ಮಳೆಗೆ ಲಕ್ಷಾಂತರ ರು. ಬೆಳೆ ಹಾನಿ

Updated on: 

ಚಿಕ್ಕಮಗಳೂರು: ಮುಂಗಾರು ಮಳೆ ಕಣ್ಣಾಮುಚ್ಚಲೆ ಆಟದಿಂದಾಗಿ ಜಿಲ್ಲೆಯಲ್ಲಿ ಈವರೆಗೆ ರು. 5.16 ಲಕ್ಷ ದಷ್ಟು ಬೆಳೆ ಹಾನಿ ಸಂಭವಿಸಿದೆ. ಸದ್ಯದ ಅಂದಾಜಿನ ಪ್ರಕಾರ, ಜಿಲ್ಲಾಡಳಿತದಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ 14.16 ಎಕರೆ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ನಷ್ಟವಾಗಿದೆ.
ಈ ವರ್ಷ ನೆರೆಯಿಂದಾಗಿ ಜಿಲ್ಲೆಯಲ್ಲಿ 5 ಮಂದಿ ಮೃತಪಟ್ಟಿದ್ದು, ಅವರ ಕುಟುಂಬಗಳಿಗೆ ರು. 7.50 ಲಕ್ಷ  ಪರಿಹಾರ ವಿತರಣೆ ಮಾಡಲಾಗಿದೆ. 10 ಜಾನುವಾರುಗಳು ಮೃತಪಟ್ಟಿದ್ದು, ಅವುಗಳ ಮಾಲೀಕರಿಗೆ ರು. 1.56 ಲಕ್ಷ ಪರಿಹಾರ ನೀಡಲಾಗಿದೆ. 29 ಮನೆಗಳಿಗೆ ಹಾನಿಯಾಗಿದ್ದು, ರು. 91 ಸಾವಿರ ವಿತರಿಸಲಾಗಿದೆ.
ನಿರೀಕ್ಷೆಯಂತೆ ಜೂನ್ ಮಾಹೆಯಲ್ಲಿ ವಾಡಿಕೆಯಷ್ಟು ಮಳೆ ಬಾರದೆ ರೈತರು ಬಿತ್ತನೆ ಮಾಡಿದ ಬೆಳೆಗಳು ನೀರಿನಲ್ಲಿ ಕರಗಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮುಂಗಾರಿನ ಆರಂಭದಲ್ಲಿ ಬಿತ್ತನೆ ಮಾಡಿರುವ ಎಣ್ಣೆ ಕಾಳು ಬೆಳೆಗಳಿಗೆ ಹಾನಿಯಾಗಿದೆ. ಇತರೆ ಬಿತ್ತನೆ ಮಾಡಿದ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಮಳೆಯ ನೀರಿಕ್ಷೆಯಲ್ಲಿದ್ದರು.
ಜುಲೈ ತಿಂಗಳಲ್ಲಿ ಸತತವಾಗಿ 20 ದಿನ ಸುರಿದ ಮಳೆಯಿಂದಾಗಿ ಬಯಲುಸೀಮೆ ಬೆಳೆಗಳು ಚೇತರಿಸಿಕೊಂಡವು. ಆದರೆ, ಮಲೆನಾಡಿನಲ್ಲಿ ಅಡಕೆ, ತೆಂಗು ಸೇರಿದಂತೆ ಕಾಫಿ ಬೆಳೆಗಳು ಅತಿಯಾದ ಮಳೆಯಿಂದಾಗಿ ತೇವಾಂಶದಲ್ಲಿ ಉಂಟಾದ ಏರುಪೇರಿನಿಂದಾಗಿ ಕೊಳೆ ರೋಗ, ಸೊರಗು ರೋಗಗಳು ಕಾಣಿಸಿಕೊಂಡಿವೆ.
ಶನಿವಾರದಿಂದ ಮಳೆಯ ಆರ್ಭಟ ಕ್ಷಿಣಿಸಿದೆ. ಆದರೆ, ಆಗಾಗ ಬಿಸಿಲು ಮತ್ತು ತುಂತುರು ಮಳೆ ಬೆಳೆಗಳ ಮೇಲೆ ದುಷ್ಪರಿಣಾಮ ಬೀರಿದೆ. ಸದ್ಯದ ಮಳೆಯ ವಾತಾವರಣ ಆಲೂಗೆಡ್ಡೆ ಬೆಳೆಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ.
ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ನದಿಗಳ ನೀರಿನ ಮಟ್ಟ ಇಳಿಮುಖವಾಗುತ್ತಿದೆ. ಸತತವಾಗಿ ಸುರಿದ ಮಳೆಯಿಂದಾಗಿ ಮಲೆನಾಡಿನಲ್ಲಿ ಕಚ್ಚಾ ಮನೆಗಳು ಶಿಥಿಲಗೊಂಡಿದ್ದು, ಇದರಿಂದಾಗಿ ಮನೆಗಳಿಗೆ ಹಾನಿ ಸಂಭವಿಸುವ ಭೀತಿ ಎದುರಾಗಿದೆ.
ಮುಂಗಾರು ಏರುಪೇರು: ಕಾಫಿ ಬೆಳೆಗಾರರ ಗಮನಕ್ಕೆ
ಮುಂಗಾರು ಮಳೆ ಏರುಪೇರಿನಿಂದಾಗಿ ಕಾಫಿ ತೋಟಗಳಲ್ಲಿ ಕಾಯಿಗಳು ಬಲಿಯುವುದಕ್ಕೂ ಮುನ್ನವೇ ಉದುರುವುದು, ಕೊಳೆ ರೋಗ ಮತ್ತು ತೊಟ್ಟು ಕೊಳೆಯುವ ರೋಗ ಉಂಟಾಗಲಿದೆ.
ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ, ಮುಂಗಾರು ಬಿಡುವಾಗುವ ತನಕ ಶಿಫಾರಸು ಮಾಡಿದ ಯಾವುದೇ ಶಿಲೀಂದ್ರ ನಾಶಕಗಳನ್ನು ಸಿಂಪಡಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ರೋಗ ಹರಡುವುದನ್ನು ತಪ್ಪಿಸಲು ಮತ್ತು ಫಸಲು ನಷ್ಟವಾಗುವುದನ್ನು ಕಡಿಮೆ ಮಾಡಲು ಕೆಲವು ಕ್ರಮಗಳನ್ನು ಕಾಫಿ ಸಂಶೋಧನಾ ಸಂಸ್ಥೆ ಶಿಫಾರಸು  ಮಾಡಿದೆ. ಕಾಫಿ ಗಿಡಗಳ ಕೆಳಗೆ ಬಿದ್ದಿರುವ ಕಸವನ್ನು ನಾಲ್ಕು ಗಿಡಗಳ ಮಧ್ಯಭಾಗದಲ್ಲಿ ರಾಶಿ ಮಾಡಿ ಇದರಿಂದ ಗಿಡಗಳ ಸುತ್ತಲು ನೀರು ನಿಲ್ಲುವುದನ್ನು ತಡೆಗಟ್ಟಬಹುದು ಮತ್ತು ಬೇಗ ತೇವ ಆವಿಯಾಗುವುದಕ್ಕೆ ಸಹಕಾರಿಯಾಗುತ್ತದೆ.
ತೊಟ್ಟಿಲು ಗುಂಡಿ, ನೀರಿನ ಚರಂಡಿಯನ್ನು ಶುಚಿಗೊಳಿಸಿ ನೀರು ಬಸಿದು ಹೋಗುವಂತೆ ಮಾಡುವುದರ ಮೂಲಕ ಗಿಡಗಳ ಬೇರುಗಳ ಉಸಿರಾಟಕ್ಕೆ ಅವಕಾಶ ಮಾಡಿ ಕೊಡಬೇಕು.
ಮುಂಗಾರಿನ ಬಿಡುವಿನಲ್ಲಿ ಕೊಳೆ ರೋಗ ಪೀಡಿತ ಜಾಗಕ್ಕೆ 200 ಲೀ. ನೀರಿಗೆ 150- 200 ಗ್ರಾಂ ಬ್ಯಾವಿಸ್ಟಿನ್ ಮಿಶ್ರವನ್ನು ಸಿಂಪಡಿಸಬೇಕು. ಮುಂಗಾರಿನ ಬಿಡುವಿನಲ್ಲಿ ಎಕರೆಗೆ 1 ಚೀಲದಂತೆ ಯೂರಿಯಾ ರಸ ಗೊಬ್ಬರವನ್ನು ಕಾಫಿ ತೋಟಕ್ಕೆ ಹಾಕುವುದು ಸೂಕ್ತ. ಹೆಚ್ಚಿನ ಮಾಹಿತಿಗಾಗಿ ಕಾಫಿ ಮಂಡಳಿ ಸಂಶೋಧನಾ ವಿಭಾಗ, ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯನ್ನು ಸಂಪರ್ಕಿಸಲು ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com