ಚಿಕ್ಕಮಗಳೂರು: ಪ್ರಕೃತಿ ಮೇಲೆ ಮಾನವನ ನಿರಂತರ ದಾಳಿಯಿಂದ, ಅರಣ್ಯ ನಾಶವಾಗುತ್ತಿರುವುದರ ಜೊತೆಗೆ ಪ್ರಕೃತಿಯಲ್ಲಿನ ಆಹಾರ ಸರಪಳಿ ಸಹ ಕಡಿತಗೊಳ್ಳಲು ಕಾರಣವಾಗಿದೆ ಎಂದು ಪ್ರಧಾನ ಹಿರಿಯ ನ್ಯಾಯಾಧೀಶ ಬಿ. ಜಯಂತ ಕುಮಾರ್ ಹೇಳಿದರು.
ನಗರದ ಎಸ್.ಟಿ.ಜೆ. ಮಹಿಳಾ ಪದವಿ ಕಾಲೇಜು ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯಿತಿ, ಅರಣ್ಯ ಇಲಾಖೆ, ವಕೀಲರ ಸಂಘ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಎಸ್.ಟಿ.ಜೆ. ಮಹಿಳಾ ಪದವಿ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಸೋಮವಾರ ನಡೆದ ಜಿಲ್ಲೆಯ ಎಲ್ಲಾ ಶಾಲಾ- ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜು ಪ್ರಾಚಾರ್ಯ ಕೆ.ಎನ್. ಶಿವಣ್ಣ ಅಧ್ಯಕ್ಷತೆ ವಹಿಸಿದ್ದು, ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ತಾವು ತಿಳಿದುಕೊಳ್ಳುವ ಜತೆಗೆ ಸಮಾಜದ ಪ್ರತಿಯೊಬ್ಬರಿಗೂ ಅರಿವು ಮೂಡಿಸಬೇಕೆಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಚ್.ಎಂ. ರಘುನಾಥ್ ಮಾತನಾಡಿ, ಎನ್‌ಎಸ್‌ಎಸ್ ಗೀತೆಯ ಸಾರ ಅರಿತು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ವಲಯ ಅರಣ್ಯಾಧಿಕಾರಿ ಅಬ್ದುಲ್ ಅಜೀಜ್ ಮಾತನಾಡಿ, ನಮ್ಮ ವೈಯಕ್ತಿಕ ಬದುಕಿಗೆ ಎಷ್ಟು ಕಾಳಜಿ ವಹಿಸುತ್ತೇವೆಯೋ ಅಷ್ಟೇ ಕಾಳಜಿಯನ್ನು ಪ್ರಕೃತಿ ಸಂರಕ್ಷಣೆಯಲ್ಲಿಯೂ ವಹಿಸಬೇಕೆಂದು ಹೇಳಿದರು.
ವಿದ್ಯಾರ್ಥಿನಿ ವೀಣಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ರಾಧ್ಯಾಪಕಿ, ಎನ್‌ಎಸ್‌ಎಸ್ ಅಧಿಕಾರಿ ಎಚ್.ಎಂ. ಅಂಬುಜಾಕ್ಷಿ ಸ್ವಾಗತಿಸಿದರು. ಎಂ. ಹನುಮಂತಪ್ಪ ನಿರೂಪಿಸಿದರು. ಜೆ.ಕೆ. ಭಾರತಿ ವಂದಿಸಿದರು.
Advertisement