ಕಡೂರಿಗೆ ಬಂದ ಭದ್ರೆ

Updated on: 

ಕಡೂರು: ಕಡೂರು - ಬೀರೂರು ಪಟ್ಟಣದ ನಾಗರಿಕರ ಕನಸಿನ ಕೂಸಾಗಿದ್ದ ಭದ್ರಾ ನೀರು ಕಡೂರು ಪಟ್ಟಣದ ಅಧಿಕೃತವಾಗಿ ನಳದಲ್ಲಿ ಬಂದ ಭದ್ರೆಯನ್ನು ಮಹಿಳೆಯರು, ನೂತನ ದಂಪತಿ ಮತ್ತು ನಾಗರಿಕರು ಪೂಜೆ  ಸಲ್ಲಿಸಿ ಕೊಡಗಳಿಗೆ ತುಂಬಿಸಿ ಸಿಹಿ ಹಂಚಿ ಸಂಭ್ರಮಿಸಿ ಹರ್ಷ ವ್ಯಕ್ತಪಡಿಸಿದರು.
ಕಡೂರಿನ ಹಳೇಪೇಟೆ, ರಾಮದೇವರ ಗುಡಿ ಬೀದಿ, ದೊಡ್ಡಪೇಟೆ, ಮೊದಲಿಯಾರ್ ಕಾಲೋನಿ, ಲಕ್ಷ್ಮಿದೇವರ ಗುಡಿ ಬೀದಿ, ಸುಕ್ಕೂರ್‌ಸಾಬ್ ಬೀದಿ ಸೇರಿದಂತೆ ದೊಡ್ಡಪೇಟೆಯ ಹಲವಾರು ವಾರ್ಡುಗಳ ನಲ್ಲಿಗಳಿಗೆ ಅಧಿಕೃತವಾಗಿ ನೀರು ಸರಬರಾಜು ಮಾಡಲಾಯಿತು. ನೂತನವಾಗಿ ಹಸೆಮಣೆ ಏರಿದ ದೊಡ್ಡಪೇಟೆಯ ದಂಪತಿ ಲತಾ, ಬಸವರಾಜು ಸೇರಿದಂತೆ ಮುತ್ತೈದೆಯರು ಶ್ರೀರಾಮ ದೇವರ ಗುಡಿ ಬೀದಿ, ಬೆಂಕಿ ಕಾಲೋನಿ ಮತ್ತಿತರ ವಾರ್ಡುಗಳಿನ ನಲ್ಲಿಗಳಲ್ಲಿ ಹರಿದ ಭದ್ರೆಗೆ ಗಂಗೆಪೂಜೆ ಮಾಡುವ ಮೂಲಕ ಬರಮಾಡಿಕೊಂಡರು.  
ಇದೇ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಕೆ.ಜಯಣ್ಣ, ಸದಸ್ಯ ಈರುಳ್ಳಿ ರಮೇಶ್, ತೋಟದ ಮನೆ ಮೋಹನ್, ಕೋಳಿ ಲೋಕೇಶ್ ಹಾಗೂ ಎಂ.ಸೋಮಶೇಖರ್ ಮಾತನಾಡಿ, 15 ವರ್ಷದ ಸತತ ಪ್ರಯತ್ನದಿಂದ ಬರದ ನಾಡು ಕಡೂರು ಪಟ್ಟಣಕ್ಕೆ ಭದ್ರೆ ಹರಿದು ಬಂದಿರುವುದು ಎಲ್ಲ ನಾಗರಿಕರು, ಹಿರಿಯರು ಮತ್ತು ಜನಪ್ರತಿನಿಧಿಗಳಲ್ಲಿ ಸಂತೋಷ ತಂದಿದೆ ಎಂದರು.
ಹಲವು ವರ್ಷದಿಂದ ಅಯ್ಯನಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ವೇದಾ ಹಳ್ಳದಲ್ಲಿ ನೀರು ಹರಿಯದೆ ಪಂಪ್‌ಹೌಸಿನಿಂದ ನೀರಿನ ಸರಬರಾಜು ಇಲ್ಲದೆ ಜನ ಅನಿವಾರ್ಯವಾಗಿ ಪ್ಲೋರೈಡ್ ಮಿಶ್ರಿತ ನೀರು ಕುಡಿಯುವ ಅನಿವಾರ್ಯತೆ ಉಂಟಾಗಿ ಪುರಸಭೆಗೆ ತಲೆ ನೋವಾಗಿ ಪರಿಣಮಿಸಿತ್ತು ಎಂದು ಹೇಳಿದರು.
ಕಡೂರು - ಬೀರೂರು ಪಟ್ಟಣದ ಕುಡಿಯವ ನೀರಿನ ಸಮಸ್ಯೆ ಅರಿತಿದ್ದ ದಿ. ಶಾಸಕ ಕೆ.ಎಂ.ಕೃಷ್ಣಮೂರ್ತಿ ಅವರ ಅವಿರತ ಪರಿಶ್ರಮದಿಂದ ಇಂದು ಪ್ಲೊರೈಡ್ ಮುಕ್ತ ಶುದ್ಧ ಕುಡಿಯುವ ನೀರು ಹರಿಯುತ್ತಿದೆ. ಬಹುಕಾಲದ ಭಗೀರಥ ಪ್ರಯತ್ನಕ್ಕೆ ಯಶಸ್ಸು ದೊರೆತಿದ್ದು, ಇಂದಿನಿಂದಲೇ ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪುರಸಭೆಯ 4ನೇ ವಾರ್ಡಿನ ಸದಸ್ಯ ತೋಟದ ಮನೆ ಮೋಹನ್, ಕೋಳಿ ಲೋಕೇಶ್ ಮಾತನಾಡಿ, ಶಾಶ್ವತ ಕುಡಿಯುವ ನೀರು ನೀಡಿದ ದಿ. ಕೆ.ಎಂ.ಕೃಷ್ಣಮೂರ್ತಿಯವರನ್ನು ನಾವಿಂದು ಸ್ಮರಣೆ ಮಾಡಿಕೊಳ್ಳಲೇಬೇಕು ಎಂದರು.
ಭದ್ರೆ ನೀರು ತರಲು ಶ್ರಮಿಸಿದ ಕ್ಷೇತ್ರ ಶಾಸಕ ವೈ.ಎಸ್.ವಿ.ದತ್ತ, ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್, ಡಾ. ವೈ.ಸಿ. ವಿಶ್ವನಾಥ್, ಕೆ.ಎಂ.ಕೆಂಪರಾಜು, ಶರತ್ ಕೃಷ್ಣಮೂರ್ತಿ ಹಾಗೂ ಯೋಜನೆಯ ಅಧಿಕಾರಿ ವರ್ಗವನ್ನು ಅಭಿನಂದಿಸಲು ಪುರಸಭೆಯಿಂದ ಅಧಿಕೃತ ಸಮಾರಂಭ ಆಯೋಜಿಸಲು ವಾರದಲ್ಲಿಯೇ ಸರ್ವ ಸದಸ್ಯರ ಸಭೆ ನಡೆಸುವುದಾಗಿ ತಿಳಿಸಿದರು. ಪುರಸಭೆ ಅಧಿಕಾರಿ ನಾಗೇಂದ್ರ, ಮಂಜುನಾಥ್ ಪಟೇಲ್, ಟಿ.ಎನ್.ರಮೇಶ್ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com