ಮೂಡಿಗೆರೆ: ಕಳೆದ ಮೂರು ತಿಂಗಳಿನಿಂದ ಮುಚ್ಚಿಹೋಗಿದ್ದ ಕುದುರೆಮುಖ ಕೇಂದ್ರೀಯ ವಿದ್ಯಾಲಯ ಸೋಮವಾರ ಪುನಾರಂಭಗೊಂಡಿದ್ದು, ಶಾಲೆ ಮಕ್ಕಳೇ ಸೇರಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಚಾಲನೆ ನೀಡಿದರು.
ಈ ವಿದ್ಯಾಲಯವನ್ನು ಮುಚ್ಚಿ ಮಕ್ಕಳ ಭವಿಷ್ಯದ ಮೇಲೆ ಕಂಪೆನಿ ಚೆಲ್ಲಾಟ ನಡೆಸಿತು. ಇಲ್ಲಿರುವ ಎಲ್ಲರಿಗೂ ಪುನರ್ವಸತಿ ನೀಡಿ ಶಾಲೆ ಮುಚ್ಚುಲು ಹೊರಟಿತ್ತು. ಆದರೆ ಇದರ ವಿರುದ್ಧ ನಾವು ನಡೆಸಿದ ಸತತ ಹೋರಾಟ, ನಂತರ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಸದಾನಂದಗೌಡರು ಕೆಐಒಸಿಎಲ್ ಮೇಲೆ ಒತ್ತಡ ಹೇರಿದ ಮೇರಿಗೆ ಕಂಪೆನಿ ಒಂದು ವರ್ಷದ ಅವಧಇಗೆ ಶಾಲೆ ಮುಂದುವರಿಸಲು ಒಪ್ಪಿಗೆ ನೀಡಿದೆ ಎಂದರು.
ವಿದ್ಯಾರ್ಥಿನಿ ಪೂರ್ಣಿಮಾ ಮಾತನಾಡಿ, ಕಳೆದ 3 ತಿಂಗಳಿನಿಂದ ಇದ್ದ ಆತಂಕ ದೂರವಾಗಿ ಇಂದು ನಮ್ಮ ಕಣ್ಣಲ್ಲಿ ಆನಂದ ಬಾಷ್ಪ ಬರುತ್ತಿದೆ. ಈ ವಿದ್ಯಾಲಯವನ್ನು ಪ್ರಾರಂಬಿಸಲು ಪ್ರಯತ್ನಿಸಿದ ಎಲ್ಲರನ್ನು ನಾವು ಈ ಸಂದರ್ಭದಲ್ಲಿ ನೆನೆಸಿಕೊಳ್ಳುತ್ತಿದ್ದೆವೆ.
ಈ ವಿದ್ಯಾಲಯವನ್ನು ಕೇವಲ ಒಂದು ವರ್ಷದ ಅವಧಿಗೆ ಮುನ್ನಡೆಸಲು ಕಂಪನಿ ಅನುದಾನ ನೀಡುತ್ತಿದೆ. ಆದ್ದರಿಂದ ಇಲ್ಲಿ ಕಲಿಯುತ್ತಿರುವ ಎಲ್ಲ ವಿದ್ಯಾರ್ಥಿಗಳು ಸೇರಿ ಆದಷ್ಟು ಶೀಘ್ರ ದೆಹಲಿಗೆ ಹೋಗಿ ಪ್ರಧಾನ ಮಂತ್ರಿ ಭೇಟಿಯಾಗಿ ಈ ವಿದ್ಯಾಲಯವನ್ನು ಮುಂದುವರಿಸಲು ಒತ್ತಡ ಹಾಕುತ್ತೇವೆ ಎಂದು ಹೇಳಿದರು.
ತಾಪಂ ಮಾಜಿ ಅಧ್ಯಕ್ಷ ಎಂ.ಎ. ಶೇಷಗಿರಿ, ಕುದುರೆಮುಖ ಕಂಪೆನಿ ಹಣ ಕಾಸಿನ ನೆರವನ್ನು ನೀಡದೆ ಇರುವುದರಿಂದ ಈ ವಿದ್ಯಾಲಯವನ್ನು ಮುಚ್ಚಲಾಗಿತ್ತು. ಇದರಿಂದ ಇಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದ 172 ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿತ್ತು. ಇದನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ನ್ಯಾಯಲಯದ ಮೊರೆ ಕೂಡ ಹೋಗಿದ್ದರು. ನ್ಯಾಯಲಯದಲ್ಲಿ ವಿದ್ಯಾರ್ಥಿಗಳ ಪರ ನ್ಯಾಯವು ಸಿಕ್ಕಿತ್ತು.
ಆದರೆ ಯಾವುದಕ್ಕೂ ಜಗ್ಗದ ಕಂಪನಿ ವಿ ದ್ಯಾಲಯವನ್ನು ಪುನಾರಂಭಿಸಲು ಒಪ್ಪಲಿಲ್ಲ. ಕಾರಣ ಕಂಪೆನಿ ಅನುದಾನ ನೀಡಿರಲಿಲ್ಲ. ಆದರೆ ಎಲ್ಲ ಪಕ್ಷಗಳ ಮುಖಂಡರ ಅವಿರತ ಪ್ರಯತ್ನದಿಂದಾಗಿ ಶಾಲೆ ಮತ್ತೆ ಪುನಾರಂಭಗೊಂಡಿದೆ ಎಂದರು.
ಈ ವಿದ್ಯಾಲಯದಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದ 172 ವಿದ್ಯಾರ್ಥಿಗಳು ಸಂತಸದ ಹೊನಲಲ್ಲಿ ತೇಲಾಡಿದರು.
ಈ ಸಂದರ್ಭದಲ್ಲಿ ಕಂಪೆನಿಯ ಜನರಲ್ ಮ್ಯಾನೇಜರ್ ಬಾಲಕೃಷ್ಣ ಭಟ್, ಡಿಜಿಎಂ ಅಪ್ಪರ್ ಸುಂದರಮ್,ನಾಗೇಶ್‌ಗೌಡ, ಕೆಂಚೇಗೌಡ, ಚಂದ್ರೇಗೌಡ, ಜಗದೀಶ್, ಮಹೇಶ್, ಮಹವೀರ್ ಹಾಗೂ ವಿದ್ಯಾರ್ಥಿಗಳು ಪೋಷಕರು ಇದ್ದರು.
Advertisement