕರಿಸುವ ಮುನ್ನ ಜಿಲ್ಲಾಡಳಿತ ಒಮ್ಮೆ ಆಲೋಚಿಸಬೇಕು. ರಸ್ತೆ ಅಗಲೀಕರಿಸುವ ಪರಿಣಾಮ ಇಲ್ಲಿನ ಶೋಲಾ ಕಾಡುಗಳಿಗೂ ಮತ್ತು ಹುಲ್ಲುಗಾವಲಿಗೆ ಅಪಾಯ ಉಂಟಾಗುತ್ತದೆ. ಸೂಕ್ಷ್ಮ ಪರಿಸರವನ್ನು ಅರಿಯದೇ ಅವೈಜ್ಞಾನಿಕ ಕಾಮಗಾರಿಗಳನ್ನು ಕೈಗೊಳ್ಳುವುದನ್ನು ಮೊದಲು ನಿಲ್ಲಿಸಬೇಕು. ಈ ಗಿರಿಸಾಲುಗಳಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶಗಳಾಗಿದ್ದು ಇಂತಹ ಪ್ರದೇಶದಲ್ಲಿ ಯಂತ್ರಗಳನ್ನು ಬಳಸಿ ರಸ್ತೆಗಳನ್ನು ಅಗಲೀಕರಿಸುವುದು ಎಷ್ಟು ಸರಿ. ಮಳೆಗಾಲದಲ್ಲಿ ಕೆಲವೆಡೆ ಗಿರಿಸಾಲುಗಳಲ್ಲಿ ರಸ್ತೆಗೆ ಗುಡ್ಡ ಕುಸಿದಿರುವ ಉದಾಹರಣೆಗಳು ಕಣ್ಮುಂದೆಯೇ ಇವೆ ಎಂದು ಹೇಳಿದ್ದಾರೆ.
ಗಿರಿಸಾಲುಗಳಲ್ಲಿ ಯಾವುದೇ ಕೆಲಸ ಕೈಗೊಳ್ಳುವ ಮುನ್ನ ಜಿಲ್ಲಾಡಳಿತ, ಇರುವ ರಸ್ತೆಯೋ ಸಾಕು: ಲೋಕೋಪಯೋಗಿ ಇಲಾಖೆ, ಸಂಬಂಧಪಟ್ಟ ಇಲಾಖೆಗಳು ಆಲೋಚಿಸಬೇಕಿದ್ದು ಎಲ್ಲಿಯೂ ಅವೈಜ್ಞಾನಿಕ ಕಾಮಗಾರಿಗಳನ್ನು ಕೈಗೊಳ್ಳುವುದನ್ನು ಮೊದಲು ಕೈಬಿಡಬೇಕು. ಇರುವ ರಸ್ತೆಗೆ ಉತ್ತಮ ಡಾಂಬರೀಕರಣ ಮಾಡಿದರೆ ಸಾಕು. ಪದೇ ಪದೇ ಅಭಿವೃದ್ದಿ ಹೆಸರಿನಲ್ಲಿ ಗಿರಿಸಾಲಿನ ರಸ್ತೆಗಳನ್ನು ಜೆಸಿಬಿ ಯಂತ್ರಗಳ ಮೂಲಕ ಅಗಲೀಕರಿಸುವುದನ್ನು ಕೈಬಿಡಬೇಕು. ಇನ್ನು ಮುಂದೆ ಈ ರೀತಿ ಅವೈಜ್ಞಾನಿಕ ಕೆಲಸಗಳನ್ನು ಕೈಗೊಳ್ಳಬಾರದೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
Advertisement